ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ತಪ್ಪೊಪ್ಪಿಕೊಂಡ ಪ್ರಮುಖ ಆರೋಪಿ ಶಾರೀಕ್!

0
5

ಬೆಂಗಳೂರು: ನಾಲ್ಕು ವರ್ಷಗಳ ಹಿಂದೆ ಮಂಗಳೂರಿನಲ್ಲಿ ನಡೆದಿದ್ದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಪ್ರಮುಖ ಬೆಳವಣಿಗೆ ಕಂಡುಬಂದಿದೆ. ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಮೊಹಮ್ಮದ್ ಶಾರೀಕ್ ತಪ್ಪೊಪ್ಪಿಕೊಂಡಿದ್ದು, ಆತನ ಅರ್ಜಿಯನ್ನು ಎನ್‌ಐಎ ವಿಶೇಷ ನ್ಯಾಯಾಲಯವು ಅಂಗೀಕರಿಸಿದೆ.

ಶಿವಮೊಗ್ಗ ಮೂಲದ 27 ವರ್ಷದ ಶಾರೀಕ್, 2022ರ ನವೆಂಬರ್ 19ರಂದು ಆಟೋರಿಕ್ಷಾದಲ್ಲಿ ಸಾಗಿಸುತ್ತಿದ್ದ ಪ್ರೆಶರ್ ಕುಕ್ಕರ್ ಬಾಂಬ್ ಅವನ ಮಡಿಲಲ್ಲೇ ಸ್ಫೋಟಗೊಂಡ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ. ಟೈಮರ್ ದೋಷದಿಂದ ಸಂಭವಿಸಿದ್ದ ಸ್ಫೋಟದಲ್ಲಿ ಆಟೋ ಚಾಲಕನೂ ಗಂಭೀರವಾಗಿ ಗಾಯಗೊಂಡಿದ್ದ. ನಂತರ ಶಂಕಿತ ಉಗ್ರ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದ ಬಳಿಕ ಎನ್‌ಐಎ (National Investigation Agency) ಅಧಿಕಾರಿಗಳು ಅವನನ್ನು ಬಂಧಿಸಿದ್ದರು.

2024ರ ಏಪ್ರಿಲ್ 20ರಂದು ಪ್ರಕರಣಕ್ಕೆ ಸಂಬಂಧಿಸಿದ ಆರೋಪಗಳ ಕುರಿತು ನ್ಯಾಯಾಲಯ ಪ್ರಶ್ನಿಸಿದಾಗ ಶಾರೀಕ್ ತಾನು ನಿರಪರಾಧಿ ಎಂದು ಹೇಳಿದ್ದ. ಆದರೆ 2025ರ ಡಿಸೆಂಬರ್‌ನಲ್ಲಿ ಕ್ರಿಮಿನಲ್ ಪ್ರೊಸೀಜರ್ ಕೋಡ್‌ನ ಸೆಕ್ಷನ್ 229 ಅಡಿಯಲ್ಲಿ ತಪ್ಪೊಪ್ಪಿಗೆ ಅರ್ಜಿ ಸಲ್ಲಿಸಿ ತನ್ನ ನಿಲುವು ಬದಲಿಸಿದ್ದ ಎಂದು ತಿಳಿದುಬಂದಿದೆ. ಈ ಹಿನ್ನೆಲೆ ಕಳೆದ ಮಾರ್ಚ್ 26ರಂದು ನ್ಯಾಯಾಲಯ ಈ ಅರ್ಜಿಯನ್ನು ಅಂಗೀಕರಿಸಿದೆ.

ತನ್ನ ಅರ್ಜಿಯಲ್ಲಿ ಶಾರೀಕ್, ಕುಕ್ಕರ್‌ನಲ್ಲಿ ಐಇಡಿ ಇಟ್ಟು ಸ್ಫೋಟ ಮಾಡಿದ್ದೇನೆ. ನನಗೆ ಪಶ್ಚಾತ್ತಾಪವಾಗಿದೆ. ಕಾನೂನು ಪ್ರಕಾರ ಕ್ರಮ ಕೈಗೊಳ್ಳಿ ಎಂದು ಹೇಳಿದ್ದಾನೆ. ಮೂರು ತಿಂಗಳ ವಿಚಾರಣೆ ಬಳಿಕ ನ್ಯಾಯಾಲಯವು ಈ ಅರ್ಜಿಯನ್ನು ಮಾನ್ಯಗೊಳಿಸಿದೆ.

ಎನ್​ಐಎ ತನಿಖೆಯಲ್ಲಿ ಬಯಲಾಗಿದ್ದೇನು?

ಎನ್‌ಐಎ ತನಿಖೆಯ ಪ್ರಕಾರ, ಶಾರೀಕ್ ಐಸಿಸ್ ಪ್ರೇರಿತ ಶಿವಮೊಗ್ಗ ಮಾಡ್ಯೂಲ್‌ನ ಸದಸ್ಯನಾಗಿದ್ದು, 2020ರಿಂದ ಹಲವು ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆ. 2022ರ ಸೆಪ್ಟೆಂಬರ್‌ನಲ್ಲಿ ಶಿವಮೊಗ್ಗದಲ್ಲಿ ನಡೆದ ಐಇಡಿ ಪರೀಕ್ಷಾ ಪ್ರಕರಣದಲ್ಲೂ ಅವನ ಕೈವಾಡವಿದೆ. ಅದಕ್ಕೂ ಮೊದಲು 2020ರಲ್ಲಿ ಮಂಗಳೂರಿನಲ್ಲಿ ರಾಷ್ಟ್ರ ವಿರೋಧಿ ಗೋಡೆ ಬರಹ ಪ್ರಕರಣದಲ್ಲೂ ಬಂಧನಕ್ಕೊಳಗಾಗಿದ್ದನು.

ಇದೇ ರೀತಿ 2024ರ ಮಾರ್ಚ್ 1ರಂದು ನಡೆದ ಬೆಂಗಳೂರಿನ ರಾಮೇಶ್ವರಂ ಕಫೆ ಬಾಂಬ್ ಸ್ಫೋಟ ಪ್ರಕರಣದಲ್ಲೂ ಈತ ಕೈಜೋಡಿಸಿರಬಹುದೆಂಬ ಶಂಕೆಯಿದೆ. ಸಧ್ಯಕ್ಕೆ ಈತ ಕುಕ್ಕರ್ ಸ್ಫೋಟದ ಪ್ರಕರಣದಲ್ಲಿ ಮಾತ್ರ ತಪ್ಪೊಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here