ಅ.25ಕ್ಕೆ ಉಡುಪಿಯಲ್ಲಿ ರಾಜ್ಯಮಟ್ಟದ ಹಿಂದಿ ಶಿಕ್ಷಕರ ಸಮ್ಮೇಳನ

0
10

ಕರ್ನಾಟಕ ರಾಜ್ಯ ಹಿಂದಿ ಭಾಷಾ ಬೋಧಕರ ಸಂಘ (ರಿ.), ಬೆಂಗಳೂರು ಹಾಗೂ ಉಡುಪಿ ಜಿಲ್ಲಾ ಹಿಂದಿ ಭಾಷಾ ಬೋಧಕರ ಸಂಘದ ಸಹಯೋಗದಲ್ಲಿ ರಾಜ್ಯಮಟ್ಟದ ಹಿಂದಿ ಶಿಕ್ಷಕರ ಸಮ್ಮೇಳನ ಮತ್ತು ಕಾರ್ಯಾಗಾರ ಅ.25ರಂದು ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ.

ಪರ್ಯಾಯ ಶ್ರೀ ಶಿರೂರು ಮಠ ಹಾಗೂ ಶ್ರೀಕೃಷ್ಣ ಮಠದ ಆಶ್ರಯದಲ್ಲಿ ನಡೆಯಲಿರುವ ಕಾರ್ಯಕ್ರಮ ಬೆಳಿಗ್ಗೆ 9.30ಕ್ಕೆ ಉದ್ಘಾಟನೆಗೊಳ್ಳಲಿದೆ ಎಂದು ಉಡುಪಿ ಜಿಲ್ಲಾ ಹಿಂದಿ ಭಾಷಾ ಬೋಧಕರ ಸಂಘದ ಅಧ್ಯಕ್ಷ ಎಚ್.ಎನ್. ವೆಂಕಟೇಶ್ ತಿಳಿಸಿದರು.

ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ವಿವಿಧ ಜಿಲ್ಲೆಗಳ ಹಿಂದಿ ಶಿಕ್ಷಕರು ಸಮ್ಮೇಳನದಲ್ಲಿ ಭಾಗವಹಿಸಲಿದ್ದು, ಭಾಷಾ ಬೋಧನೆ, ತೃತೀಯ ಭಾಷೆಯ ಮಹತ್ವ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯಲ್ಲಿ ಭಾಷೆಗಳ ಪಾತ್ರದ ಕುರಿತು ಚರ್ಚೆ ನಡೆಯಲಿದೆ ಎಂದರು.

ಬೆಳಿಗ್ಗೆ 8.30ರಿಂದ ನೋಂದಣಿ ಮತ್ತು ಉಪಾಹಾರ, 9 ಗಂಟೆಯಿಂದ ವಿದ್ವಾನ್ ನಟರಾಜ್ ಎಚ್.ಎನ್. ಮತ್ತು ಬಳಗದವರಿಂದ ಹಿಂದಿ ಗೀತಾಗಾಯನ ನಡೆಯಲಿದೆ. ಬೆಳಿಗ್ಗೆ 9.30ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಹಿಂದಿ ಭಾಷಾ ಬೋಧಕರ ಸಂಘದ ರಾಜ್ಯಾಧ್ಯಕ್ಷ ಶಶಿಧರ ಸಿ.ಎಂ. ಅಧ್ಯಕ್ಷತೆ ವಹಿಸಲಿದ್ದು, ಪರ್ಯಾಯ ಶ್ರೀ ಶಿರೂರು ಮಠದ ದಿವಾನ ಡಾ. ಉದಯಕುಮಾರ್ ಸರಳತ್ತಾಯ ಉದ್ಘಾಟಿಸಲಿದ್ದಾರೆ. ಸಂಘದ ಗೌರವಾಧ್ಯಕ್ಷ ಡಿ.ಎಂ. ರಾಥೋಡ್ ಗೌರವ ಉಪಸ್ಥಿತರಿರಲಿದ್ದಾರೆ.

ಉದ್ಯಮಿ ಹಾಗೂ ಕಾಂಗ್ರೆಸ್ ಮುಖಂಡ ಪ್ರಸಾದ್ ಕಾಂಚನ್, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಲೋಕೇಶ್ ಸಿ. ಮತ್ತು ಡಾ. ಅಶೋಕ್ ಕಾಮತ್, ಉಡುಪಿ ಜಿಲ್ಲಾ ಹಿಂದಿ ಭಾಷಾ ಬೋಧಕರ ಸಂಘದ ಸ್ಥಾಪಕ ಅಧ್ಯಕ್ಷ ದಿನಕರ ಆರ್. ಶೆಟ್ಟಿ, ನಿವೃತ್ತ ಪರಿವೀಕ್ಷಣಾಧಿಕಾರಿ ನಾಗರಾಜ್ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣ ನಾಯಕ್, ಕೋಶಾಧಿಕಾರಿ ಸತೀಶ್ ನಾಯಕ್, ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷೆ ಗೀತಾ ಕುಮಾರಿ, ಜಿಲ್ಲಾ ಉಪಾಧ್ಯಕ್ಷೆ ರುಮಿಲಾ, ಜೊತೆ ಕಾರ್ಯದರ್ಶಿ ಮಾಲಿನಿ ಡಿ. ರಮೇಶ್ ಸೇರಿದಂತೆ ವಿವಿಧ ವಲಯಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.