ಕಾರ್ಕಳ : ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷದ ಸಂಸ್ಥಾಪಕರು ಹಾಗೂ ಗೌರವಾಧ್ಯಕ್ಷರಾದ ರವಿ ಕೃಷ್ಣ ರೆಡ್ಡಿ ಅವರ 52ನೇ ಹುಟ್ಟುಹಬ್ಬದ ಅಂಗವಾಗಿ ಉಡುಪಿ ಜಿಲ್ಲಾ ಸಮಿತಿ ಹಾಗೂ ಜಿಲ್ಲೆಯ ಎಲ್ಲಾ ತಾಲೂಕು ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಅರ್ಥಪೂರ್ಣ ಸೇವಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಈ ವಿಶೇಷ ಸಂದರ್ಭದಲ್ಲಿ ಕಾರ್ಕಳ ತಾಲೂಕಿನ ಆನೆಕೆರೆ ಶ್ರೀ ಕೃಷ್ಣಮಠದ ಸಮೀಪದ ಚೇತನ ವಿಶೇಷ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿಕಲಚೇತನ ಮಕ್ಕಳಿಗೆ ಮಧ್ಯಾಹ್ನದ ಅನ್ನದಾಸೋಹವನ್ನು ಸಮರ್ಪಿಸಲಾಯಿತು. ಮಕ್ಕಳೊಂದಿಗೆ ಸಮಯ ಕಳೆಯುವ ಮೂಲಕ ಅವರಿಗೆ ಆತ್ಮೀಯತೆ ಮತ್ತು ಪ್ರೀತಿಯ ಸಂದೇಶವನ್ನು ನೀಡಲಾಯಿತು.
“ಮಕ್ಕಳ ಮುಖದಲ್ಲಿನ ನಗುವೇ ನಮ್ಮ ನಾಯಕರಿಗೆ ನೀಡುವ ಅತ್ಯುತ್ತಮ ಜನ್ಮದಿನದ ಉಡುಗೊರೆ” ಎಂಬ ಸಂದೇಶದೊಂದಿಗೆ ಈ ಸೇವಾ ಕಾರ್ಯಕ್ರಮವನ್ನು ನಡೆಸಲಾಯಿತು. ಸಮಾಜದ ದುರ್ಬಲ ವರ್ಗಗಳ ಸೇವೆಯೇ ನಿಜವಾದ ಸಂಭ್ರಮ ಎಂಬ ಉದ್ದೇಶದಿಂದ ಕೆಆರ್‌ಎಸ್ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಕಾರ್ಯಕ್ರಮದಲ್ಲಿ ಕೆಆರ್‌ಎಸ್ ಉಡುಪಿ ಜಿಲ್ಲಾ ಸಮಿತಿ ಹಾಗೂ ಎಲ್ಲಾ ತಾಲೂಕು ಸಮಿತಿಗಳ ಪದಾಧಿಕಾರಿಗಳು, ಸದಸ್ಯರು, ಚೇತನ ವಿಶೇಷ ಶಾಲೆಯ ಆಡಳಿತ ಮಂಡಳಿ, ವ್ಯವಸ್ಥಾಪಕರು, ಸಿಬ್ಬಂದಿ ವರ್ಗ ಹಾಗೂ ಶಾಲೆಯ ಮಕ್ಕಳು ಭಾಗವಹಿಸಿದ್ದರು.
ಈ ಸೇವಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕರಿಸಿದ ಪ್ರತಿಯೊಬ್ಬರಿಗೂ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಉಡುಪಿ ಜಿಲ್ಲಾ ಸಮಿತಿ ಹಾಗೂ ಎಲ್ಲಾ ತಾಲೂಕು ಸಮಿತಿಗಳ ಪರವಾಗಿ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಪಕ್ಷದ ಸಂಸ್ಥಾಪಕರಾದ ರವಿ ಕೃಷ್ಣ ರೆಡ್ಡಿ ಅವರಿಗೆ 52ನೇ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳನ್ನು ತಿಳಿಸಲಾಯಿತು. ಅವರಿಗೆ ಹಾಗೂ ಅವರ ಕುಟುಂಬದವರಿಗೆ ದೀರ್ಘಾಯುಷ್ಯ, ಉತ್ತಮ ಆರೋಗ್ಯ, ಸುಖ, ಶಾಂತಿ ಮತ್ತು ನೆಮ್ಮದಿ ಲಭಿಸಲಿ ಎಂದು ಕಾರ್ಯಕರ್ತರು ಪ್ರಾರ್ಥಿಸಿದರು.

