ಮಂಗಳೂರು : ಕಲಾ, ಸಂಸ್ಕೃತಿ, ಸಮಾಜಮುಖಿ ಸೇವೆ ಹಾಗೂ ವೈದ್ಯಕೀಯ ಕ್ಷೇತ್ರಗಳಲ್ಲಿ ಸಾಧನೆ ಮೆರೆದಿರುವ ಡಾ. ಅವಿನ್ ಬಿ.ಆರ್. ಆಳ್ವ ಅವರನ್ನು ತುಳುವ ಮಹಾಸಭೆ ಮಂಗಳೂರು ಮಹಾನಗರ ಸಂಚಾಲಕರಾಗಿ ನೇಮಕ ಮಾಡಲಾಗಿದೆ.
ಪ್ರಸ್ತುತ ಅವರು ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಮತ್ತು ಆಸ್ಪತ್ರೆಯಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಸಮುದಾಯ ವೈದ್ಯಕೀಯ ಬೋಧನೆ, ಸಂಶೋಧನೆ, ಗ್ರಾಮೀಣ ಆರೋಗ್ಯ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಗೂ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೈಲೆಟ್ಗಳ ಆರೋಗ್ಯ ತಪಾಸಣೆ ಸೇವೆ ಸಲ್ಲಿಸುತ್ತಿದ್ದಾರೆ.
ಮಂಗಳೂರಿನ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಇದರ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಕಾರ್ಯದರ್ಶಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಕೋವಿಡ್ ವಾರಿಯರ್ ಪ್ರಶಸ್ತಿ ಪಡೆದಿದ್ದಾರೆ. ರಾಜ್ಯ ಕಿರಿಯ ವೈದ್ಯರ ಸಂಘದ ಸಲಹಾ ಮಂಡಳಿ ಸದಸ್ಯರಾಗಿದ್ದಾರೆ.ಟೀಚರ್ಸ್ ಸಹಕಾರ ಬ್ಯಾಂಕ್ ನಿರ್ದೇಶಕರಾಗಿದ್ದಾರೆ. ನಿಟ್ಟೆ ವಿಶ್ವ ವಿದ್ಯಾಲಯದ ಕೆ ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯ NSS ಪ್ರೋಗ್ರಾಂ ಆಫೀಸರ್ ಮತ್ತು ರೆಡ್ ಕ್ರಾಸ್ ಕಾರ್ಯದರ್ಶಿ ಯಾಗಿ ಆರೋಗ್ಯ ಜಾಗೃತಿ, ತುರ್ತು ನಿರ್ವಹಣೆ ಮತ್ತು ಸಾಮಾಜಿಕ ಸೇವಾ ಕಾರ್ಯಕ್ರಮಗಳಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಅದೇ ರೀತಿ ಇವರು ಕೆಲವು ಜರ್ನಲ್‌ಗಳಲ್ಲಿ ಪ್ರಕಟವಾದ ಆರೋಗ್ಯ ಸಂಬಂಧಿತ ಸಂಶೋಧನಾ ಲೇಖನಗಳಲ್ಲಿ ಭಾಗಿಯಾಗಿದ್ದಾರೆ.
ಸಂಘಟನೆ ಹಾಗೂ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಇವರು ರೋಟರಿ ಕ್ಲಬ್ ಮಂಗಳೂರು, ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು, ಬಂಟ್ಸ್ ಮಾತೃ ಸಂಘ ಮಂಗಳೂರು, ರೆಡ್ ಕ್ರಾಸ್ ಉಡುಪಿ ಮತ್ತು ಮಂಗಳೂರಿನ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.
ಡಾ. ಆಳ್ವ ಅವರು ಸ್ವಾತಂತ್ರ್ಯ ಹೋರಾಟಗಾರ ಕುಂಬಳೆ ಗಾಂಧಿ ದಿವಂಗತ ಬಿ. ದೇವಪ್ಪ ಆಳ್ವ ಅವರ ಮೊಮ್ಮಗರಾಗಿದ್ದಾರೆ. ತಂದೆ ಬಿ.ಆರ್.ಎಸ್. ಆಳ್ವ – ಎಸ್.ಡಿ.ಎಮ್. ಕಾಲೇಜಿನ ಮಾಜಿ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಹಾಗೂ ದ.ಕ. ಅಖಿಲ ಕಾಲೇಜು ಒಕ್ಕೂಟದ ಸಂಸ್ಥಾಪಕರು. ತಾಯಿ – ದಿವಂಗತ ಶ್ರೀಮತಿ ಕೆ. ಪ್ರಮೋದ ಆಳ್ವ., ಪತ್ನಿ ಡಾ. ನಿವೆದಿತಾ, ಜನರಲ್ ಸರ್ಜನ್, ಪುತ್ರಿ ಅಮೂಲ್ಯ. ಇವರ ಸಂತೃಪ್ತ ಕುಟುಂಬ. ತುಳುವ ಭಾಷೆ, ಸಂಸ್ಕೃತಿ ಹಾಗೂ ಸಮಾಜಮುಖಿ ಕಾರ್ಯಗಳನ್ನು ಮಂಗಳೂರಿನಲ್ಲಿ ಬಲಪಡಿಸುವ ನಿಟ್ಟಿನಲ್ಲಿ ಮಹಾಸಭೆಯ ಚಟುವಟಿಕೆಗಳನ್ನು ಸಮನ್ವಯಗೊಳಿಸುವ ಹೊಸ ಸಂಚಾಲಕರಾಗಿ ಡಾ. ಅವಿನ್ ಬಿ.ಆರ್. ಆಳ್ವ ಅವರನ್ನು ನೇಮಕ ಮಾಡಲಾಗಿದೆ.
ತುಳುವರ್ಲ್ಡ್ ಫೌಂಡೇಶನ್ ಗೌರವಾಧ್ಯಕ್ಷ ಶ್ರೀಹರಿನಾರಾಯಣ ದಾಸ ಅಸ್ರಣ್ಣ ಕಟೀಲ್, ಅಧ್ಯಕ್ಷ ಸರ್ವೋತ್ತಮ ಶೆಟ್ಟಿ ಅಬುಧಾಬಿ, ಹಾಗೂ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ರಾಜ್ಯ ಅಧ್ಯಕ್ಷ ಡಾ. ವಿ.ವಿ. ಚಿನ್ನಿವಳರ್, ನಿಕಟ ಪೂರ್ವ ಐ.ಎಂ.ಎ ರಾಜ್ಯ ಅಧ್ಯಕ್ಷರು ಡಾ . ಶ್ರೀನಿವಾಸ. ಎಸ್. ಬೆಂಗಳೂರು ಹಾಗೂ ತುಳು ಸಂಘಟನೆಗಳ ರಾಜ್ಯ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಸಂಘಟಕರು ಅಭಿನಂದನೆ ಸಲ್ಲಿಸಿ, ಡಾ. ಆಳ್ವ ಅವರ ನೇತೃತ್ವದಲ್ಲಿ ತುಳುವ ಮಹಾಸಭೆಯ ಚಟುವಟಿಕೆಗಳು ಮಂಗಳೂರಿನಲ್ಲಿ ಮತ್ತಷ್ಟು ಶಕ್ತಿ, ಚೈತನ್ಯ ಮತ್ತು ವಿಸ್ತರಣೆ ಪಡೆಯಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.