ಉಡುಪಿ : ಕಾರ್ಯಕ್ರಮವೊಂದಕ್ಕೆ ತೆರಳಿ ಸ್ಕೂಟರ್‌ನಲ್ಲಿ ವಾಪಸ್ ತೆರಳುತ್ತಿದ್ದ ವೇಳೆ ಸ್ಕೂಟರ್ ನಿಯಂತ್ರಣ ತಪ್ಪಿ ತಾಯಿ ಹಾಗೂ ಮೂರು ವರ್ಷದ ಮಗು ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಮರವಂತೆ ಗ್ರಾಮದ ರಜಿನಾ ಅವರ ಸ್ಕೂಟರ್‌ನಲ್ಲಿ ನಿಶಾತುಲ್ ಫಾತಿಮಾ (24) ಹಾಗೂ ಅವರ ಮಗಳು ಫಾತಿಮಾ ಹಮ್ದಾ ಸಜ್ರಾ (3) ಅವರು ಜನ್ಸಾಲೆಗೆ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದರು.
ಆ.28ರಂದು ಕಾರ್ಯಕ್ರಮ ಮುಗಿಸಿ ಮರವಂತೆಗೆ ವಾಪಸ್ ತೆರಳುತ್ತಿದ್ದ ವೇಳೆ ಮೂಡುಬಗೆ ವಿವೇಕನಗರದ ಬಳಿ ಸ್ಕೂಟರ್ ನಿಯಂತ್ರಣ ತಪ್ಪಿದೆ. ಈ ಸಂದರ್ಭದಲ್ಲಿ ಮಗಳನ್ನು ಹಿಡಿದುಕೊಂಡಿದ್ದ ತಾಯಿ ನಿಶಾತುಲ್ ಫಾತಿಮಾ ಅವರು ಸ್ಕೂಟರ್‌ನಿಂದ ಜಿಗಿದಿದ್ದು, ಪರಿಣಾಮ ತಾಯಿ ಹಾಗೂ ಮಗು ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಪಘಾತದಲ್ಲಿ ಗಾಯಗೊಂಡ ಇಬ್ಬರನ್ನೂ ತಕ್ಷಣ ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಬಳಿಕ ನಿಶಾತುಲ್ ಫಾತಿಮಾ ಅವರ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ಕುರಿತು ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

