ದಸರಾ ರಜೆಯಲ್ಲೂ ಸೆಮಿಸ್ಟರ್ : ಪರೀಕ್ಷೆ ಬಹಿಷ್ಕರಿಸಿ ಬೀದಿಗಿಳಿದ ವಿದ್ಯಾರ್ಥಿನಿಯರು

0
47

ಮಂಗಳೂರು : ದಸರಾ ರಜೆಯ ಅವಧಿಯಲ್ಲಿ ಸೆಮಿಸ್ಟರ್ ಪರೀಕ್ಷೆಗಳನ್ನು ಆಯೋಜಿಸಿರುವ ಮಂಗಳೂರಿನ ಬೆಂದೂರ್‌ವೆಲ್‌ನ ಸೈಂಟ್ ಆಗ್ನೆಸ್ ಕಾಲೇಜಿನ ಆಡಳಿತ ಮಂಡಳಿಯ ನಿರ್ಧಾರದ ವಿರುದ್ಧ ವಿದ್ಯಾರ್ಥಿನಿಯರ ಪ್ರತಿಭಟನೆ ತೀವ್ರಗೊಂಡಿದೆ. ಪರೀಕ್ಷೆಗಳನ್ನು ಮುಂದೂಡುವಂತೆ ಆಗ್ರಹಿಸಿ ವಿದ್ಯಾರ್ಥಿನಿಯರು ಕಾಲೇಜಿನ ಗೇಟ್ ಎದುರು ಪ್ರತಿಭಟನೆ ನಡೆಸುತ್ತಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ.

ಕಾಲೇಜು ಆಡಳಿತ ಮಂಡಳಿಯ ಪರೀಕ್ಷಾ ವೇಳಾಪಟ್ಟಿಗೆ ಆಕ್ಷೇಪ ವ್ಯಕ್ತಪಡಿಸಿರುವ ವಿದ್ಯಾರ್ಥಿನಿಯರು, ದಸರಾ ರಜೆಯ ಸಂದರ್ಭದಲ್ಲಿ ಪರೀಕ್ಷೆಗಳನ್ನು ನಡೆಸುವುದರಿಂದ ರಜೆಯ ಉದ್ದೇಶಕ್ಕೆ ಧಕ್ಕೆಯಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪರೀಕ್ಷೆಗಳನ್ನು ಬಹಿಷ್ಕರಿಸಿ ಕಾಲೇಜಿನ ಪ್ರವೇಶದ್ವಾರದ ಎದುರು ಜಮಾಯಿಸಿದ ವಿದ್ಯಾರ್ಥಿನಿಯರು, ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.

ಪ್ರತಿಭಟನೆಯ ಸಂದರ್ಭದಲ್ಲಿ ಆಕ್ರೋಶಗೊಂಡ ವಿದ್ಯಾರ್ಥಿನಿಯರು ಪೊಲೀಸರ ಜೀಪನ್ನು ತಳ್ಳಿದ ಘಟನೆಯೂ ನಡೆದಿದೆ ಎಂದು ವರದಿಯಾಗಿದೆ. ಇದರಿಂದ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ವಿದ್ಯಾರ್ಥಿನಿಯರ ಹೋರಾಟಕ್ಕೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರು ಬೆಂಬಲ ಸೂಚಿಸಿದ್ದು, ಪ್ರತಿಭಟನೆಗೆ ಮತ್ತಷ್ಟು ಬಲ ಬಂದಿದೆ.

ದಸರಾ ರಜೆಯ ಅವಧಿಯಲ್ಲಿ ಪರೀಕ್ಷೆ ನಡೆಸುವ ನಿರ್ಧಾರವನ್ನು ಕಾಲೇಜು ಆಡಳಿತ ಮಂಡಳಿ ಮರುಪರಿಶೀಲಿಸಬೇಕು ಹಾಗೂ ವಿದ್ಯಾರ್ಥಿಗಳ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂಬುದು ಪ್ರತಿಭಟನಾಕಾರರ ಪ್ರಮುಖ ಆಗ್ರಹವಾಗಿದೆ.

ಪ್ರತಿಭಟನೆ ಹಿನ್ನೆಲೆಯಲ್ಲಿ ಕಾಲೇಜು ಆವರಣದ ಸುತ್ತಮುತ್ತ ಗಮನ ಸೆಳೆದಿದ್ದು, ವಿದ್ಯಾರ್ಥಿಗಳ ಬೇಡಿಕೆಗಳಿಗೆ ಆಡಳಿತ ಮಂಡಳಿ ಯಾವ ರೀತಿಯಲ್ಲಿ ಪ್ರತಿಕ್ರಿಯಿಸಲಿದೆ ಎಂಬುದು ಕುತೂಹಲ ಮೂಡಿಸಿದೆ. ಕಾಲೇಜು ಆಡಳಿತ ಮಂಡಳಿಯ ಅಧಿಕೃತ ಪ್ರತಿಕ್ರಿಯೆ ಹಾಗೂ ಪರೀಕ್ಷೆಗಳ ಕುರಿತು ಮುಂದಿನ ನಿರ್ಧಾರದ ಮಾಹಿತಿ ಲಭ್ಯವಾದ ಬಳಿಕ ಪರಿಸ್ಥಿತಿಯ ಸ್ಪಷ್ಟ ಚಿತ್ರಣ ದೊರೆಯಲಿದೆ.