ಉಡುಪಿ ಜಿಲ್ಲೆಯ ಮೊದಲ ಮಹಿಳಾ ಕಮರ್ಷಿಯಲ್ ಪೈಲಟ್‌ ಆಗಿ ಕೌಡೂರಿನ ಶೈನಿ ಅಸ್ಮಾಸಲ್ಡಾನ

0
41

ಕಾರ್ಕಳ : ಕೌಡೂರಿನ ಶೈನಿ ಅಸ್ಮಾಸಲ್ಡಾನ ಅವರು ಪೈಲಟ್ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಕಮರ್ಷಿಯಲ್ ಪೈಲಟ್ ಲೈಸೆನ್ಸ್ (CPL) ಪಡೆದುಕೊಂಡಿದ್ದು, ಉಡುಪಿ ಜಿಲ್ಲೆಯಿಂದ ಕಮರ್ಷಿಯಲ್ ಪೈಲಟ್ ಲೈಸೆನ್ಸ್ ಪಡೆದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಕೌಡೂರು ರಂಗನಪಲ್ಕೆಯ ಅಶೋಕ್ ಜಾಕೋಬ್ ಸಲ್ದಾನ ಮತ್ತು ಮರಿಯಾ ಗ್ರೆಟ್ನಾ ಸಲ್ದಾನ ದಂಪತಿಯ ಪುತ್ರಿಯಾಗಿರುವ ಶೈನಿ, ತಮ್ಮ ಶಾಲಾ ಹಾಗೂ ಪಿಯುಸಿ ಶಿಕ್ಷಣವನ್ನು ಕಾರ್ಕಳದ ಕ್ರೈಸ್ಟ್‌ಕಿಂಗ್ ವಿದ್ಯಾಸಂಸ್ಥೆಯಲ್ಲಿ ಪೂರ್ಣಗೊಳಿಸಿದ್ದಾರೆ.

ಪೈಲಟ್ ಆಗುವ ಕನಸನ್ನು ನನಸಾಗಿಸಿಕೊಳ್ಳುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ನಡೆದ ಇಂದಿರಾ ಗಾಂಧಿ ರಾಷ್ಟ್ರೀಯ ಉಡಾನ್ ಅಕಾಡೆಮಿ (IGRUA) ಪ್ರವೇಶ ಪರೀಕ್ಷೆ ಬರೆದು ತೇರ್ಗಡೆಯಾದರು. ಬಳಿಕ 2023ರ ಆಗಸ್ಟ್‌ನಿಂದ ಉತ್ತರ ಪ್ರದೇಶದ ಫುರ್ಸತ್‌ಗಂಜ್‌ನಲ್ಲಿರುವ ಇಂದಿರಾ ಗಾಂಧಿ ರಾಷ್ಟ್ರೀಯ ಉಡಾನ್ ಅಕಾಡೆಮಿಯಲ್ಲಿ ವೃತ್ತಿಪರ ಪೈಲಟ್ ತರಬೇತಿ ಪಡೆದರು.

ತರಬೇತಿಯ ವಿವಿಧ ಹಂತಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಬಳಿಕ ಕಮರ್ಷಿಯಲ್ ಪೈಲಟ್ ಲೈಸೆನ್ಸ್ ಪಡೆದುಕೊಂಡಿರುವ ಶೈನಿ, ಉಡುಪಿ ಜಿಲ್ಲೆಯ ಯುವತಿಯರಿಗೆ ಪೈಲಟ್ ಕ್ಷೇತ್ರದಲ್ಲಿ ಹೊಸ ಪ್ರೇರಣೆಯಾಗಿದ್ದಾರೆ.

ವಿಮಾನಯಾನ ಕ್ಷೇತ್ರದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಶೈನಿ ಅವರ ಸಾಧನೆ ಗಮನ ಸೆಳೆದಿದ್ದು, ಕುಟುಂಬಸ್ಥರು, ಸ್ನೇಹಿತರು ಹಾಗೂ ಕಾರ್ಕಳದ ನಾಗರಿಕರು ಅಭಿನಂದನೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here