ಬಾಗಲಕೋಟೆ: ಖಾಸಗಿ ಪಿಜಿಯಲ್ಲಿ ವಿದ್ಯಾರ್ಥಿನಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ. ಸೀಮಾ ರಾಠೋಡ (17) ಮೃತ ದುರ್ದೈವಿ. ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಸುನಗ ತಾಂಡಾದ ನಿವಾಸಿಯಾಗಿರುವ ಸೀಮಾ ರಾಠೋಡ, ನಿನ್ನೆ (ಸೆಪ್ಟೆಂಬರ್ 25) ಊರಿನಲ್ಲಿ ಜಾತ್ರೆ ಮುಗಿಸಿಕೊಂಡು ವಾಪಸ್ ಪಿಜಿ ಬಂದಿದ್ದು, ನೇಣುಬಿಗಿದ ಸ್ಥಿತಿಯಲ್ಲಿ ಸೀಮಾ ಶವ ಪತ್ತೆಯಾಗಿದೆ. ಇನ್ನು ಸೀಮಾ ಸಾವಿನ ಬಗ್ಗೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದು, ಮಗಳ ಸಾವಿಗೆ ನ್ಯಾಯ ಕೊಡಿಸಿ ಎಂದು ತಾಯಿ ಹಾಗೂ ಕುಟುಂಬಸ್ಥರು ಆಗ್ರಹಿಸಿದ್ದಾರೆ.
ಜಾತ್ರೆ ಮುಗಿಸಿಕೊಂಡು ಬಂದಾಕೆ ಸಾವಿನ ಮನೆಗೆ
ಬಾಗಲಕೋಟೆಯ ವಾಗ್ದೇವಿ ಸೈನ್ಸ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ಸೀಮಾ, ಕಳೆದ ಮೂರು ದಿನಗಳ ಹಿಂದೆಯಷ್ಟೇ ಊರಿಗೆ ಬಂದು ಕುಟುಂಬಸ್ಥರ ಜೊತೆ ಜಾತ್ರೆ ಮಾಡಿ ಖುಷಿ ಖುಷಿಯಾಗಿದ್ದಳು. ಬಳಿಕ ನಿನ್ನೆ (ಸೆ.25) ಅಷ್ಟೇ ತಾಯಿಗೆ ತಿಳಿಸಿ ಚಿಕ್ಕಪ್ಪನೊಂದಿಗೆ ಹಾಸ್ಟೆಲ್ ಗೆ ಬಂದಿದ್ದಳು. ಬಳಿಕ ಕೆಲ ಕಾಲ ಹಾಸ್ಟೆಲ್ ವಾರ್ಡನ್ ಜೊತೆ ಮಾತಾಡಿದ ಸೀಮಾ ಸಂಜೆ 4ಗಂಟೆ ಸುಮಾರಿಗೆ ಹಾಸ್ಟೆಲ್ ನಲ್ಲಿ ನೇಣು ಬಿಗಿದುಕೊಂಡಿದ್ದಾಳೆ.

