ಪ್ರೇಮ್ ಹುಟ್ಟುಹಬ್ಬದಂದು ಅವರ ನಟನೆಯ ಹೊಸ ಸಿನಿಮಾ ಪೋಸ್ಟರ್ ಒಂದು ಬಿಡುಗಡೆ ಆಗಿದೆ. ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ನಟನೆಯ ‘ಸ್ಪಾರ್ಕ್’ ಸಿನಿಮಾ ಪೋಸ್ಟರ್ ಇತ್ತೀಚೆಗಷ್ಟೆ ಬಿಡುಗಡೆ ಆಯ್ತು. ಈ ಸಿನಿಮಾನಲ್ಲಿ ನಟ ನೆನಪಿರಲಿ ಪ್ರೇಮ್ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದು, ಪ್ರೇಮ್ ಅವರ ಹುಟ್ಟುಹಬ್ಬದಂದು ಪ್ರೇಮ್ ಅವರನ್ನು ಒಳಗೊಂಡ ಸಿನಿಮಾದ ಮಾಸ್ ಪೋಸ್ಟರ್ ಬಿಡುಗಡೆ ಆಯ್ತು. ಆದರೆ ಈ ಪೋಸ್ಟರ್ ಈಗ ವಿವಾದಕ್ಕೆ ಕಾರಣವಾಗಿದೆ.
ಸಿಗಾರ್ ಸೇರುತ್ತಿರುವ ನೆನಪಿರಲಿ ಪ್ರೇಮ್ ಕೈಯಲ್ಲಿ ಒಬ್ಬ ರಾಜಕಾರಣಿಯ ಚಿತ್ರವನ್ನು ಹಿಡಿದುಕೊಂಡು ಅದಕ್ಕೆ ಸಿಗಾರಿನಿಂದ ಬೆಂಕಿ ನೀಡುತ್ತಿರುವ ಚಿತ್ರ ಪೋಸ್ಟರ್ನಲ್ಲಿದೆ. ನೆನಪಿರಲಿ ಪ್ರೇಮ್ ಹಿಡಿದುಕೊಂಡಿರುವ ರಾಜಕಾರಣಿಯ ಚಿತ್ರ ನಟ ರಮೇಶ್ ಇಂದಿರಾ ಅವರದ್ದಾಗಿದೆ. ಆದರೆ ಈ ಪೋಸ್ಟರ್ ನೋಡಿದ ನಟಿ, ನಿರ್ಮಾಪಕಿ ಶ್ರುತಿ ನಾಯ್ಡು ಅಸಮಾಧಾನ ವ್ಯಕ್ತಪಡಿಸಿದ್ದು, ಸಿನಿಮಾ ತಂಡದ ವಿರುದ್ಧ ಕಾನೂನು ಹೋರಾಟದ ಎಚ್ಚರಿಕೆಯನ್ನು ನೀಡಿದ್ದಾರೆ.
‘ಸ್ಪಾರ್ಕ್’ ಸಿನಿಮಾದ ಪೋಸ್ಟರ್ನಲ್ಲಿರುವ ರಮೇಶ್ ಇಂದಿರಾ ಅವರ ಚಿತ್ರ ಅಸಲಿಗೆ ‘ಭೀಮಾ’ ಸಿನಿಮಾದ್ದಾಗಿದೆ. ಆದರೆ ರಮೇಶ್ ಇಂದಿರಾ ಆಗಲಿ, ‘ಭೀಮಾ’ ಸಿನಿಮಾದ ನಿರ್ದೇಶಕ, ನಿರ್ಮಾಪಕರ ಅನುಮತಿಗಳನ್ನು ಪಡೆಯದೆ ‘ಸ್ಪಾರ್ಕ್’ ಸಿನಿಮಾದ ಪೋಸ್ಟರ್‌ನಲ್ಲಿ ಅವರ ಫೋಟೊ ಅನ್ನು ಬಳಸಲಾಗಿದೆ. ಅದೂ ಪೋಸ್ಟರ್ ಅನ್ನು ಬಳಸಿರುವುದು ಮಾತ್ರವೇ ಅಲ್ಲದೆ ವಿಲನ್ ರೀತಿ ತೋರಿಸಲಾಗಿದೆ.
ಶ್ರುತಿ ನಾಯ್ಡು ಅವರು ರಮೇಶ್ ಇಂದಿರಾ ಅವರ ಪತ್ನಿಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಬರೆದುಕೊಂಡಿದ್ದು ಈ ಚಿತ್ರ ತಂಡದವರು ತುಂಬಾ ಅನೈತಿಕವಾಗಿ ನಡೆದುಕೊಂಡಿದ್ದಾರೆ. ಈ ಚಿತ್ರದ ಪೋಸ್ಟರ್‌ನಲ್ಲಿ ಪತ್ರಿಕೆಯ ಕಟಿಂಗ್‌ನಲ್ಲಿರುವ ನಟನ ಅನುಮತಿ ಪಡೆಯದೇ ಇರುವುದು ಸರಿಯಲ್ಲ’ ಎಂದು ಹೇಳಿದ್ದಾರೆ. ರಮೇಶ್ ಇಂದಿಯಾ ‘ಸ್ಪಾರ್ಕ್’ ಸಿನಿಮಾದಲ್ಲಿ ನಟಿಸಲಿದ್ದಾರೆಯೇ ಇಲ್ಲವೇ ಎಂಬುದು ಖಾತ್ರಿ ಇಲ್ಲ, ಅಲ್ಲದೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟ ನೆನಪಿರಲಿ ಪ್ರೇಮ್, ‘ಅದರ ಬಗ್ಗೆ ನನಗೆ ಜಾಸ್ತಿ ಮಾಹಿತಿ ಇಲ್ಲ, ನಮ್ ನಿರ್ದೇಶಕರ ಜೊತೆ ಮಾತಾಡ್ತಿನಿ, ವಿಷಯ ಏನು ಅಂತಾ ತಿಳ್ಕೊಂಡು ಆ ಬಳಿಕ ಪ್ರತಿಕ್ರಿಯೆ ನೀಡುತ್ತೀನಿ, ನಾನು ಬರ್ತ್ ಡೇಯಲ್ಲಿ ಬ್ಯುಸಿ ಇದ್ದ ಕಾರಣ ಡೈರೆಕ್ಟರ್ ಜೊತೆನೂ ಮಾತಾಡೋಕೆ ಆಗಿಲ್ಲ’ ಎಂದಿದ್ದಾರೆ.