ಬೆಚ್ಚಿಬೀಳಿಸಿದ ದಂಧೆ : ಭಯಾನಕ ಆಹಾರ ಕಲಬೆರಕೆ ಜಾಲ ಬಯಲು

0
26
ವಿಡಿಯೋ ಒಳಗೊಂಡಿರುತ್ತದೆ.

ಹೈದರಾಬಾದ್ : ಆಹಾರ ಕಲಬೆರಕೆ ಮೂಲಕ ಸಾರ್ವಜನಿಕರ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿದ್ದ ಎರಡು ಪ್ರತ್ಯೇಕ ಜಾಲಗಳನ್ನು ಹೈದರಾಬಾದ್‌ನಲ್ಲಿ ಪೊಲೀಸರು ಹಾಗೂ ಆಹಾರ ಸುರಕ್ಷತಾ ಅಧಿಕಾರಿಗಳು ಜಂಟಿ ಕಾರ್ಯಾಚರಣೆಯಲ್ಲಿ ಪತ್ತೆಹಚ್ಚಿದ್ದಾರೆ. ಮೇಕೆ ಮಾಂಸದ ಹೆಸರಿನಲ್ಲಿ ಎಮ್ಮೆ ಮಾಂಸವನ್ನು ಬೆರೆಸಿ ಮಾರಾಟ ಮಾಡುತ್ತಿದ್ದ ಜಾಲ ಹಾಗೂ ರಾಸಾಯನಿಕ ಬಳಸಿ ಕೊಳೆತ ಮೀನುಗಳನ್ನು ತಾಜಾ ಮೀನುಗಳಂತೆ ಮಾರಾಟ ಮಾಡುತ್ತಿದ್ದ ಮತ್ತೊಂದು ಜಾಲವನ್ನು ಭೇದಿಸಿ ಐವರನ್ನು ಬಂಧಿಸಲಾಗಿದೆ.

ಹಬೀಬ್‌ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮಲ್ಲೇಪಲ್ಲಿಯಲ್ಲಿ ಮೊಹಮ್ಮದ್ ಉಸ್ಮಾನ್ ಖುರೇಶಿ ಎಂಬಾತ ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ಮೇಕೆ ಮಾಂಸ ಎಂದು ಹೇಳಿ ಎಮ್ಮೆ ಮಾಂಸವನ್ನು ಬೆರೆಸಿ ನಗರದ ಹಲವು ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಿಗೆ ಪೂರೈಕೆ ಮಾಡುತ್ತಿದ್ದಾನೆ ಎಂಬ ಖಚಿತ ಮಾಹಿತಿಯ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದರು.

ಕಾರ್ಯಾಚರಣೆಯಲ್ಲಿ ಸುಮಾರು 50 ಕೆಜಿ ಕಲಬೆರಕೆ ಮಾಂಸವನ್ನು ವಶಪಡಿಸಿಕೊಳ್ಳಲಾಗಿದ್ದು, ಅದರ ಮಾದರಿಗಳನ್ನು ಪರೀಕ್ಷೆಗಾಗಿ ತೆಲಂಗಾಣ ರಾಜ್ಯ ಆಹಾರ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.

ಇನ್ನೊಂದು ಕಾರ್ಯಾಚರಣೆಯಲ್ಲಿ ಮಂಗಳಹಾಟ್ ಪೊಲೀಸ್ ಠಾಣೆ ವ್ಯಾಪ್ತಿಯ ತಾರ ಫಿಶರೀಸ್ ಅಂಗಡಿಯಲ್ಲಿ ಕೊಳೆತ ಮೀನು ಹಾಗೂ ಸೀಗಡಿಗಳನ್ನು ರಾಸಾಯನಿಕ ಬಳಸಿ ತಾಜಾ ಮೀನುಗಳಂತೆ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಬೀಗಂಬಜಾರ್ ಮಾರುಕಟ್ಟೆಯಿಂದ ಅಗ್ಗದ ದರಕ್ಕೆ ಕೊಳೆತ ಮೀನು ಮತ್ತು ಸೀಗಡಿಗಳನ್ನು ಖರೀದಿಸಿ, ದುರ್ವಾಸನೆ ಬಾರದಂತೆ ಹಾಗೂ ತಾಜಾ ಕಾಣುವಂತೆ ಸೋಡಿಯಂ ಬೈಕಾರ್ಬೋನೇಟ್ ರಾಸಾಯನಿಕ ಪುಡಿಯನ್ನು ಬಳಸಲಾಗುತ್ತಿತ್ತು. ಬಳಿಕ ಈ ಮೀನುಗಳನ್ನು ಹೋಟೆಲ್‌ಗಳು ಹಾಗೂ ಕ್ಯಾಟರಿಂಗ್ ಸಂಸ್ಥೆಗಳಿಗೆ ಪೂರೈಕೆ ಮಾಡಲಾಗುತ್ತಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಈ ಪ್ರಕರಣದಲ್ಲಿ ಶಂಕರ್ ಸಿಂಗ್, ಮಾನ್ ಸಿಂಗ್, ಗುಲಾಬ್ ಸಿಂಗ್ ಹಾಗೂ ರೋಹಿತ್ ಸಿಂಗ್ ಎಂಬ ನಾಲ್ವರನ್ನು ಬಂಧಿಸಲಾಗಿದೆ.

ಆರೋಪಿಗಳಿಂದ ಸುಮಾರು 100 ಕೆಜಿ ಕೊಳೆತ ಸೀಗಡಿ, 162 ಕೆಜಿ ಕೊಳೆತ ಮೀನು, 10 ಕೆಜಿ ಸೋಡಿಯಂ ಬೈಕಾರ್ಬೋನೇಟ್ ಪುಡಿ ಹಾಗೂ ಆರು ಚೀಲ ಉಪ್ಪು ಸೇರಿದಂತೆ ಸುಮಾರು ₹90 ಸಾವಿರ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗಿದ್ದು, ಈ ಜಾಲದ ಹಿಂದೆ ಇರುವ ಇತರ ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿದಿದೆ. ಸಾರ್ವಜನಿಕರು ಆಹಾರ ಪದಾರ್ಥಗಳನ್ನು ಖರೀದಿಸುವಾಗ ಎಚ್ಚರಿಕೆ ವಹಿಸಬೇಕು ಹಾಗೂ ಅನುಮಾನಾಸ್ಪದ ಆಹಾರ ಮಾರಾಟ ಕಂಡುಬಂದರೆ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here