ಬಸ್ರೂರು : ಕನ್ನಡ ರಾಜ್ಯೋತ್ಸವದ ಸಂಭ್ರಮದ ಅಂಗವಾಗಿ ಲೇಖಕಿ ಸಾರಿಕಾ ಅಶೋಕ್ ಅವರ ಚೊಚ್ಚಲ ಕಾದಂಬರಿ ‘ಹೊಸ್ತಿಲು (ಒಳಗಿನ ಮೌನ ಕಥನ)’ ಪುಸ್ತಕ ಬಿಡುಗಡೆ ಸಮಾರಂಭವನ್ನು ನವೆಂಬರ್ 1ರಂದು ಬಸ್ರೂರಿನ ಮೂಡ್ಕೇರಿಯಲ್ಲಿ ಆಯೋಜಿಸಲಾಗಿದೆ.
ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಕಾರದೊಂದಿಗೆ ನಡೆಯಲಿರುವ ಈ ಕಾರ್ಯಕ್ರಮವು ಭಾನುವಾರ ಸಂಜೆ 5 ಗಂಟೆಗೆ ಶ್ರೀ ಆದಿನಾಥೇಶ್ವರ ದೇವಸ್ಥಾನದಲ್ಲಿ ಜರುಗಲಿದೆ.
ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಉಮೇಶ್ ಪುತ್ರನ್ ಅವರು ಕಾದಂಬರಿಯನ್ನು ಬಿಡುಗಡೆಗೊಳಿಸಲಿದ್ದಾರೆ. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪಕ ಅಧ್ಯಕ್ಷರು ಹಾಗೂ ಹಿರಿಯ ವಕೀಲರಾದ ಎ.ಎಸ್.ಎನ್. ಹೆಬ್ಬಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅಭ್ಯಾಗತರಾಗಿ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು, ಜನಸೇವಾ ಟ್ರಸ್ಟ್ (ರಿ.) ಗಿಳಿಯಾರ್ ಅಧ್ಯಕ್ಷ ವಸಂತ ಗಿಳಿಯಾರ್, ಕೋಟಿ ಚೆನ್ನಯ್ಯ ಪಂಜುರ್ಲಿ ಗರಡಿ ಮೂಡ್ಕೇರಿ ಬಸ್ರೂರು ಅಧ್ಯಕ್ಷ ಬಿ.ಟಿ. ಮಂಜುನಾಥ್, ನೇಕಾರರ ಸಹಕಾರಿ ಸಂಘದ ನಿರ್ದೇಶಕ ರಾಜೇಂದ್ರ ಶೆಟ್ಟಿಗಾರ್, ಯಕ್ಷಗಾನ ಪ್ರಸಂಗಕರ್ತ ಬಸವರಾಜ ಶೆಟ್ಟಿಗಾರ್ ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಹಾಗೂ ನಿವೃತ್ತ ಮುಖ್ಯ ಶಿಕ್ಷಕ ದಿನಕರ ಆರ್. ಶೆಟ್ಟಿ ಮತ್ತು ಕೋಶಾಧಿಕಾರಿ ಹಾಗೂ ನಿವೃತ್ತ ಮುಖ್ಯ ಶಿಕ್ಷಕ ಮಂಜುನಾಥ ಕೆ.ಎಸ್. ಉಪಸ್ಥಿತರಿರಲಿದ್ದಾರೆ.
ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಹೊಸ ಸಾಹಿತ್ಯ ಕೃತಿಯೊಂದು ಓದುಗರ ಕೈ ಸೇರುತ್ತಿರುವುದು ಸಾಹಿತ್ಯಾಸಕ್ತರಲ್ಲಿ ಸಂತಸ ಮೂಡಿಸಿದೆ. ಸಾಹಿತ್ಯಾಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಆಯೋಜಕರು ವಿನಂತಿಸಿದ್ದಾರೆ.

