ಕರಾವಳಿ ಕೊಂಕಣಿಗರ ನಡುವೆ ಯಶಸ್ವೀ ಉದ್ಯಮಿಗಳು ತಮ್ಮ ಗಳಿಕೆಯ ಒಂದಂಶವನ್ನು ‘ಕೆರೆಯ ನೀರನು ಕೆರೆಗೆ ಚೆಲ್ಲಿ’ ಯೆಂಬಂತೆ ಸಮಾಜ ಸೇವೆಗೆ ಮರಳಿಸಲು ಮರೆಯಲಾರರು, ಚಾರ್ಟೆಡ್ ಅಕೌಂಟೆಟ್ ಆಕಾಂಕ್ಷಿಗಳಿಗೆ ಯಾವುದೆ ತಾರತಮ್ಯವಿಲ್ಲದೆ ಮುಕ್ತವಾಗಿ, ನೀಡುವ ಉತ್ತಮ ಗುಣಮಟ್ಟದ ಉಚಿತ ಸಿ. ಎ. ಪವರ್- 25 ತರಬೇತಿಯೆ ಇದಕ್ಕೆ ಸಾಕ್ಷಿಯೆಂದು ದಕ್ಷಿಣ ಕನ್ನಡ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಅನಿಲ್ ಕುಮಾರ್ ಭೂಮರೆಡಿಯವರು ಅಭಿಪ್ರಾಯ ಪಟ್ಟರು. ತರಬೇತಿಯ ಉದ್ಘಾಟನಾ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಅವರು ಯುವಜನರ ಭವಿಷ್ಯತ್ತಿಗಾಗಿ ವಿಶ್ವ ಕೊಂಕಣಿ ಕೇಂದ್ರದ ಈ ವಿಶಿಷ್ಟ ಯೋಜನೆಯನ್ನು ಶ್ಲಾಘಿಸಿದರು. ಇದೇ ಸಂದರ್ಭದಲ್ಲಿ ಲೆಕ್ಕಪರಿಶೋಧಕರೂ ಸೇರಿ ಎಲ್ಲಾ ನಾಗರಿಕರು ಜಾಗೃತರಾಗಿರಬೇಕಾದ ಸೈಬರ್ ವಂಚನೆಗಳ ಬಗ್ಗೆ ಮಾಹಿತಿ ನೀಡಿ ಎಚ್ಚರಿಕೆಯಿಂದಿರಲು ಕರೆ ನೀಡಿದರು.
ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷರಾದ ಸಿ.ಎ. ನಂದಗೋಪಾಲ ಶೆಣೈ ತರಬೇತಿ ಶಿಬಿರವನ್ನು ದೀಪಬೆಳಗಿಸಿ ಉದ್ಘಾಟಿಸಿ ಅತಿಥಿಗಳನ್ನು ಸ್ವಾಗತಿಸುತ್ತಾ, ಸಿ ಎ ಗೊಪಾಲಕೃಷ್ಣ ಭಟ್ ರ ನೇತೃತ್ವದ ತ್ರಿಶಾ ಸಂಸ್ಥೆಯು ಸೂಕ್ತ ಸಂಪನ್ಮೂಲ ವ್ಯಕ್ತಿಗಳನ್ನು ಒದಗಿಸಿ ಪೂರ್ಣ ಪ್ರೊತ್ಸಾಹ ನೀಡುತ್ತಿದ್ದಾರೆ ಹಾಗೂ ಯು.ಕೆ. & ಕೊ. ಸಂಸ್ಥೆಯ ಸಿ ಎ ಉಲ್ಲಾಸ್ ಕಾಮತ್ ಇವರು ಪ್ರಾಯೋಜನೆ ನೀಡುತ್ತಾ ಬಂದಿರುತ್ತಾರೆಯೆಂದು ತಿಳಿಸಿದರು. ಕಳೆದ ಆರನೆಯ ತರಬೇತಿ ಮೂಲಕ ಸಿ.ಎ. ಇಂಟರ್- ಹಾಗೂ ಸಿ ಎ ಅಂತಿಮ ಪರೀಕ್ಷೆಗಳಲ್ಲಿ ತೇರ್ಗಡೆಯಾದವರನ್ನು ಮುಖ್ಯ ಅತಿಥಿಯವರು ಸನ್ಮಾನಿಸಿದರು. ಪ್ರಾಂಶುಪಾಲರಾದ ಪ್ರೊ ಮಂಜುನಾಥ ಕಾಮತ್ ಹಾಗೂ ಪ್ರೊ ಗೌರಿ ಕಾಮತ್ ಇವರು ತರಬೇತಿಯ ಬಗ್ಗೆ ಕಿವಿ ಮಾತು ಹೇಳಿದರು. ಕೇಂದ್ರದ ಉಪಾಧ್ಯಕ್ಷರಾದ ರಮೆಶ್ ಡಿ ನಾಯಕ್ ಹಾಗೂ ಸಿಎಒ ಡಾ ಬಿ ದೇವದಾಸ ಪೈ ಇವರು ಉಪಸ್ಥಿತರಿದ್ದರು. ಶಾನೆಲ್ ಡಿ ಸೊಜ಼ಾ ಕಾರ್ಯಕ್ರಮ ನಿರೂಪಣೆ ಮಾಡಿದರು, ಹರ್ಶಿತಾ ಶೆಣೈ ಪ್ರಾರ್ಥನಾ ಗೀತೆ ಹಾಡಿದರು.
ಇಪ್ಪತ್ತೊಂದು ದಿನಗಳ ಈ ವಿಶೇಷ ತರಬೇತಿಯಲ್ಲಿ ಹೊರರಾಜ್ಯಗಳಿಂದ ಆಹ್ವಾನಿಸಲ್ಪಟ್ಟವರೂ ಸೇರಿ ಹಲವು ಅನುಭವೀ ಉಪನ್ಯಾಸರು ತರಬೇತಿ ನೀಡಲಿದ್ದಾರೆ.

