ದಾವಣಗೆರೆ : ಭಾರತೀಯ ಚಲನಚಿತ್ರಗಳಲ್ಲಿ ಸಂಗೀತ ಕ್ಷೇತ್ರದಲ್ಲಿ ಗಾನ ಕೋಗಿಲೆ ಎಸ್.ಜಾನಕಿ ಸಾಧನೆ ಮಾಡಿದ್ದು ಅದ್ಭುತ. ಕಂಠಸಿರಿಯ ಮೂಲಕ ಅಜರಾಮರ ಸ್ಥಾನವನ್ನು ಪಡೆದಿದ್ದು ಒಂದು ಇತಿಹಾಸ. ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ, ಹಿಂದಿ, ತುಳು ಹಲವು ಭಾಷೆಗಳಲ್ಲಿ ಸಾವಿರಾರು ಗೀತೆಗಳನ್ನು ಸಿರಿಕಂಠದೊAದಿಗೆ ಹಾಡಿ ಚಲನಚಿತ್ರ ಸಂಗೀತ ಕ್ಷೇತ್ರದಲ್ಲಿ ಎಸ್.ಜಾನಕಿಯವರು ಅಪಾರ ಕೊಡುಗೆ ನೀಡಿದ್ದಾರೆ ಎಂದು ದಾವಣಗೆರೆಯ ದಕ್ಷಿಣ ಕ್ಷೇತ್ರದ ಶಾಸಕರಾದ ಸಮರ್ಥ್ ಶಾಮನೂರು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು.
ದಾವಣಗೆರೆಯ ಚಲನಚಿತ್ರ ಅಭಿಮಾನಿಗಳ ಕ್ರಿಯಾತ್ಮಕ ಸಂಸ್ಥೆ “ಸಿನಿಮಾ ಸಿರಿ”ಯಿಂದ ದಾವಣಗೆರೆಯ ಗುಂಡಿ ವೃತ್ತದಲ್ಲಿ ಇರುವ ಗುಂಡಿ ಮಹದೇವಪ್ಪ ಛತ್ರದ ಸಭಾಂಗಣದಲ್ಲಿ ಸ್ವರ್ಗಸ್ಥರಾದ ಸ್ವರ ಸಾಮ್ರಾಜ್ಯದ ಗಾನಕೋಗಿಲೆ ಎಸ್. ಜಾನಕಿಯವರ ಭಾವಚಿತ್ರಕ್ಕೆ ಪುಷ್ಪನಮನ ಅರ್ಪಿಸಿ ಸಮರ್ಥ ಮಾತನಾಡಿದರು. ಸಿನಿಮಾಸಿರಿಯ ಅಧ್ಯಕ್ಷರಾದ ಸುರಭಿ ಶಿವಮೂರ್ತಿ ವಹಿಸಿ ಮಾತನಾಡಿ, ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶಂಕರನಾಗ್, ಅನಂತನಾಗ್ ಸೇರಿದಂತೆ ಹಲವು ಚಲನಚಿತ್ರದ ದಿಗ್ಗಜರ ಖ್ಯಾತ ಸಿನಿಮಾಗಳಲ್ಲಿ ಎಸ್.ಜಾನಕಿಯವರ ಹಾಡುಗಳು ಭಾರತೀಯ ಸಂಗೀತಕ್ಕೆ ಅಮೂಲ್ಯ ಕೊಡುಗೆ, ಸಂಪತ್ತಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ದಿನೇಶ್ ಕೆ.ಶೆಟ್ಟಿ, ಮಹಂತ್ ಮೋರ‍್ಸ್ ಮಾಲೀಕರಾದ ಪ್ರಶಾಂತ್ ಪಿ.ಹೆಚ್, ವಿಶ್ವಾಗ್ರ ಸಮೂಹ ಸಂಸ್ಥೆಗಳ ಸಂಸ್ಥಾಪಕರಾದ ಡಾ|| ಶಿವಕುಮಾರ್ ಎ. ಮಾತನಾಡಿ, ಎಸ್.ಜಾನಕಿಯವರಿಗೆ ನಮನ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಿದರು. ಸಿನಿಮಾ ಸಿರಿಯ ಪ್ರಧಾನ ಕಾರ್ಯದರ್ಶಿಯಾಗಿ ಈಶ್ವರಿ ಶಿವಕುಮಾರ್, ಖಜಾಂಚಿಯಾಗಿ ಮಲ್ಲಿಕಾರ್ಜುನ ಗಾಂಧಿ, ಗೌರವ ಅಧ್ಯಕ್ಷರಾದ ಅಂದನೂರು ಮುಪ್ಪಣ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಖ್ಯಾತ ಗಾಯಕಿ, ಗಾಯಕರಾದ ಎಂ.ಜಿ.ಜಗದೀಶ್, ಆರ್.ಟಿ.ಮೃತ್ಯುಂಜಯ, ದೇವರಾಜ್, ಅಮಿತ್‌ಶೇಖರ್, ಜಗದೀಶ್ ಬೇತೂರು, ವಿದೂಷಿ ಸಂಗೀತಾ ರಾಘವೇಂದ್ರ, ರಕ್ಷಾ ಸರಳಾಯ, ನಂದನಾ ಹಂಸಿ ಮತ್ತು ಮೈತ್ರಿ ಮುಂತಾದವರು ಅತ್ಯದ್ಭುತವಾಗಿ ಎಸ್.ಜಾನಕಿಯ ಹಾಡುಗಳನ್ನು ಹಾಡಿ ಪ್ರೇಕ್ಷಕರು ಜನಮೆಚ್ಚುಗೆ ಪಡೆದರು.
ಪ್ರಾರಂಭದಲ್ಲಿ ಖ್ಯಾತ ಗಾಯಕರು ಪ್ರಾರ್ಥನೆ ಮಾಡಿ, ಸಿನಿಮಾಸಿರಿಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈಯವರು ಅಚ್ಚುಕಟ್ಟಾಗಿ ನಿರೂಪಣೆ ಮಾಡಿದರು. ಸಿನಿಮಾಸಿರಿಯ ಪರಿಕಲ್ಪನಾ ನಿರ್ದೇಶಕರಾಗಿ ಹೆಚ್.ವಿ.ಮಂಜುನಾಥಸ್ವಾಮಿಯವರು ಪ್ರಾಸ್ತಾವನೆಯೊಂದಿಗೆ ಗಾನಕೋಗಿಲೆ ಎಸ್.ಜಾನಕಿಯವರ ಸಾಧನೆಯ ಇತಿಹಾಸ ಪರಂಪರೆಯನ್ನು ವ್ಯಕ್ತಪಡಿಸಿ ಕೊನೆಯಲ್ಲಿ ವಂದಿಸಿದರು.

