ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 4 ಕುಟುಂಬಗಳಿಗೆ ರೂ.8 ಲಕ್ಷ ಪರಿಹಾರ

0
7

ಮಂಗಳೂರು : ವಿಧಾನ ಪರಿಷತ್ ಶಾಸಕರಾದ ಐವನ್ ಡಿ’ಸೋಜಾ ಅವರ ಶಿಫಾರಸ್ಸಿನ ಮೇರೆಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಆಕಸ್ಮಿಕ ಮರಣ ಹೊಂದಿದ ಮೂವರ ಕುಟುಂಬಗಳಿಗೆ ಹಾಗೂ ಮೆದುಳಿನ ಕಾಯಿಲೆಯಿಂದ ಬಳಲುತ್ತಿರುವ ಓರ್ವರಿಗೆ ಒಟ್ಟು ರೂ.8 ಲಕ್ಷ ಪರಿಹಾರ ಧನ ಬಿಡುಗಡೆಗೆ ಆದೇಶಿಸಲಾಗಿದೆ ಎಂದು ಐವನ್ ಡಿ’ಸೋಜಾ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಂಗಳೂರಿನ ಬೆಂಗ್ರೆ ನಿವಾಸಿ ಮೊಹಮ್ಮದ್ ಸನಾವುಲ್ಲ ಅವರು ಆ.23ರಂದು ಫುಟ್‌ಬಾಲ್ ಆಡುತ್ತಿದ್ದ ಸಂದರ್ಭದಲ್ಲಿ ಚೆಂಡು ನದಿಗೆ ಬಿದ್ದಿದ್ದು, ಅದನ್ನು ತರಲು ತೆರಳಿದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ನದಿಗೆ ಬಿದ್ದು ಮೃತಪಟ್ಟಿದ್ದರು. ಅವರ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ರೂ.2 ಲಕ್ಷ ಪರಿಹಾರ ಬಿಡುಗಡೆಗೆ ಆದೇಶಿಸಲಾಗಿದೆ.

ಮಂಗಳೂರು ಮರಕಡ ನಿವಾಸಿ ರೋಯಲ್ ಫರ್ನಾಂಡಿಸ್ ಅವರು ಮಾ.31ರಂದು ಫಲ್ಗುಣಿ ನದಿಯಲ್ಲಿ ಮೀನುಗಾರಿಕೆಗೆ ತೆರಳಿದ್ದ ಸಂದರ್ಭದಲ್ಲಿ ದೋಣಿ ದುರಂತದಲ್ಲಿ ನದಿಗೆ ಬಿದ್ದು ಮೃತಪಟ್ಟಿದ್ದರು. ಅವರ ಕುಟುಂಬಕ್ಕೆ ರೂ.2 ಲಕ್ಷ ಪರಿಹಾರ ನೀಡಲು ಆದೇಶಿಸಲಾಗಿದೆ.

ಮಂಗಳೂರು ದೇರೆಬೈಲ್ ನಿವಾಸಿ ಅಂಟೋನಿ ಮಸ್ಕರೇನಸ್ ಅವರು ಮೇ.21ರಂದು ಕಟ್ಟಡ ಕಾಮಗಾರಿ ನಡೆಸುತ್ತಿದ್ದ ವೇಳೆ ಏಕಾಏಕಿ ಕಟ್ಟಡ ಕುಸಿದು ಅದರಡಿ ಸಿಲುಕಿ ಮೃತಪಟ್ಟಿದ್ದರು. ಅವರ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ರೂ.2 ಲಕ್ಷ ಪರಿಹಾರ ಬಿಡುಗಡೆಗೆ ಆದೇಶಿಸಲಾಗಿದೆ.

ಇದೇ ವೇಳೆ ಚಿಕ್ಕಮಗಳೂರು ಜಿಲ್ಲೆಯ ನಿವಾಸಿ ಸುಮಲತಾ ಅವರು ಮೆದುಳಿನ ಕಾಯಿಲೆಯಿಂದ ಬಳಲುತ್ತಿದ್ದು, ಅವರ ಚಿಕಿತ್ಸಾ ವೆಚ್ಚಕ್ಕಾಗಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ರೂ.2 ಲಕ್ಷ ಪರಿಹಾರ ಬಿಡುಗಡೆಗೆ ಆದೇಶಿಸಲಾಗಿದೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಒಟ್ಟು ರೂ.8 ಲಕ್ಷ ಪರಿಹಾರ ಧನ ಬಿಡುಗಡೆಗೆ ಆದೇಶಿಸಿದ್ದಾರೆ ಎಂದು ವಿಧಾನ ಪರಿಷತ್ ಶಾಸಕ ಐವನ್ ಡಿ’ಸೋಜಾ ತಿಳಿಸಿದ್ದಾರೆ.