
ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟ-2026
ವಿದ್ಯಾರ್ಥಿಗಳು ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಕ್ರೀಡೆ ಅತ್ಯಂತ ಅಗತ್ಯವಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಕ್ರೀಡಾ ಮನೋಭಾವವನ್ನು ಬೆಳೆಸಿಕೊಳ್ಳುವುದರ ಜೊತೆಗೆ ಕ್ರೀಡಾರಂಗದಲ್ಲಿ ಸಾಧನೆ ಮಾಡಿ ದೇಶವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುವಂತಾಗಬೇಕು ಎಂದು ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಮೆಸ್ಕಾಂ) ಪುತ್ತೂರು ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ರಾಮಚಂದ್ರ ಎ. ಹೇಳಿದರು.
ಅವರು ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ನಡೆದ ವಾರ್ಷಿಕ ಕ್ರೀಡಾಕೂಟ-2026ರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಕ್ರೀಡಾ ಕೌಶಲ್ಯಗಳು ವ್ಯಕ್ತಿಯನ್ನು ಜೀವನದ ಉನ್ನತ ಶಿಖರಕ್ಕೆ ಕೊಂಡೊಯ್ಯುತ್ತವೆ. ವಿದ್ಯಾರ್ಥಿಗಳು ಅಂತರರಾಷ್ಟ್ರೀಯ ಮಟ್ಟದ ಕ್ರೀಡಾ ವೇದಿಕೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪದಕಗಳನ್ನು ಗೆದ್ದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಬೇಕು. ಕ್ರೀಡೆಯು ಜಾತಿ, ಧರ್ಮ ಮತ್ತು ಪಂಗಡಗಳ ಎಲ್ಲೆಗಳನ್ನು ಮೀರಿದ ಉದಾತ್ತ ಕ್ಷೇತ್ರವಾಗಿದ್ದು, ಇಂದಿನ ಯುವಪೀಳಿಗೆಯ ಆರೋಗ್ಯದ ದೃಷ್ಟಿಯಿಂದ ಕ್ರೀಡೆ ಪ್ರತಿಯೊಬ್ಬರಿಗೂ ಅನಿವಾರ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಪ್ರಧಾನ ಅತಿಥಿಯಾಗಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕಿ ಮಹಾಲಕ್ಷ್ಮಿ ಮಾತನಾಡಿ, ಸ್ಪರ್ಧೆಯಲ್ಲಿ ಗೆಲುವು ಸಾಧಿಸುವುದು ಪ್ರತಿಯೊಬ್ಬರ ಸಹಜ ಹಂಬಲವಾದರೂ ಗೆಲುವೊಂದೇ ಕ್ರೀಡೆಯ ಅಂತಿಮ ಗುರಿಯಲ್ಲ. ಕ್ರೀಡಾಕೂಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು ಅತ್ಯಂತ ಮುಖ್ಯ. ಇಂತಹ ವೇದಿಕೆಗಳಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆ ಹಾಗೂ ಕೌಶಲ್ಯಗಳು ಅನಾವರಣಗೊಳ್ಳಲು ಸಾಧ್ಯ ಎಂದು ಹೇಳಿದರು. ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.
ಕ್ರೀಡಾಕೂಟದ ಅಂಗವಾಗಿ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಕ್ರೀಡಾ ಸಮವಸ್ತ್ರ ಧರಿಸಿ ಶಿಸ್ತುಬದ್ಧ ಪಥಸಂಚಲನ ನಡೆಸಿದರು. ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಕಾಲೇಜನ್ನು ಪ್ರತಿನಿಧಿಸಿದ ಕ್ರೀಡಾಪಟುಗಳು ಕ್ರೀಡಾಜ್ಯೋತಿಯನ್ನು ಪ್ರಜ್ವಲಿಸಿ ಉದ್ಘಾಟಕರಿಗೆ ಹಸ್ತಾಂತರಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ರವಿಶಂಕರ್ ವಿ.ಎಸ್. ಅವರ ಮಾರ್ಗದರ್ಶನದಲ್ಲಿ ಕಾಲೇಜಿನ ಕ್ರೀಡಾ ಕಾರ್ಯದರ್ಶಿ ಕಾರ್ತಿಕ್ ಕೆಮ್ಮಿಂಜೆ ಕ್ರೀಡಾಪ್ರತಿನಿಧಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ದೇವಿಚರಣ್ ರೈ ಎಂ., ದೈಹಿಕ ಶಿಕ್ಷಣ ನಿರ್ದೇಶಕ ಯತೀಶ್ ಕುಮಾರ್ ಬಿ., ಡಾ. ಜ್ಯೋತಿಕುಮಾರಿ ಪಿ.ಸಿ., ಉಪನ್ಯಾಸಕರು, ಉಪನ್ಯಾಸಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾಲೇಜಿನ ಕ್ರೀಡಾ ಜತೆಕಾರ್ಯದರ್ಶಿ ಡಿಂಪಲ್ ಶೆಟ್ಟಿ ಸ್ವಾಗತಿಸಿದರು. ವಿದ್ಯಾರ್ಥಿ ಮನ್ವಿತ್ ವಂದಿಸಿದರು. ಉಪನ್ಯಾಸಕ ಪಿ.ಕೆ. ಪರಮೇಶ್ವರ ಶರ್ಮ ಕಾರ್ಯಕ್ರಮ ನಿರೂಪಿಸಿದರು.
