ಜೆಪ್ಪು ಮಹಾಕಾಳಿಪಡ್ಪು ಆಟದ ಮೈದಾನದ ಅಭಿವೃದ್ಧಿಗೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ರೂ. 10 ಲಕ್ಷ ಬಿಡುಗಡೆ

0
10

ಮಂಗಳೂರು : ಜೆಪ್ಪು ಮಹಾಕಾಳಿಪಡ್ಪುವಿನಲ್ಲಿ ಹಲವು ವರ್ಷಗಳಿಂದ ಸ್ಥಳೀಯ ಮಕ್ಕಳು ಹಾಗೂ ಸಾರ್ವಜನಿಕರು ಆಟವಾಡಲು ಬಳಸುತ್ತಿದ್ದ ಆಟದ ಮೈದಾನದ ಅಭಿವೃದ್ಧಿಗಾಗಿ ವಿಧಾನ ಪರಿಷತ್ ಸದಸ್ಯ ಐವನ್ ಡಿʼಸೋಜಾ ಅವರ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ರೂ. 10 ಲಕ್ಷ ಅನುದಾನ ಬಿಡುಗಡೆಗೊಳಿಸಲಾಗಿದೆ. ಈ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಲಾಯಿತು.

ಸ್ಥಳೀಯ ಸಾರ್ವಜನಿಕರ ಬೇಡಿಕೆಯ ಮೇರೆಗೆ ಮೈದಾನವನ್ನು ಅಭಿವೃದ್ಧಿಪಡಿಸಿ, ಕ್ರೀಡಾ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುವ ಉದ್ದೇಶದಿಂದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಮೈದಾನದಲ್ಲಿ ಕ್ರೀಡಾಂಗಣ ಮಾದರಿಯ ವ್ಯವಸ್ಥೆ ಹಾಗೂ ಫ್ಲಡ್‌ಲೈಟ್‌ಗಳನ್ನು ಅಳವಡಿಸುವ ಮೂಲಕ ರಾತ್ರಿ ವೇಳೆಯಲ್ಲಿಯೂ ಕ್ರಿಕೆಟ್ ಸೇರಿದಂತೆ ವಿವಿಧ ಕ್ರೀಡಾ ಚಟುವಟಿಕೆಗಳನ್ನು ನಡೆಸಲು ಅನುಕೂಲ ಕಲ್ಪಿಸುವ ಯೋಜನೆ ರೂಪಿಸಲಾಗಿದೆ.

ನವರಾತ್ರಿ ಹಬ್ಬದ ಸಂದರ್ಭದಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ದೊರೆತಿರುವುದು ಸ್ಥಳೀಯ ಮಕ್ಕಳು, ಯುವಕರು ಹಾಗೂ ಸಾರ್ವಜನಿಕರಲ್ಲಿ ಸಂತಸ ಮೂಡಿಸಿದೆ. ಆಟದ ಮೈದಾನವನ್ನು ಉಳಿಸಿ ಅಭಿವೃದ್ಧಿಪಡಿಸುವುದರ ಜೊತೆಗೆ ಕ್ರೀಡೆ ಮತ್ತು ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಿಗೆ ಬಳಸಿಕೊಳ್ಳಲು ಅನುಕೂಲವಾಗುವಂತೆ ಸುಸಜ್ಜಿತ ಮೈದಾನ ನಿರ್ಮಿಸುವುದು ನಮ್ಮ ಉದ್ದೇಶವಾಗಿದೆ ಎಂದು ಐವನ್ ಡಿʼಸೋಜಾ ತಿಳಿಸಿದರು.

ಮೈದಾನದ ಸಮಗ್ರ ಅಭಿವೃದ್ಧಿಗಾಗಿ ಮಂಗಳೂರು ಮಹಾನಗರ ಪಾಲಿಕೆ ಹಾಗೂ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದಲೂ ಅಗತ್ಯ ಅನುದಾನ ಒದಗಿಸಲು ಪ್ರಯತ್ನಿಸಲಾಗುವುದು. ಸ್ಥಳೀಯ ಯುವಕರು, ಮಕ್ಕಳು ಹಾಗೂ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗುವಂತೆ ಮೈದಾನವನ್ನು ಹಂತ ಹಂತವಾಗಿ ಸುಸಜ್ಜಿತಗೊಳಿಸಲಾಗುವುದು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಕಾರ್ಪೊರೇಟರ್ ಭಾಸ್ಕರ್ ರಾವ್, ಕಾಂಗ್ರೆಸ್ ಪಕ್ಷದ ನಾಯಕರಾದ ಮೊಹಮ್ಮದ್ ನವಾಝ್ (ಜೆಪ್ಪು), ಮನೀಷ್ ರಾಜ್, ಗೋಪಾಲಕೃಷ್ಣ, ಉಮೇಶ್ ಕುಮಾರ್, ಶಾಲಿನಿ, ಅಬ್ದುಲ್ ವಹಾಬ್, ವಸಂತ್ ಕುಮಾರ್, ಕಿಶನ್, ನೆಲ್ಸನ್ ರೋಚ್, ಲತೀಫ್ ಪಟ್ಲ, ಸಲೀಂ ಪಟ್ಲ, ಬಾಬು ಸುವರ್ಣ, ಪ್ರಕಾಶ್, ಕಮಾಲ್, ವಿಜಯ್ (ಮಂಕ್‌ಸ್ಟ್ಯಾಂಡ್), ರಮೇಶ್, ವಿಲ್ಫ್ರೆಡ್ ಡಿʼಸೋಜಾ, ಜೆ. ಇಬ್ರಾಹಿಂ, ಸಿರಿಲ್ ಹಾಗೂ ಅಬ್ದುಲ್ ಬಸೀರ್ ಉಪಸ್ಥಿತರಿದ್ದರು.

ಆದಿಮೇಶ್ವರಿ ಸೇವಾ ಸಮಿತಿ, ಸೌತ್ ಸ್ಟಾರ್ಸ್ ಜೆಪ್ಪು, ಶ್ರೀದೇವಿ ಕ್ರಿಕೆಟರ್ಸ್ ಜೆಪ್ಪು ಹಾಗೂ ಅಂಬೇಡ್ಕರ್ ಗೇಮ್ಸ್ ಕ್ಲಬ್‌ನ ಸದಸ್ಯರು ಸೇರಿದಂತೆ ಸ್ಥಳೀಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.