ಮೂರು ಗ್ರಾಮ ಪಂಚಾಯಿತಿಗಳಿಗೆ ಲೋಕಾಯುಕ್ತರ ದಾಳಿ

0
72

ನೆಲ್ಯಾಡಿ : ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿ, ಶಿರಾಡಿ ಹಾಗೂ ಮರ್ದಾಳ ಗ್ರಾಮ ಪಂಚಾಯಿತಿಗಳಿಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ಕೈಗೊಂಡಿದ್ದಾರೆ.

ಲೋಕಾಯುಕ್ತ ಪೊಲೀಸರ ತಂಡವು ಮೂರು ಗ್ರಾಮ ಪಂಚಾಯಿತಿಗಳ ಕಚೇರಿಗಳಿಗೆ ಭೇಟಿ ನೀಡಿ ವಿವಿಧ ಆಡಳಿತಾತ್ಮಕ ದಾಖಲೆಗಳು ಹಾಗೂ ಕಡತಗಳನ್ನು ಪರಿಶೀಲಿಸುತ್ತಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿರುವ ಕಾಮಗಾರಿಗಳು, ಸಾರ್ವಜನಿಕ ಸೇವೆಗಳು ಹಾಗೂ ವಿವಿಧ ವ್ಯವಹಾರಗಳಿಗೆ ಸಂಬಂಧಿಸಿದ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ ಎನ್ನಲಾಗಿದೆ.

ಲೋಕಾಯುಕ್ತ ಡಿವೈಎಸ್ಪಿ ಹಲಾಮೂರ್ತಿ ರಾವ್ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ನಾಗರಾಜ್, ಪ್ರಸನ್ನ, ಸುದೀಪ್ ಹಾಗೂ ಜಲಾಲ್ ಒಳಗೊಂಡ ತಂಡ ನೆಲ್ಯಾಡಿ ಗ್ರಾಮ ಪಂಚಾಯಿತಿಯಲ್ಲಿ ದಾಖಲೆಗಳ ಪರಿಶೀಲನೆ ನಡೆಸುತ್ತಿದೆ.

ಲೋಕಾಯುಕ್ತ ಅಧಿಕಾರಿಗಳ ದಾಳಿಯಿಂದ ಮೂರು ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಕೆಲಕಾಲ ಚಟುವಟಿಕೆಗಳು ಚುರುಕುಗೊಂಡಿದ್ದು, ಅಧಿಕಾರಿಗಳು ಹಾಗೂ ಸಿಬ್ಬಂದಿಯಿಂದ ಅಗತ್ಯ ಮಾಹಿತಿಯನ್ನು ಪಡೆದುಕೊಳ್ಳಲಾಗುತ್ತಿದೆ.

ದಾಖಲೆಗಳ ಪರಿಶೀಲನೆ ಪೂರ್ಣಗೊಂಡ ಬಳಿಕ ಲೋಕಾಯುಕ್ತ ಅಧಿಕಾರಿಗಳಿಂದ ಹೆಚ್ಚಿನ ಮಾಹಿತಿ ಲಭ್ಯವಾಗುವ ನಿರೀಕ್ಷೆಯಿದೆ. ದಾಳಿ ನಡೆಸಿರುವ ನಿಖರ ಕಾರಣ ಹಾಗೂ ಪರಿಶೀಲನೆಯ ವೇಳೆ ಪತ್ತೆಯಾದ ಅಂಶಗಳ ಕುರಿತು ಅಧಿಕೃತ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.