ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ, ಅಧಿಕಾರ ಅವಕಾಶ ಸಿಗಬೇಕು: ಕೋಟ‌

0
27

ಬಜಗೋಳಿಯಲ್ಲಿ ಉಚಿತ ವೈದ್ಯಕೀಯ ಶಿಬಿರ

ಕಾರ್ಕಳ: ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಮುಖ್ಯವಾಹಿನಿಗೆ ಬಂದು ಸಾಮಾಜಿಕ ನ್ಯಾಯದೊಂದಿಗೆ ಬದುಕುವಂತಾಗಬೇಕು. ಅವರಿಗೆ ಅಧಿಕಾರ ಹಾಗೂ ಸಮಾನ ಅವಕಾಶಗಳು ದೊರೆಯಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಕಾರ್ಕಳ ತಾಲೂಕಿನ ಮಾಳ ಗ್ರಾಮದ ಕಡಾರಿಯಲ್ಲಿ ಆರೋಗ್ಯಭಾರತಿ ಮಂಗಳೂರು, ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ, ಜಿಲ್ಲಾ ಮಲೆಕುಡಿಯರ ಸಂಘ ಉಡುಪಿ, ರೇಂಜರ್ಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಾವೂರು, ಕಲ್ಪ ಟ್ರಸ್ಟ್ ಮಂಗಳೂರು ಹಾಗೂ ಕೆ.ಎಸ್. ಹೆಗ್ಡೆ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆ ಇವರ ಸಹಯೋಗದಲ್ಲಿ ಸೆ.20ರಂದು ಬಜಗೋಳಿಯ ಮಲೆಕುಡಿಯ ಸಭಾಭವನದಲ್ಲಿ ಆಯೋಜಿಸಿದ್ದ ಉಚಿತ ವೈದ್ಯಕೀಯ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವದ ಜೀವಂತಿಕೆಯ ಮೂಲಕ ಸಮಾಜದಲ್ಲಿ ಬದಲಾವಣೆ ಸಾಧ್ಯವಾಗಿದೆ.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ಕಲ್ಪಿಸುವ ಮೂಲಕ ಅಧಿಕಾರ ಮತ್ತು ಅವಕಾಶಗಳು ದೊರೆಯುವಂತಾಗಿದೆ. ಇದರಿಂದ ಅಸಮಾನತೆ ನಿವಾರಣೆಗೆ ಸಹಕಾರಿಯಾಗಿದ್ದು, ಬುಡಕಟ್ಟು ಸಮುದಾಯದವರೂ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಿದೆ. ಸಾಮಾಜಿಕ ನ್ಯಾಯದ ಆಶಯದಡಿ ಒಳಮೀಸಲಾತಿಯಂತಹ ಕ್ರಮಗಳಿಂದ ಅರ್ಹರಿಗೆ ಅಧಿಕಾರ ದೊರೆಯುವಂತಾಗಿದೆ ಎಂದರು.

ಅದಾನಿ ಗ್ರೂಪ್ ಕರ್ನಾಟಕದ ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಮಾತನಾಡಿ, ಜೀವನ ಅತ್ಯಮೂಲ್ಯವಾಗಿದ್ದು, ಇತ್ತೀಚಿನ ದಿನಗಳಲ್ಲಿ ಅನಾರೋಗ್ಯದ ಪ್ರಮಾಣ ಹೆಚ್ಚುತ್ತಿದೆ. ಆದ್ದರಿಂದ ನಿಯಮಿತ ಆರೋಗ್ಯ ತಪಾಸಣೆ ಹಾಗೂ ಆರೋಗ್ಯದ ಕುರಿತ ಜಾಗೃತಿ ಅಗತ್ಯವಾಗಿದೆ ಎಂದರು.
ಹವಾಮಾನ ಬದಲಾವಣೆ ಹಾಗೂ ಪರಿಸರದ ಮೇಲೆ ಅದರ ಪರಿಣಾಮಗಳ ಬಗ್ಗೆ ಜಾಗೃತಿ ಅಗತ್ಯ. ಅಭಿವೃದ್ಧಿ ಮುಖ್ಯವಾದರೂ ಪರಿಸರವನ್ನು ಹಾಳು ಮಾಡಬಾರದು. ಮಲೆಕುಡಿಯ ಸಮುದಾಯವು ಪರಿಸರವನ್ನು ಕಾಪಾಡಿಕೊಂಡು ಬಂದಿರುವ ಸಮುದಾಯವಾಗಿದೆ. ಶಿಕ್ಷಣ ಮತ್ತು ಆರೋಗ್ಯಕ್ಕೆ ಆದ್ಯತೆ ನೀಡುವುದರ ಜತೆಗೆ ಕೃಷಿ ಭೂಮಿಯನ್ನು ಉಳಿಸಿಕೊಳ್ಳಬೇಕು. ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಮಾನವನ ಹಸಿವು ನೀಗಿಸಲು ಕೃಷಿ ಅಗತ್ಯ. ಆದ್ದರಿಂದ ಪರಿಸರ ಹಾಗೂ ಕೃಷಿ ಬದುಕನ್ನು ಸಂರಕ್ಷಿಸಬೇಕು ಎಂದು ಹೇಳಿದರು.

ಆರೋಗ್ಯಭಾರತಿ ಮಂಗಳೂರು ಗೌರವಾಧ್ಯಕ್ಷ ಡಾ. ಮುರಳಿ ಮೋಹನ್ ಚೂಂತಾರು ಮಾತನಾಡಿ, ಆರೋಗ್ಯ ಶಿಕ್ಷಣ ಪ್ರತಿಯೊಬ್ಬರ ಮೂಲಭೂತ ಹಕ್ಕಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆರೋಗ್ಯ ಸೇವೆ ತಲುಪಿಸುವುದು ಆರೋಗ್ಯಭಾರತಿಯ ಧ್ಯೇಯವಾಗಿದೆ. ಪರಿಸರಕ್ಕೆ ಪೂರಕವಾಗಿ ಬದುಕದಿದ್ದರೆ ಹಲವು ಆರೋಗ್ಯ ಸಮಸ್ಯೆಗಳಿಗೆ ತುತ್ತಾಗಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ತಪಾಸಣಾ ಶಿಬಿರಗಳ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದರು.
ರಾಜ್ಯ ಮಲೆಕುಡಿಯರ ಸಂಘದ ಅಧ್ಯಕ್ಷ ಶ್ರೀಧರ್ ಗೌಡ ಹಾಗೂ ಜಿಲ್ಲಾ ಮಲೆಕುಡಿಯರ ಸಂಘದ ಅಧ್ಯಕ್ಷ ಗಂಗಾಧರ್ ಗೌಡ ಮಾತನಾಡಿ, ಮಲೆಕುಡಿಯ ಸಮುದಾಯದವರು ಸಮಾಜಮುಖಿ ಚಟುವಟಿಕೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಅರಣ್ಯದಂಚಿನಲ್ಲಿ ವಾಸಿಸುವ ಸಮುದಾಯಕ್ಕೆ ಇನ್ನೂ ಮೂಲಭೂತ ಸೌಕರ್ಯಗಳ ಕೊರತೆಯಿದ್ದು, ಇತರ ಸಮುದಾಯಗಳಂತೆ ಮಲೆಕುಡಿಯರ ಅಭಿವೃದ್ಧಿಗೂ ಅನುದಾನ ಹಾಗೂ ಸಿಎಸ್‌ಆರ್ ನಿಧಿಯ ಮೂಲಕ ನೆರವು ಒದಗಿಸಬೇಕು ಎಂದು ಮನವಿ ಮಾಡಿದರು.

ಆರೋಗ್ಯಭಾರತಿ ಉಡುಪಿ ಜಿಲ್ಲಾಧ್ಯಕ್ಷ ಡಾ. ಸತ್ಯನಾರಾಯಣ ಭಟ್ ಮಾತನಾಡಿ, ತುಳುನಾಡಿನ ಸಂಸ್ಕೃತಿ ಪರಿಸರದೊಂದಿಗೆ ಹೊಂದಿಕೊಂಡು ಬದುಕುವ ಪರಂಪರೆಯನ್ನು ಹೊಂದಿದೆ. ಆರೋಗ್ಯವೇ ನಿಜವಾದ ಸಂಪತ್ತಾಗಿದ್ದು, ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.
ಎಎನ್‌ಎಫ್ ಇನ್‌ಸ್ಪೆಕ್ಟರ್ ಯೆಲ್ಲಪ್ಪ ಕೊರವಿ, ಆರೋಗ್ಯಭಾರತಿ ವಿಭಾಗ ಸಂಚಾಲಕ ಪುರುಷೋತ್ತಮ ದೇವಸ್ಯ, ಸ್ತ್ರೀರೋಗ ತಜ್ಞೆ ಡಾ. ನಮೃತಾ ಮತ್ತಿತರರು ಉಪಸ್ಥಿತರಿದ್ದರು. ನಿವೃತ್ತ ಶಿಕ್ಷಕ ನೋಣಯ್ಯ ರೆಂಜಾಳ ಇವರನ್ನು ಸನ್ಮಾನಿಸಲಾಯಿತು.

ಪ್ರಮೀಳಾ ರಾವ್ ಸ್ವಾಗತಿಸಿದರು. ಪುಷ್ಪ ಶ್ರೀಧರ್ ಕಾರ್ಯಕ್ರಮ ನಿರೂಪಿಸಿದರು. ಶಿಬಿರದಲ್ಲಿ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ತಜ್ಞ ವೈದ್ಯರಿಂದ ಎಲುಬು ಮತ್ತು ಕೀಲು, ಚರ್ಮರೋಗ, ಸಾಮಾನ್ಯ ವೈದ್ಯಕೀಯ ಹಾಗೂ ಥೈರಾಯ್ಡ್ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳ ತಪಾಸಣೆ ನಡೆಸಲಾಯಿತು. ಕಾರ್ಕಳ ಕ್ಲಿನಿಕ್‌ನ ಡಾ. ಶ್ರೀಪತಿ ಕಾಮತ್ ಅವರ ನೇತೃತ್ವದಲ್ಲಿ ಕಣ್ಣಿನ ತಪಾಸಣೆಯೂ ನಡೆಯಿತು.