ಸಿ.ಡಿ. ಅನುಪಾತದಲ್ಲಿ ಸುಧಾರಣೆಗೆ ಕ್ರಮವಹಿಸಿ

0
129


ಉಡುಪಿ: ಜಿಲ್ಲೆಯಲ್ಲಿ ಪ್ರಸ್ತುತ ಸಿ.ಡಿ. ಅನುಪಾತವು 47.88 ರಷ್ಟು ಇದ್ದು, ಇದನ್ನು ಮತ್ತಷ್ಟು ಸುಧಾರಣೆ ತರುವುದರೊಂದಿಗೆ ಆರ್​.ಬಿ.ಐ ನಿಯಮಾವಳಿ ಅನ್ವಯ ಶೇ. 50ರ ಗುರಿ ಸಾಧಿಸಬೇಕು ಎಂದು ಕೆನರಾ ಬ್ಯಾಂಕ್​ ರೀಜನಲ್​ ಮ್ಯಾನೇಜರ್​ ಮಹಾಮಾಯ ಪ್ರಸಾದ್​ ರಾಯ್​ ತಿಳಿಸಿದರು.
ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಲೀಡ್​ ಬ್ಯಾಂಕ್​ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಳೆದ ಐದು ವರ್ಷಗಳಲ್ಲಿ 2018-19 ನೇ ಸಾಲಿನಲ್ಲಿ ಸಿ.ಡಿ.ಅನುಪಾತವು 50.32 ಹೆಚ್ಚಿತ್ತು. ನಂತರದ ವರ್ಷಗಳಲ್ಲಿ ಶೇ.50 ಕ್ಕಿಂತ ಕಡಿಮೆ ಇದೆ. ಕಳೆದ ವರ್ಷಕ್ಕೆ ಹೋಲಿಸಿದ್ದಲ್ಲಿ ಬ್ಯಾಂಕಿಂಗ್​ ಠೇವಣಿ ಅನುಪಾತವು ಶೇ.47.68 ಇದ್ದು, ಪ್ರಸಕ್ತ ಸಾಲಿನಲ್ಲಿ ಶೇ.47.88ಕ್ಕೆ ತಲುಪಿ ಶೇ. 0.42 ರಷ್ಟು ಏರಿಕೆಯಾಗಿದೆ. ಎಲ್ಲಾ ಬ್ಯಾಂಕರ್ಸ್​ಗಳು ಸಿ.ಡಿ ಅನುಪಾತವನ್ನು ಹೆಚ್ಚಿಸಲು ಕಾರ್ಯಪ್ರವೃತ್ತರಾಗಬೇಕು ಎಂದರು.
ಪ್ರಸಕ್ತ ಸಾಲಿನಲ್ಲಿ ಜಿಲ್ಲೆಗೆ ಆದ್ಯತೆಯ ಮತ್ತು ಆದ್ಯತೆಯೇತರ ವಲಯಗಳೆರಡಕ್ಕೂ ಒಟ್ಟಾರೆಯಾಗಿ 15,514.08 ಕೋಟಿ ರೂ.ಗಳ ವಾರ್ಷಿಕ ಕ್ರೆಡಿಟ್​ ಯೋಜನೆ ಗುರಿಯನ್ನು ನಿಗದಿಪಡಿಸಲಾಗಿದೆ. ಜೂನ್​ ಅಂತ್ಯದವರೆಗೆ ಜಿಲ್ಲೆಯ ಬ್ಯಾಂಕುಗಳು 4,963.96 ಕೋಟಿ ರೂ. ಸಾಲ ವಿತರಿಸಿ ಶೇ. 32 ಗುರಿ ಸಾಧಿಸಿವೆ. ಮುಂದಿನ ದಿನಗಳಲ್ಲಿ ಗುರಿ ಸಾಧನೆ ಪ್ರಮಾಣ ಹೆಚ್ಚಾಗಬೇಕು ಎಂದರು.
ಪಿ.ಎಂ.ವಿಶ್ವಕರ್ಮ ಯೋಜನೆಯಡಿ ಆರ್ಥಿಕ ನೆರವು ವಿತರಣೆಯ ಪ್ರಮಾಣವು ಹೆಚ್ಚಾಗಬೇಕು. ಈ ಯೋಜನೆಯಡಿ ಈವರೆಗೆ 5597 ಅರ್ಜಿಗಳು ಸ್ವೀಕೃತವಾಗಿದ್ದು, 3532 ಫಲಾನುಭವಿಗಳಿಗೆ 34.61 ಕೋಟಿ ರೂ. ಸಾಲ ವಿತರಿಸಲಾಗಿದೆ. 1256 ಅರ್ಜಿಗಳು ತಿರಸತಗೊಂಡಿವೆ. ಬಾಕಿ ಇರುವ ಅರ್ಜಿಗಳ ವಿಲೇವಾರಿಗೆ ಶೀಘ್ರ ಕ್ರಮ ವಹಿಸಬೇಕು ಎಂದರು.
ರಾಜ್ಯ ಹಾಗೂ ಕೇಂದ್ರ ಪ್ರಾಯೋಜಿತ ಯೋಜನೆಗಳಡಿ ಆಯ್ಕೆಯಾಗಿ ಆರ್ಥಿಕ ನೆರವು ನೀಡಲು ಶಿಫಾರಸಾದ ಅರ್ಜಿಗಳನ್ನು ಆದ್ಯತೆಯ ಮೇಲೆ ಜನರಿಗೆ ಅನುಕೂಲವಾಗುವಂತೆ ಸರಳ ರೀತಿಯಲ್ಲಿ ನಿಯಮಾನುಸಾರ ವಿಲೇವಾರಿ ಮಾಡಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಲೀಡ್​ ಬ್ಯಾಂಕ್​ ಮ್ಯಾನೇಜರ್​ ಹರೀಶ್​ ಜಿ., ಆರ್​.ಬಿ.ಐ ಲೀಡ್​ ಡಿಸ್ಟ್ರಿಕ್ಟ್​ ಆಫೀಸರ್​ ಅಲೋಕ್​ ಸಿನ್ಹಾ, ನಬಾರ್ಡ್​ ಡಿ.ಡಿ.ಎಂ ಸಂಗೀತಾ ಕಾರ್ಥಾ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here