ಬೇಸಿಗೆಯ ತೀವ್ರ ಬಿಸಿಲಿನಿಂದಾಗಿ ಅನೇಕರು ಬೆವರುಸಾಲೆ (Heat Rash) ಸಮಸ್ಯೆಯಿಂದ ಬಳಲುತ್ತಾರೆ. ಮುಖ, ಕುತ್ತಿಗೆ, ಬೆನ್ನು, ಎದೆ ಹಾಗೂ ತೊಡೆಗಳ ಭಾಗದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಈ ಸಮಸ್ಯೆ ಉರಿ, ತುರಿಕೆ ಹಾಗೂ ಅಸ್ವಸ್ಥತೆಯನ್ನು ಉಂಟುಮಾಡುತ್ತದೆ. ಕೆಲ ಸರಳ ಮನೆಮದ್ದುಗಳ ಮೂಲಕ ಬೆವರುಸಾಲೆಯನ್ನು ನಿಯಂತ್ರಿಸಬಹುದು.
ಬೆವರುಸಾಲೆಯಿಂದ ಪರಿಹಾರ ಪಡೆಯಲು ಬೆಳಿಗ್ಗೆ ಮತ್ತು ರಾತ್ರಿ ಸಮಯದಲ್ಲಿ ತಣ್ಣೀರು ಅಥವಾ ಉಗುರುಬೆಚ್ಚಗಿನ ನೀರಿನಿಂದ ಸ್ನಾನ ಮಾಡುವುದು ಉತ್ತಮ. ಸ್ನಾನದ ವೇಳೆ ರಾಸಾಯನಿಕ ಸೋಪುಗಳ ಬದಲಿಗೆ ಕಡಲೆಹಿಟ್ಟು, ಅರಿಶಿನ, ಮೆಂತ್ಯೆ, ಹೆಸರುಕಾಳಿನ ಪುಡಿ, ಕಹಿಬೇವು, ಶ್ರೀಗಂಧ ಅಥವಾ ಆಯುರ್ವೇದಿಕ ಸೋಪುಗಳನ್ನು ಬಳಸುವುದು ಚರ್ಮಕ್ಕೆ ಒಳ್ಳೆಯದು.
ಕಡಲೆಹಿಟ್ಟಿಗೆ ರೋಸ್ ವಾಟರ್ ಬೆರೆಸಿ ಬೆವರುಸಾಲೆ ಇರುವ ಭಾಗಕ್ಕೆ ಹಚ್ಚಿದರೆ ಉರಿ ಹಾಗೂ ತುರಿಕೆ ಕಡಿಮೆಯಾಗುತ್ತದೆ. ಹಸಿ ಆಲೂಗಡ್ಡೆಯ ರಸವನ್ನು ಹಚ್ಚಿ 10 ರಿಂದ 15 ನಿಮಿಷಗಳ ಬಳಿಕ ತಣ್ಣೀರಿನಿಂದ ತೊಳೆಯುವುದರಿಂದಲೂ ಸಮಸ್ಯೆ ನಿವಾರಣೆಯಾಗಬಹುದು.
ಅರಿಶಿನದಲ್ಲಿ ಬ್ಯಾಕ್ಟೀರಿಯಾ ವಿರೋಧಿ ಹಾಗೂ ನಂಜುನಿರೋಧಕ ಗುಣಗಳಿದ್ದು, ಅದನ್ನು ಅಲೋವೆರಾ ಜೆಲ್ ಜೊತೆ ಮಿಶ್ರಣ ಮಾಡಿ ಹಚ್ಚಿದರೆ ಉತ್ತಮ ಫಲಿತಾಂಶ ದೊರೆಯುತ್ತದೆ. ಸೌತೆಕಾಯಿ ರಸಕ್ಕೆ ಕೆಲವು ಹನಿ ನಿಂಬೆಹಣ್ಣಿನ ರಸ ಸೇರಿಸಿ ಬೆವರುಸಾಲೆ ಮೇಲೆ ಹಚ್ಚುವುದರಿಂದ ಚರ್ಮ ತಂಪಾಗಿ ಉರಿ ಕಡಿಮೆಯಾಗುತ್ತದೆ.
ಇದೇ ವೇಳೆ, ಮುಲ್ತಾನಿ ಮಿಟ್ಟಿ ಮತ್ತು ಅಲೋವೆರಾ ಮಿಶ್ರಣ ಚರ್ಮಕ್ಕೆ ತಂಪು ನೀಡುವುದರ ಜೊತೆಗೆ ಉರಿಯೂತವನ್ನು ಕಡಿಮೆ ಮಾಡುತ್ತದೆ. ತುಳಸಿ ಎಲೆಗಳ ಪೇಸ್ಟ್‌ಗೆ ಜೇನುತುಪ್ಪ ಬೆರೆಸಿ ಹಚ್ಚುವುದರಿಂದಲೂ ಬೆವರುಸಾಲೆ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.
ತೀವ್ರ ಉರಿ, ಸೋಂಕು ಅಥವಾ ಚರ್ಮದ ಸಮಸ್ಯೆ ಹೆಚ್ಚಾದರೆ ವೈದ್ಯರ ಸಲಹೆ ಪಡೆಯುವುದು ಸೂಕ್ತ.

