RTE ಸೀಟು ವಿದ್ಯಾರ್ಥಿನಿಗೆ ಶುಲ್ಕಕ್ಕಾಗಿ ಕಿರುಕುಳ: ನೇಣಿಗೆ ಶರಣು

0
69

ಮದ್ದೂರು:  ಶಾಲಾ ಶುಲ್ಕ ಕಟ್ಟದ ಕಾರಣಕ್ಕೆ ಆಡಳಿತ ಮಂಡಳಿ ನೀಡಿದ ಕಿರುಕುಳದಿಂದ ಬೇಸತ್ತ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಹುಲಿಗೆರೆಪುರ ಗ್ರಾಮದಲ್ಲಿ ಜರುಗಿದೆ. ಅನಿಕೇತನ ವಿದ್ಯಾಸಂಸ್ಥೆಯಲ್ಲಿ ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡುತ್ತಿದ್ದ ಎಚ್.ಎಲ್. ಮಿಲನಾ (15) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ.

ಇದೇ ಗ್ರಾಮದ ಲಕ್ಷ್ಮಿಪ್ರಸಾದ್, ಎಚ್.ಎಸ್.ರಶ್ಮಿ ದಂಪತಿ ಪುತ್ರಿ ಎಚ್.ಎಲ್.ಮಿಲನಾ ಸೇರಿದಂತೆ ಇನ್ನಿಬ್ಬರು ಮಕ್ಕಳಾದ ಮೋಹಿತಾ 7ನೇ ತರಗತಿ, ಪುತ್ರ ಮೋಹಿತ್ 3ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಮಿಲನಾ ಶಿಕ್ಷಣ ಹಕ್ಕು ಕಾಯ್ದೆಯಡಿ ಶಾಲೆಗೆ ಆಯ್ಕೆ ಆಗಿದ್ದರೂ ಸಹ ಶಾಲೆ ಆಡಳಿತ ಮಂಡಳಿ, ಮುಖ್ಯಶಿಕ್ಷಕಿ ಶೈಲಜಾ ಸೇರಿದಂತೆ ಮೂವರು ಶಿಕ್ಷಕರು ಶಾಲಾ ಶುಲ್ಕ ಪಾವತಿ ಮಾಡುವಂತೆ ವಿದ್ಯಾರ್ಥಿನಿಗೆ ಒತ್ತಾಯಿಸಿ ಕಿರುಕುಳ ನೀಡುತ್ತಿದ್ದರು.

ಪ್ರತಿನಿತ್ಯ ಪ್ರಾರ್ಥನಾ ಸಮಯದಲ್ಲಿ ಭಾಗವಹಿಸಲು ಅವಕಾಶ ಕೊಡದೆ ಬಹಿಷ್ಕಾರ ಹಾಕಿದ್ದರು ಎನ್ನಲಾಗಿದೆ. ಶನಿವಾರ ಸಹ ಪ್ರಾರ್ಥನೆಗೆ ಅವಕಾಶ ಕೊಡದ ಕಾರಣ ಮಿಲನಾ ಮಧ್ಯಾಹ್ನ ಶಾಲೆ ಬಿಟ್ಟ ನಂತರ ಮನೆಗೆ ಧಾವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೋಷಕರು ದೂರು ನೀಡಿದ್ದಾರೆ. ಮದ್ದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮೃತ ಬಾಲಕಿಗೆ ಸೂಕ್ತ ನ್ಯಾಯ ದೊರಕಿಸಿಕೊಡುವಂತೆ ದಲಿತ ಸಂಘಟನೆ ಮುಖಂಡರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here