ನ.14ರಂದು ಮುಕ್ಕದಲ್ಲಿ ರಾಜ್ಯಮಟ್ಟದ ‘ಇನ್ಸ್ಪೈರ್-2026’ ಉತ್ಸವ; 1,500ಕ್ಕೂ ಅಧಿಕ ವಿದ್ಯಾರ್ಥಿಗಳ ನಿರೀಕ್ಷೆ

0
13

ಮಂಗಳೂರು: ಪದವಿಪೂರ್ವ ಹಾಗೂ ಡಿಪ್ಲೊಮಾ ಕಾಲೇಜುಗಳ ವಿದ್ಯಾರ್ಥಿಗಳಲ್ಲಿರುವ ತಾಂತ್ರಿಕ ಕೌಶಲ್ಯ, ಕ್ರೀಡಾ ಪ್ರತಿಭೆ ಮತ್ತು ಸಾಂಸ್ಕೃತಿಕ ಆಸಕ್ತಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಮುಕ್ಕದ ಶ್ರೀನಿವಾಸ್ ಯೂನಿವರ್ಸಿಟಿ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ವತಿಯಿಂದ ರಾಜ್ಯಮಟ್ಟದ ‘ಇನ್ಸ್ಪೈರ್-2026’ (INSPIRE-26) ಉತ್ಸವವನ್ನು ನವೆಂಬರ್ 14ರಂದು ಆಯೋಜಿಸಲಾಗಿದೆ.

ಶನಿವಾರ ಬೆಳಿಗ್ಗೆ 10 ಗಂಟೆಗೆ ಮುಕ್ಕದಲ್ಲಿರುವ ಇಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನಡೆಯಲಿದೆ. ಉಡುಪಿ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಉಪನಿರ್ದೇಶಕ ಸತೀಶ್ ಬಿ. ನಾಯ್ಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶ್ರೀನಿವಾಸ್ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಾಧಿಪತಿ ಡಾ. ಎ. ಶ್ರೀನಿವಾಸ್ ರಾವ್ ಅಧ್ಯಕ್ಷತೆ ವಹಿಸಲಿದ್ದಾರೆ.

ಎಸ್.ವಿ.ಎಸ್. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಹಾಗೂ ಉಡುಪಿ ಜಿಲ್ಲಾ ಅನುದಾನಿತ ಮತ್ತು ಅನುದಾನರಹಿತ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಡಾ. ದಯಾನಂದ ಪೈ, ಶ್ರೀನಿವಾಸ್ ವಿಶ್ವವಿದ್ಯಾಲಯದ ವಿಶ್ವಸ್ತ ಮಂಡಳಿ ಸದಸ್ಯರಾದ ಎ. ವಿಜಯಲಕ್ಷ್ಮಿ ಆರ್. ರಾವ್ ಮತ್ತು ಪ್ರೊ. ಎ. ಮಿತ್ರ ಎಸ್. ರಾವ್, ಉಪಕುಲಪತಿ ಡಾ. ಕೆ. ಸತ್ಯನಾರಾಯಣ ರೆಡ್ಡಿ ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ. ಅನಿಲ್ ಕುಮಾರ್, ರಿಜಿಸ್ಟ್ರಾರ್ ಮೌಲ್ಯಮಾಪನ ಡಾ. ಶ್ರೀನಿವಾಸ ಮಯ್ಯ ಡಿ., ರಿಜಿಸ್ಟ್ರಾರ್ ಡೆವಲಪ್‌ಮೆಂಟ್ ಡಾ. ಅಜಯ್ ಕುಮಾರ್, ರಿಜಿಸ್ಟ್ರಾರ್ ಅಕಾಡೆಮಿಕ್ ಡಾ. ಆದಿತ್ಯ ಕುಮಾರ್ ಮಯ್ಯ ಹಾಗೂ ಕಾಲೇಜಿನ ಪ್ರಾಂಶುಪಾಲ ಡಾ. ರಾಮಕೃಷ್ಣ ಎನ್. ಹೆಗಡೆ ಉಪಸ್ಥಿತರಿರಲಿದ್ದಾರೆ.

1,500ಕ್ಕೂ ಅಧಿಕ ವಿದ್ಯಾರ್ಥಿಗಳ ನಿರೀಕ್ಷೆ

ಕಳೆದ ವರ್ಷ ನಡೆದ ಇನ್ಸ್ಪೈರ್-2025ರಲ್ಲಿ ವಿವಿಧ ಪದವಿಪೂರ್ವ ಹಾಗೂ ಡಿಪ್ಲೊಮಾ ಕಾಲೇಜುಗಳ ಸುಮಾರು 1,100 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಬಾರಿ 1,500ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ತಾಂತ್ರಿಕ, ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು

ತಾಂತ್ರಿಕ ವಿಭಾಗದಲ್ಲಿ ಐಡಿಯಾ ಪಿಚಿಂಗ್, ವಿಜ್ಞಾನ ಮಾದರಿ ಪ್ರದರ್ಶನ ಮತ್ತು ವಿಜ್ಞಾನ ರಸಪ್ರಶ್ನೆ ಸ್ಪರ್ಧೆಗಳು ನಡೆಯಲಿವೆ.

ಕ್ರೀಡಾ ವಿಭಾಗದಲ್ಲಿ ಕ್ರಿಕೆಟ್, ವಾಲಿಬಾಲ್, ಕಬಡ್ಡಿ, ಟೇಬಲ್ ಟೆನಿಸ್, ಬ್ಯಾಡ್ಮಿಂಟನ್ ಹಾಗೂ ಚೆಸ್ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಸಾಂಸ್ಕೃತಿಕ ವಿಭಾಗದಲ್ಲಿ ಕರ್ನಾಟಕ ವೈಭವ ವಿಷಯದ ರೀಲ್ಸ್ ಮೇಕಿಂಗ್, ಟ್ರೆಷರ್ ಹಂಟ್, ಏಕವ್ಯಕ್ತಿ ಗಾಯನ ಹಾಗೂ ಹವಾಮಾನ ಬದಲಾವಣೆ ಮತ್ತು ಭೂಮಿಯನ್ನು ಉಳಿಸಿ ಎಂಬ ವಿಷಯಗಳ ಕೊಲಾಜ್ ತಯಾರಿಕೆ ಸ್ಪರ್ಧೆಗಳು ನಡೆಯಲಿವೆ.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಆಕರ್ಷಕ ನಗದು ಬಹುಮಾನ, ಪ್ರಮಾಣಪತ್ರ ಹಾಗೂ ಟ್ರೋಫಿಗಳನ್ನು ನೀಡಿ ಗೌರವಿಸಲಾಗುವುದು.

ಆನ್‌ಲೈನ್ ನೋಂದಣಿಗೆ ಅವಕಾಶ

ಕಾರ್ಯಕ್ರಮದ ಸಂಯೋಜಕರಾಗಿ ಪ್ರೊ. ವಿಶ್ವಾಸ್ ಸಿ. ಶೆಟ್ಟಿ ಹಾಗೂ ಸಹ ಸಂಯೋಜಕರಾಗಿ ಡಾ. ನವೀನ್ ಕುಮಾರ್ ಜೆ. ಆರ್. ಕಾರ್ಯನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿ ಸಂಯೋಜಕರಾಗಿ ಪ್ರಜ್ವಲ್ ಎಸ್. ಪೂಜಾರಿ ಮತ್ತು ಸ್ವಾತಿ ಸಹಕರಿಸುತ್ತಿದ್ದಾರೆ.

ಆಸಕ್ತ ವಿದ್ಯಾರ್ಥಿಗಳು ಹಾಗೂ ಕಾಲೇಜುಗಳು ಹೆಚ್ಚಿನ ಮಾಹಿತಿ ಮತ್ತು ಆನ್‌ಲೈನ್ ನೋಂದಣಿಗಾಗಿ https://suietinspire.com/ ವೆಬ್‌ಸೈಟ್ ಸಂಪರ್ಕಿಸಬಹುದು ಎಂದು ಸಂಘಟಕರು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಕಾಲೇಜಿನ ಮುಖ್ಯಸ್ಥ ಡಾ. ರಾಮಕೃಷ್ಣ ಎನ್. ಹೆಗಡೆ, ಕಾರ್ಯಕ್ರಮದ ಸಂಯೋಜಕ ಪ್ರೊ. ವಿಶ್ವಾಸ್ ಸಿ. ಶೆಟ್ಟಿ, ಸಹ ಸಂಯೋಜಕ ಡಾ. ನವೀನ್ ಕುಮಾರ್ ಜೆ. ಆರ್. ಸೇರಿದಂತೆ ವಿದ್ಯಾರ್ಥಿ ಸಂಯೋಜಕರು ಉಪಸ್ಥಿತರಿದ್ದರು.