ಹೆಬ್ರಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಹೆಬ್ರಿ ಅರಣ್ಯ ಇಲಾಖೆ ವತಿಯಿಂದ ನೆಲ, ಜಲ, ಪ್ರಾಣಿ ಸಂಕುಲ ಮತ್ತು ವನ್ಯ ಸಂರಕ್ಷಣೆ ಪ್ರಯುಕ್ತ ಯೋಜನೆಯ ಮೂಲಕ ರಾಜ್ಯಾದ್ಯಂತ ಹಮ್ಮಿಕೊಳ್ಳಲಾದ ಲಕ್ಷವೃಕ್ಷ ಗಿಡಗಳ ನಾಟಿ ಕಾರ್ಯಕ್ರಮಕ್ಕೆ ಹೆಬ್ರಿಯಲ್ಲಿ ಚಾಲನೆ ನೀಡಲಾಯಿತು.

ಹೆಬ್ರಿ ಸಾಲುಮರದ ತಿಮ್ಮಕ್ಕ ಪಾರ್ಕಿನಲ್ಲಿ ಶಾಸಕ ಸುನಿಲ್ ಕುಮಾರ್ ವೃಕ್ಷಾಬಂಧನ ನಡೆಸಿ ಹೆಬ್ರಿ ಆನಂತ ಪದ್ಮನಾಭ ಸನ್ನಿಧಿ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ ಧರ್ಮಸ್ಥಳ ಯೋಜನೆಯ ಹಲವಾರು ಜನಉಪಯೋಗಿ ಚಟುವಟಿಕೆಗಳ ಮೂಲಕ ಸಮಾಜದ ಅಭಿವೃದ್ಧಿಯನ್ನು ನಡೆಸುತ್ತಿದೆ, ಇಂದು ನಾವು ನೀರು ಮತ್ತು ಪರಿಸರವನ್ನು ಕಾಪಾಡಿಕೊಳ್ಳುವ ಬಗ್ಗೆ ಕಾಳಜಿ ತೋರುತ್ತಿಲ್ಲ ಅಭಿವೃದ್ಧಿ ಹೆಸರಿನಲ್ಲಿ ಮರ ಕಡಿದರು ಮತ್ತೆ ನೆಡುವ ಕಾರ್ಯಕ್ರಮ ಆಗುತ್ತಿಲ್ಲ, ಧರ್ಮಸ್ಥಳ ಹೆಗ್ಗಡೆಯವರ ಲಕ್ಷವೃಕ್ಷ ನಾಟಿ ಮೂಲಕ 5 ಲಕ್ಷ ಗಿಡ ನೆಡುವ ಕಾರ್ಯಕ್ರಮ ಶ್ಲಾಘನೀಯ ಕರಾವಳಿ ಜಿಲ್ಲೆಗಳಲ್ಲಿ ಬ್ರಹ್ಮಕಲಶದ ಸಂದರ್ಭದಲ್ಲಿ ದೇವಸ್ಥಾನದ ಕಾರ್ಯಗಳಿಗೆ ನೂರಾರು ಮರಗಳನ್ನು ಕಡಿಯಲಾಗುತ್ತದೆ ದೇವಸ್ಥಾನದ ಅಭಿವೃದ್ಧಿಗೆ ಹಣವಿನಿಯೋಗಿಸಿದಂತೆ ಮರಗಳ ರಕ್ಷಣೆ ಗಿಡಗಳ ನಾಟಿಗೂ ಜೀರ್ಣೋದ್ದಾರದ ಸಂದರ್ಭದಲ್ಲಿ ಹಣವನ್ನು ಮೀಸಲಿಟ್ಟು ನಮ್ಮ ನೆಲ ಜಲ ನೈಸರ್ಗಿಕ ಸಂಪನ್ಮೂಲವನ್ನು ಉಳಿಸಿ ಎಂದು ಕರೆ ನೀಡಿದರು.
ಧರ್ಮಸ್ಥಳ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಎಸ್ ಮಾತನಾಡಿ ಸ್ವಸಹಾಯ ಸಂಘಗಳ ಮೂಲಕ ಬಡವರ್ಗದ ಜನರಿಗೆ ಬ್ಯಾಂಕ್ ಸೌಲಭ್ಯ ದೊರಕುವಂತಾಗಿದ್ದು ರಾಜ್ಯದಲ್ಲಿ ಬಡಜನರ ಅಭಿವೃದ್ಧಿ ಸಾಧ್ಯವಾಗಿದೆ ಯೋಜನೆಯ ಎರಡು ಕೋಟಿ ಸದಸ್ಯರಿಗೆ 1.35 ಲಕ್ಷ ಕೋಟಿ ಸಾಲ ಸೌಲಭ್ಯ ದೊರಕ್ಕಿದ್ದು ಸ್ವಾವಲಂಬನೆ ಸಾಧ್ಯವಾಗಿದೆ. ಮಧ್ಯವರ್ಜನ ಶಿಬಿರ, ಆರೋಗ್ಯ ಸಹಾಯಧನ, ಮನೆ ನಿರ್ಮಾಣ ಸೇರಿದಂತೆ ಹತ್ತಾರು ಕಾರ್ಯಕ್ರಮಗಳ ಮೂಲಕ ಸಹಾಯ ದೊರಕಿದೆ. ಪ್ರಕೃತಿ ಯಜ್ಞಕ್ಕಿಂತ ದೊಡ್ಡ ಯಜ್ಞ ಮತ್ತೊಂದಿಲ್ಲ ಗಿಡಗಳನ್ನು ನೆಟ್ಟು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಹೊಣೆ ನಮ್ಮೆಲ್ಲರದ್ದು ಕಾಡಿನಲ್ಲಿ ವನ್ಯಜೀವಿಗಳಿಗೆ ಆಹಾರ ಉತ್ಪನ್ನ ಸೃಷ್ಟಿ ಮಾಡುವ ಉದ್ದೇಶದಿಂದ 5 ಲಕ್ಷ ವೃಕ್ಷ ಗಿಡಗಳ ನಾಟಿ ಕಾರ್ಯಕ್ರಮ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದ್ದು ಹೆಬ್ರಿಯಲ್ಲಿ ಪ್ರಥಮವಾಗಿ ಚಾಲನೆ ನೀಡಲಾಗಿದೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ನೀರ ಕೃಷ್ಣಶೆಟ್ಟಿ ವಹಿಸಿ ಮಾತನಾಡಿ ನಾವು ಪರಿಸರ ಸ್ನೇಹಿ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕಾಗಿದ್ದು ಪರಿಸರ ಮಾರಕ ಸಂಪನ್ಮೂಲವನ್ನು ತ್ಯಜಿಸಬೇಕು ಪ್ರಾಕೃತಿಕ ರಕ್ಷಣೆಗೆ ಶ್ರಮವಹಿಸಿ ಎಲ್ಲೆಲ್ಲಿ ಸಸಿ ನೆಟ್ಟು ಬೆಳೆಸಲು ಸಾಧ್ಯವೋ ಅಲ್ಲಲ್ಲಿ ಗಿಡ ಬೆಳೆಸಿ ಎಂದರು.
ಮೂಡಬಿದ್ರೆ ವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್, ಉದಯ ಕೃಷ್ಣಯ್ಯ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮುನಿಯಾಲು ಉದಯಕುಮಾರ್ ಶೆಟ್ಟಿ, ಜನಜಾಗೃತಿ ವೇದಿಕೆಯ ಜಿಲ್ಲಾ ಸಂಘಟನಾದ್ಯಕ್ಷ ನವೀನ್ ಚಂದ್ರ ಶೆಟ್ಟಿ, ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್, ವಲಯ ಅರಣ್ಯಾಧಿಕಾರಿ ಮಂಜುಳಾ ಸಿದ್ದಪ್ಪ, ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಗಣಪತಿ, ಸಂಪತ್ ಸಾಮ್ರಾಜ್, ಶಾಂತರಾಮ ಪೈ, ಪಂಚಾಯತ್ ಸದಸ್ಯೆ ರೇವತಿ ಉಪಸ್ಥಿತರಿದ್ದರು.
ಅರಣ್ಯ ಮಿತ್ರ ಪ್ರಶಸ್ತಿಯನ್ನು ಬೆಳ್ತಂಗಡಿ ಮುಂಡಾಜೆಯ ಸಚಿನ್ ಬಿಡೆ ಅವರಿಗೆ ಪ್ರಧಾನ ಮಾಡಲಾಯಿತು. ಹೆಬ್ರಿ ಪಾ.ಪೂ. ಕಾಲೇಜಿನ ಉಪ ಪ್ರಾಂಶುಪಾಲ ದಿವಾಕರ ಮರಕಾಲ ಅವರಿಗೆ ಶಾಲಾವನ ನಿರ್ಮಿಸಲು ಸಸಿಗಳನ್ನು ಹಸ್ತಾಂತರಿಸಲಾಯಿತು, ಅರಣ್ಯೀಕರಣ ಕಿರು ಚಿತ್ರ ಪ್ರದರ್ಶಿಸಿ ನೂತನ ಸಾಫ್ಟ್ವೇರ್ ಬಿಡುಗಡೆ ಮಾಡಲಾಯಿತು.
ಯೋಜನೆಯ ಜಿಲ್ಲಾ ನಿರ್ದೇಶಕ ನಾಗರಾಜ ಶೆಟ್ಟಿ ಸ್ವಾಗತಿಸಿ, ಜನಜಾಗೃತಿ ಯೋಜನಾಧಿಕಾರಿ ಗಣೇಶ್ ಆಚಾರ್ಯ ನಿರೂಪಿಸಿದರು ಹೆಬ್ರಿ ತಾಲೂಕು ಯೋಜನಾಧಿಕಾರಿ ಲೀಲಾವತಿ ವಂದಿಸಿದರು.