ಮಣಿಪಾಲ ಶಿಕ್ಷಣ ಸಂಸ್ಥೆಯಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿದ್ದ ಛತ್ತಿಸ್‌ಗಢದ ಅನ್ಶುಲ್ ಯಾದವ್ ಎಂಬ ವಿದ್ಯಾರ್ಥಿ ಮೊದಲ ವರ್ಷದ 2ನೇ ಸೆಮಿಸ್ಟರ್‌ನ 4 ವಿಷಯಗಳಲ್ಲಿ ಅನುತ್ತೀರ್ಣ ಆಗಿರುವುದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವಿದ್ಯಾರ್ಥಿಯು ಮೇ 12ರಂದು ವಿದ್ಯಾರ್ಥಿ ನಿಲಯದ ಕೊಠಡಿಗೆ ಹೋದವ ಹೊರಗೆ ಬಂದಿರಲಿಲ್ಲ. ವಿದ್ಯಾರ್ಥಿಯ ಪೋಷಕರು ನಿರಂತರ ಕರೆ ಮಾಡಿದಾಗಲೂ ಸ್ವೀಕರಿಸಿರಲಿಲ್ಲ. ಆದ್ದರಿಂದ ಪೋಷಕರು ಸಂಸ್ಥೆಗೆ ವಿಷಯ ತಿಳಿಸಿದ ಹಿನ್ನೆಲೆಯಲ್ಲಿ ಮೇ 18ರ ಬೆಳಗ್ಗೆ 10.45ರ ಸುಮಾರಿಗೆ ನಿಲಯ ಪಾಲಕರು ಹಾಗೂ ಭದ್ರತಾ ಸಿಬಂದಿ ಕೊಠಡಿಯ ಬಾಗಿಲು ಮುರಿದು ಒಳಗೆ ಹೋಗಿ ನೋಡಿದಾಗ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದು ಮೃತ ದೇಹವು ಕೊಳೆತ ಸ್ಥಿತಿಯಲ್ಲಿ ಕಂಡು ಬಂದಿರುವ ಬಗ್ಗೆ ದೂರಿನಲ್ಲಿ ತಿಳಿಸಲಾಗಿದೆ.