ಕಡಂದಲೆ: ಪಾಲಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಜೋಡಿಕಟ್ಟೆ ಪ್ರದೇಶದ ದೊಂಪದ ಬಲಿ ಕುಕ್ಕುಂನಂತಾಯ–ಕೊಡಮಂತಾಯ ದೈವಸ್ಥಾನದ ಬಳಿ ಜೆಕೆ ಫ್ರೆಂಡ್ಸ್ ವತಿಯಿಂದ ಮೊದಲನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯು ಅತ್ಯಂತ ಸಂಭ್ರಮದಿಂದ ನಡೆಯಿತು.
ಜೋಡಿಕಟ್ಟೆ ಪರಿಸರದಲ್ಲಿ ಜೆಕೆ ಟೀಮ್ ವಾಲಿಬಾಲ್ ಕ್ರೀಡೆಯ ಮೂಲಕ ತನ್ನದೇ ಆದ ಹೆಸರು ಗಳಿಸಿದ್ದು, ಇದೀಗ ಕ್ರೀಡಾ ಚಟುವಟಿಕೆಗಳ ಜೊತೆಗೆ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನೂ ಆಯೋಜಿಸುವ ಮೂಲಕ ಗಮನ ಸೆಳೆಯುತ್ತಿದೆ.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ KMF ನಿರ್ದೇಶಕ ಕೆ.ಪಿ. ಸುಚರಿತ ಶೆಟ್ಟಿ, ಜೆಕೆ ಫ್ರೆಂಡ್ಸ್ನ ನೂತನ ಅಧ್ಯಕ್ಷರಾದ ರಾಯಿಡಾನ್ ಫೆರ್ನಾಂಡಿಸ್ ಅವರ ನೇತೃತ್ವವನ್ನು ಶ್ಲಾಘಿಸಿದರು.
ಮೊದಲನೇ ವರ್ಷದ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡಿರುವ ರಾಯಿಡಾನ್ ಫೆರ್ನಾಂಡಿಸ್ ಅವರು ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಅತ್ಯಂತ ಉತ್ಸಾಹದಿಂದ ಆಚರಿಸಬೇಕೆಂಬ ಆಸಕ್ತಿಯಿಂದ ಕಾರ್ಯಕ್ರಮದ ಯಶಸ್ಸಿಗಾಗಿ ವಿಶೇಷ ಮುತುವರ್ಜಿ ವಹಿಸಿದರು. ವಿವಿಧ ಸಮುದಾಯದ ಜನರನ್ನು ಒಂದೆಡೆ ಸೇರಿಸಿ, ಎಲ್ಲರ ಸಹಕಾರದೊಂದಿಗೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದವರಾಗಿದ್ದರೂ ಹಿಂದೂ ಧರ್ಮದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯನ್ನು ಎಲ್ಲರನ್ನೂ ಒಗ್ಗೂಡಿಸಿ ಮುನ್ನಡೆಸಿದ ರಾಯಿಡಾನ್ ಫೆರ್ನಾಂಡಿಸ್ ಅವರ ನಡೆ ನಿಜಕ್ಕೂ ಮಾದರಿಯಾಗಿದೆ. ಜಾತಿ, ಧರ್ಮದ ಭೇದವಿಲ್ಲದೆ ಎಲ್ಲರೂ ಒಂದಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮಾಡಿ, ಸಮಾಜದಲ್ಲಿ ಸಾಮರಸ್ಯ, ಸೌಹಾರ್ದತೆ ಹಾಗೂ ಸಮಬಾಳ್ವೆಯ ಸಂದೇಶವನ್ನು ಅವರು ಸಾರಿದ್ದಾರೆ ಎಂದು ಸುಚರಿತ ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು.
ರಾಯಿಡಾನ್ ಫೆರ್ನಾಂಡಿಸ್ ಅವರ ನೇತೃತ್ವದಲ್ಲಿ ಮುಂದಿನ ದಿನಗಳಲ್ಲಿಯೂ ಜೆಕೆ ಫ್ರೆಂಡ್ಸ್ ವತಿಯಿಂದ ಇನ್ನಷ್ಟು ಸಮಾಜಮುಖಿ ಹಾಗೂ ಸೌಹಾರ್ದತೆಯ ಕಾರ್ಯಕ್ರಮಗಳು ನಡೆಯಲಿ ಎಂದು ಅವರು ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಕೆ ಆರ್ ಪಂಡಿತ್ ಹಿರಿಯ ವಕೀಲರು, KMF ನಿರ್ದೇಶಕ ಕೆ ಪಿ ಸುಚರಿತ ಶೆಟ್ಟಿ, ದಿನಕರ ಕುಂಬಾಶಿ ಮುಖ್ಯ ಶಿಕ್ಷಕರು, ಸುಧಾಕರ್ ಪೂಜಾರಿ ಕುಕ್ಕುಂಜೆ, ಸುಧಾಕರ್ ಪೊಸ್ರಾಲ್ ಶಿಕ್ಷಕರು. ಮಾರುತಿ ರಾವ್, ಗಿರಿಜಾ ಪೂಜಾರ್ತಿ,ಸೀತಾರಾಮ್ ಸಾಲ್ಯಾನ್, ವೆಂಕಟೇಶ್ ಕೋಟ್ಯಾನ್, ವೆಂಕಟೇಶ್ ನಾಯ್ಕ್, ಜಗದೀಶ್ ಕಲ್ಲೋಟ್ಟು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಜೆಕೆ ಫ್ರೆಂಡ್ಸ್ನ ಪದಾಧಿಕಾರಿಗಳು, ಸದಸ್ಯರು ಹಾಗೂ ಊರಿನ ಹಿಂದು-ಮುಸ್ಲಿಂ-ಕ್ರಿಶ್ಚಿಯನ್ ಸೇರಿದಂತೆ ವಿವಿಧ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮವನ್ನು ಕಣ್ತುಂಬಿಕೊಂಡರು. ಸೀತಾರಾಮ್ ಸಾಲ್ಯಾನ್, ಸುರೇಂದ್ರ ಭಟ್ ಹಾಗೂ ಅನಿಷ್ ನೆಲ್ಯಾಡಿಕೆ ನಿರೂಪಿಸಿದರು.

