ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಚೂರಿಯಿಂದ ಇರಿತ

0
27

ಬಂಟ್ವಾಳ : ಹಣಕಾಸಿನ ವಿಚಾರವಾಗಿ ನಡೆದ ಮಾತಿನ ಚಕಮಕಿಯ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರಿಗೆ ಚೂರಿಯಿಂದ ಇರಿದು ಕೊಲೆ ಯತ್ನ ನಡೆಸಿದ ಘಟನೆ ಅ. 17ರ ರಾತ್ರಿ ಬಿ.ಮೂಡ ಗ್ರಾಮದ ಪಲ್ಲಮಜಲು ಜಂಕ್ಷನ್‌ನಲ್ಲಿ ನಡೆದಿದೆ.

ಬಿ.ಮೂಡ ಗ್ರಾಮದ ಕುಪ್ಪಿಲ ನಿವಾಸಿ ಲೋಕೇಶ್ (27) ಅವರ ಅಣ್ಣ ಉದಯ್ ಚೂರಿ ಇರಿತಕ್ಕೊಳಗಾದವರು. ಅಜಿತ್ ಕಲ್ಲಗುಡ್ಡೆ ಎಂಬಾತನ ವಿರುದ್ಧ ಲೋಕೇಶ್ ದೂರು ನೀಡಿದ್ದಾರೆ.

ಉದಯ್ ಅವರು ಅಜಿತ್‌ಗೆ ಹಲವು ವರ್ಷಗಳಿಂದ ಹಣ ನೀಡಿದ್ದು, ವಾಪಸ್ ಕೇಳಿದರೂ ಆತ ಹಣ ಹಿಂದಿರುಗಿಸಿರಲಿಲ್ಲ ಎನ್ನಲಾಗಿದೆ. ಅ. 17ರಂದು ರಾತ್ರಿ ಹಣ ಕೇಳುವ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಬಳಿಕ ಹಣ ನೀಡುವುದಾಗಿ ಹೇಳಿದ ಅಜಿತ್, ಉದಯ್ ಅವರನ್ನು ಪಲ್ಲಮಜಲು ಜಂಕ್ಷನ್‌ಗೆ ಕರೆಸಿಕೊಂಡಿದ್ದ ಎನ್ನಲಾಗಿದೆ.

ಅದರಂತೆ ರಾತ್ರಿ ಸುಮಾರು 8.50ರ ವೇಳೆಗೆ ಆಟೋರಿಕ್ಷಾದಲ್ಲಿ ಬಂದ ಉದಯ್ ಅವರೊಂದಿಗೆ ಅಜಿತ್ ಮತ್ತೆ ಜಗಳವಾಡಿದ್ದಾನೆ. ಈ ವೇಳೆ ಹಣ ಕೇಳುವ ವಿಚಾರವಾಗಿ ಆಕ್ರೋಶಗೊಂಡ ಅಜಿತ್, ಉದಯ್ ಅವರ ಹೊಟ್ಟೆಯ ಬಲಭಾಗಕ್ಕೆ ಚೂರಿಯಿಂದ ಇರಿದಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಮತ್ತೊಮ್ಮೆ ಇರಿಯಲು ಯತ್ನಿಸಿದಾಗ ತಡೆಯಲು ಹೋದ ಉದಯ್ ಅವರ ಎಡಗೈ ಮಣಿಕಟ್ಟಿಗೂ ಗಾಯವಾಗಿದೆ ಎನ್ನಲಾಗಿದೆ.

ಅಣ್ಣನ ಕೂಗು ಕೇಳಿ ಸ್ಥಳಕ್ಕೆ ಬಂದ ಲೋಕೇಶ್ ಅವರ ಮೇಲೂ ಆರೋಪಿ ಚೂರಿ ಹಿಡಿದು ಅಟ್ಟಿಸಿಕೊಂಡು ಬಂದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ವೇಳೆ ಸ್ಥಳೀಯರು ಆರೋಪಿಯನ್ನು ಹಿಡಿದುಕೊಂಡಿದ್ದು, ಲೋಕೇಶ್ ಅಲ್ಲಿಂದ ತಪ್ಪಿಸಿಕೊಂಡು ಓಡಿದ್ದಾರೆ ಎನ್ನಲಾಗಿದೆ.

ಗಂಭೀರವಾಗಿ ಗಾಯಗೊಂಡ ಉದಯ್ ಅವರನ್ನು ಸ್ಥಳೀಯರಾದ ಸಾಜಿದ್ ಮತ್ತು ಸಫಾಜ್ ಅವರು ಆಟೋರಿಕ್ಷಾದಲ್ಲಿ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಬಳಿಕ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ಆಂಬುಲೆನ್ಸ್ ಮೂಲಕ ದಾಖಲಿಸಲಾಯಿತು.

ಈ ಕುರಿತು ಲೋಕೇಶ್ ನೀಡಿದ ದೂರಿನ ಆಧಾರದಲ್ಲಿ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 144/2026ರಂತೆ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಕಲಂ 118(2), 109(1) ಮತ್ತು 351(2)ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.