ಉಡುಪಿಯಲ್ಲಿ ರಾಜ್ಯಮಟ್ಟದ ಗೂಡುದೀಪ, ಚಿತ್ರಕಲಾ ಸ್ಪರ್ಧೆ ಯಶಸ್ವಿ

0
8

ರಾಜಾಂಗಣದಲ್ಲಿ ನೂರಾರು ಕಲಾವಿದರಿಂದ ಪ್ರತಿಭಾ ಪ್ರದರ್ಶನ

ಉಡುಪಿಯ ರಾಜಾಂಗಣದಲ್ಲಿ ಬಿಜೆಪಿ ಉಡುಪಿ ಜಿಲ್ಲಾ ವಿವಿಧ ಪ್ರಕೋಷ್ಟಗಳು ಹಾಗೂ ಲಯನ್ಸ್ ಕ್ಲಬ್ ಪರ್ಕಳ ಇವರ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಬೃಹತ್ ರಾಜ್ಯಮಟ್ಟದ ಗೂಡುದೀಪ ಹಾಗೂ ಚಿತ್ರಕಲಾ ಸ್ಪರ್ಧೆ ಯಶಸ್ವಿಯಾಗಿ ಸಂಪನ್ನಗೊಂಡಿತು.

ಭಾರತೀಯ ಸಾಂಪ್ರದಾಯಿಕ ಗೂಡುದೀಪ ಕಲೆಯನ್ನು ಉಳಿಸಿ ಬೆಳೆಸುವ ಹಾಗೂ ನಾಡಿನ ಯುವ ಕಲಾವಿದರ ಪ್ರತಿಭೆಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಈ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ರಾಜ್ಯದ ವಿವಿಧ ಭಾಗಗಳಿಂದ ನೂರಾರು ಸ್ಪರ್ಧಾಳುಗಳು ಉತ್ಸಾಹದಿಂದ ಪಾಲ್ಗೊಂಡು ತಮ್ಮ ಕಲಾ ಕೌಶಲ್ಯವನ್ನು ಪ್ರದರ್ಶಿಸಿದರು.

ಬಣ್ಣಗಳ ವೈವಿಧ್ಯಮಯ ಲೋಕ ಹಾಗೂ ಬೆಳಕಿನ ಸೊಬಗಿನಿಂದ ರಾಜಾಂಗಣ ಕಲಾಸಂಭ್ರಮದ ಕೇಂದ್ರವಾಗಿತ್ತು. ಸ್ಪರ್ಧಾಳುಗಳು ತಮ್ಮ ಸೃಜನಶೀಲತೆಯ ಮೂಲಕ ಗೂಡುದೀಪ ಮತ್ತು ಚಿತ್ರಕಲೆಯಲ್ಲಿ ವಿಭಿನ್ನ ಕಲಾಕೃತಿಗಳನ್ನು ಮೂಡಿಸಿ ಗಮನ ಸೆಳೆದರು.

ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಸಂಘಟಕರು, ಪ್ರಾಯೋಜಕರು, ಸ್ವಯಂಸೇವಕರು ಹಾಗೂ ಭಾಗವಹಿಸಿದ ಎಲ್ಲ ಸ್ಪರ್ಧಾಳುಗಳಿಗೆ ವಿಜಯ ಕೊಡವೂರು ಅವರು ಅಭಿನಂದನೆ ಮತ್ತು ಕೃತಜ್ಞತೆ ಸಲ್ಲಿಸಿದರು. ಸಾಂಪ್ರದಾಯಿಕ ಕಲೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕೆಂಬ ಆಶಯ ವ್ಯಕ್ತವಾಯಿತು.