ಕೃಷಿಕರಿಗೆ ಸಿಗುವ ಸವಲತ್ತನ್ನುö, ಜೀವದ ಹಂಗು ತೊರೆದು ಮಾಡುವ ಕಡಲ ಮೀನುಗಾರಿಕೆ ಸಹಿತ ಒಳನಾಡು ಮೀನುಗಾರಿಕೆಗೂ ವಿಸ್ತರಿಸುವ ನಿಟ್ಟಿನಲ್ಲಿ ರಾಜ್ಯ, ಕೇಂದ್ರ ಸರಕಾರ ಮೀನುಗಾರರ ನಾಲ್ಕು ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಉಡುಪಿ ಶಾಸಕ ಯಶಪಾಲ್ ಸುವರ್ಣ ಆಗ್ರಹಿಸಿದ್ದಾರೆ.
ಅವರು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಸಹಕಾರ ಇಲಾಖೆ ಸಹಯೋಗದಲ್ಲಿ ಮೈಸೂರು ವಿಭಾಗದ ಮೀನುಗಾರರ ಸಹಕಾರ ಸಂಘಗಳ ಪದಾಕಾರಿಗಳು ಮತ್ತು ಮುಖ್ಯ ಕಾರ್ಯನಿರ್ವಾಹಕರಿಗೆ ರಾಜ್ಯಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮವನ್ನು ಕಡಿಯಾಳಿಯ ಹೋಟೆಲ್ ದಿ. ಓಶಿಯನ್ ಪರ್ಲ್ ಸಭಾಂಗಣದಲ್ಲಿ ಮಂಗಳವಾರ ಉದ್ಘಾಟಿಸಿ ಮಾತನಾಡಿದರು.
ಸಹಕಾರ ವ್ಯವಸ್ಥೆಗೆ ಆರ್ಥಿಕ ಶಿಸ್ತು ತರುವ ಕೆಲಸ ಕೇಂದ್ರ ಸರಕಾರ ಮಾಡುತ್ತಿದೆ. ಉತ್ತಮ ಚಿಂತನೆ, ಯೋಜನೆಗಳಿಂದ ಸಹಕಾರ ಕ್ಷೇತ್ರವು ರಾಷ್ಟ್ರೀಕೃತ ಬ್ಯಾಂಕುಗಳನ್ನು ಮೀರಿ ದೇಶದ ಆರ್ಥಿಕತೆಗೆ ಕೊಡುಗೆ ನೀಡಲು ಸಾಧ್ಯ ಎಂದರು.

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಉಪಾಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಮಾತನಾಡಿ, ಮೀನಿಗೆ ಅಂತಾರಾಷ್ಟ್ರೀಯ ಬೇಡಿಕೆ ಹೆಚ್ಚಿದ್ದು ಗುಣಮಟ್ಟ ಅತಿ ಮುಖ್ಯ. ಮೀನುಗಾರರ ಆರ್ಥಿಕ ಸಬಲೀಕರಣವಾಗಬೇಕು. ಮಹಿಳಾ ಮೀನುಗಾರರು ಪಡೆದ ಸಾಲವನ್ನು ಹಿಂದೆ ನೀಡುವ ಪ್ರಾಮಾಣಿಕತೆ ಅನ್ಯ ಸಂಘಗಳಿಗೂ ಮಾದರಿಯಾಗಲಿ ಎಂದರು.
ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಅಧ್ಯಕ್ಷತೆ ವಹಿಸಿ, ಕಾಲಕಾಲಕ್ಕೆ ಆಗುವ ಬದಲಾವಣೆಗಳನ್ನು ಅರಿತು, ಸರಕಾರದ ಆದೇಶಗಳನ್ನು ಸಹಕಾರಿಗಳು ಪಾಲಿಸಬೇಕು. ದೇಶದ ಆರ್ಥಿಕ ವ್ಯವಸ್ಥೆಯು ಸಹಕಾರ ಕ್ಷೇತ್ರದಿಂದ ಮತ್ತಷ್ಟು ಪ್ರಗತಿ ಹೊಂದಲಿ ಎಂದರು.
ಯೂನಿಯನ್ ಉಪಾಧ್ಯಕ್ಷ ಅಶೋಕ್ ಕುಮಾರ್ ಬಲ್ಲಾಳ್, ಸಹಕಾರಿ ಸಂಘಗಳ ಉಪನಿಭಂದಕರಾದ ಕೆ ಆರ್ ಲಾವಣ್ಯ , ಯೂನಿಯನ್ ನಿರ್ದೇಶಕ ಎ.ಹರೀಶ್ ಕಿಣಿ, ವೈ.ಸುಧೀರ್ ಕುಮಾರ್ ಪಡುಬಿದ್ರಿ, ಬಿ.ಅರುಣ್ ಕುಮಾರ್ ಹೆಗ್ಡೆ, ಶ್ರೀಧರ ಪಿ.ಎಸ್., ಪ್ರಸಾದ್ ಶೆಟ್ಟಿ, ಸುರೇಶ್ ರಾವ್, ಬಿ.ಕರುಣಾಕರ್ ಶೆಟ್ಟಿ, ಸಂಪನ್ಮೂಲ ವ್ಯಕ್ತಿ ಎಸ್.ಎನ್.ಸಂತೋಷ್ ಕುಮಾರ್ , ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕ ಕುಮಾರ್ ಸ್ವಾಮಿ ಮಾಹಿತಿ ಉಪನ್ಯಾಸ ನೀಡಿ ಸಹಕರಿಸಿದರು.
ಸದಾನಂದ ಪ್ರಾರ್ಥಿಸಿದರು. ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಕಾರಿ ಅನುಷಾ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಸಹಕಾರ ಚಳವಳಿಯ ಪಿತಾಮಹ ಸಿದ್ಧನಗೌಡ ಪಾಟೀಲ್ ಹಾಗೂ ಮೊಳಹಳ್ಳಿ ಶಿವರಾಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ಸಹಕಾರ ಸಪ್ತಾಹ ಅಂಗವಾಗಿ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆ ವಿಜೇತರಾದ ಸಂತೆಕಟ್ಟೆ ಮೌಂಟ್ ರೋಸರಿ ಶಾಲೆಯ ಧಾತ್ರಿ ಜಿ. (ಪ್ರಥಮ), ಹೂಡೆ ಸಾಲಿಹತ್ ಸಂಸ್ಥೆಯ ಜುಬೇದಾ(ದ್ವಿ), ಬಾಲಕಿಯರ ಸರಕಾರಿ ಪ್ರೌಢ ಶಾಲೆಯ ಸಮೃದ್ಧಿ ಕುಲಕರ್ಣಿ(ತೃ) ಬಹುಮಾನ ಪಡೆದರು.

ಶಾಸಕರು ಸರ್ಕಾರದ ಮುಂದಿಟ್ಟ ಪ್ರಮುಖ ಬೇಡಿಕೆಗಳು :
*ರಾಜ್ಯಗಳಿಗೆ ಮೀನುಗಾರಿಕಾ ರಜೆಯ ಏಕರೂಪ ಕಾನೂನು
*ಕರಾವಳಿಗೆ ಪ್ರತೇಕ ಮೀನುಗಾರಿಕಾ ನೀತಿ
*ರೈತರ ಉತ್ಪನ್ನಗಳಿಗಿರುವ ಬೆಂಬಲ ಬೆಲೆ ಮಾದರಿಯಲ್ಲಿ ಮೀನಿಗೆ ನಿಗದಿತ ದರ
*ಮೀನುಗಾರರಿಗೆ ಸಹಕಾರ ಸಂಘಗಳಲ್ಲಿ ಸಹಾಯಧನ ಸಹಿತ ಕನಿಷ್ಠ ೫ಲಕ್ಷ ರೂ.ಸಾಲ ವ್ಯವಸ್ಥೆ

