ಕೆಲಸ ಕೊಡಿಸುವ ನೆಪದಲ್ಲಿ ಕರೆದೊಯ್ದು ₹3 ಲಕ್ಷಕ್ಕೆ ಮಾರಾಟ: ಯುವತಿಯ ಬದುಕಿನ ಕರಾಳ ಕಥೆ ಬಯಲು..!

0
89

ರಾಜಸ್ಥಾನ: ಹಲವು ವರ್ಷಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ಯುವತಿಯೊಬ್ಬಳನ್ನು ಜಾರ್ಖಂಡ್ ಪೊಲೀಸರು ಕೊನೆಗೂ ಪತ್ತೆಹಚ್ಚಿದ್ದು, ಪ್ರಕರಣದ ತನಿಖೆಯಲ್ಲಿ ಹೊರಬಂದ ಆಘಾತಕಾರಿ ಸತ್ಯಗಳು ಪೊಲೀಸರನ್ನೇ ಬೆಚ್ಚಿಬೀಳಿಸಿವೆ. ಮೂರು ಲಕ್ಷ ರೂಪಾಯಿಗಳಿಗೆ ಮಾರಾಟವಾಗಿದ್ದ ಯುವತಿ, ಇಂಡೋ-ಪಾಕ್ ಗಡಿಯ ಸಮೀಪದ ಪ್ರದೇಶದಲ್ಲಿ ನರಕಯಾತನೆ ಅನುಭವಿಸುತ್ತಿದ್ದ ವಿಚಾರ ಇದೀಗ ಬೆಳಕಿಗೆ ಬಂದಿದೆ.

ಜಾರ್ಖಂಡ್‌ನ ಸಿಮ್ದೇಗಾ ಮೂಲದ 22 ವರ್ಷದ ಯುವತಿ 2023ರಲ್ಲಿ ನಾಪತ್ತೆಯಾಗಿದ್ದಳು. ಕೆಲಸ ಕೊಡಿಸುವ ನೆಪದಲ್ಲಿ ನೆರೆಹಳ್ಳಿಯ ವ್ಯಕ್ತಿಯೊಬ್ಬ ಆಕೆಯನ್ನು ದೆಹಲಿಗೆ ಕರೆದೊಯ್ದಿದ್ದನು. ಬಳಿಕ ಏಜೆನ್ಸಿಯೊಂದರ ಮೂಲಕ ಮನೆಯ ಕೆಲಸಕ್ಕೆ ಸೇರಿಸಲಾಗಿದ್ದರೂ, ಅಲ್ಲಿ ಕಿರುಕುಳ ಹೆಚ್ಚಾದ ಹಿನ್ನೆಲೆ ಯುವತಿ ಅಲ್ಲಿಂದ ತಪ್ಪಿಸಿಕೊಂಡು ಓಡಿಬಂದಿದ್ದಳು.

ದೆಹಲಿಯ ಆನಂದ್ ವಿಹಾರ್ ಬಸ್ ನಿಲ್ದಾಣದ ಬಳಿ ದಿಕ್ಕುತೋಚದೆ ಅಲೆದಾಡುತ್ತಿದ್ದ ವೇಳೆ ಮೀರತ್ ಮೂಲದ ದಂಪತಿ ಆಕೆಯನ್ನು ಸಂಪರ್ಕಿಸಿ ಕರೆದುಕೊಂಡು ಹೋಗಿದ್ದರು. ನಂತರ ಭಾರತ-ಪಾಕಿಸ್ತಾನ ಗಡಿಯ ಸಮೀಪದ ರಾಜಸ್ಥಾನದ ಬಾರ್ಮರ್ ಪ್ರದೇಶದ ಕುಟುಂಬವೊಂದಕ್ಕೆ ಬರೋಬ್ಬರಿ ₹3 ಲಕ್ಷಕ್ಕೆ ಮಾರಾಟ ಮಾಡಿರುವ ಆಘಾತಕಾರಿ ಮಾಹಿತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಬಾರ್ಮರ್ ತಲುಪಿದ ಬಳಿಕವೂ ಯುವತಿಯ ಸಂಕಷ್ಟ ಕಡಿಮೆಯಾಗಿರಲಿಲ್ಲ. ಆಕೆಯನ್ನು ಮನೆಯ ಕೋಣೆಯೊಂದರಲ್ಲಿ ಬಂದಿಸಿಟ್ಟು ನಿರಂತರ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ಅವಧಿಯಲ್ಲಿ ಯುವತಿ ಮಗುವೊಂದಕ್ಕೆ ಜನ್ಮ ನೀಡಿದ್ದಾಳೆ ಎನ್ನಲಾಗಿದೆ.

ಒಂದು ದಿನ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಯುವತಿ ಹೇಗೋ ತನ್ನ ತಾಯಿಗೆ ಕರೆ ಮಾಡಿ ತಾನು ಅನುಭವಿಸುತ್ತಿದ್ದ ದೌರ್ಜನ್ಯವನ್ನು ವಿವರಿಸಿದ್ದಾಳೆ. ಮಗಳ ಪರಿಸ್ಥಿತಿ ತಿಳಿದು ಬೆಚ್ಚಿಬಿದ್ದ ಕುಟುಂಬಸ್ಥರು ಮೇ 20ರಂದು ಸಿಮ್ದೇಗಾದ ಮಾನವ ಕಳ್ಳಸಾಗಣೆ ತಡೆ ಘಟಕಕ್ಕೆ ದೂರು ನೀಡಿದ್ದರು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ವಿಶೇಷ ತಂಡ ರಚಿಸಿ ರಾಜಸ್ಥಾನದ ಬಾರ್ಮರ್‌ನಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ಯುವತಿ ಹಾಗೂ ಆಕೆಯ ಮಗುವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಇಬ್ಬರನ್ನೂ ಸುರಕ್ಷಿತವಾಗಿ ಸ್ವಗ್ರಾಮಕ್ಕೆ ಕರೆತರಲಾಗಿದ್ದು, ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಡಿಎಸ್‌ಪಿ ರಣವೀರ್ ಸಿಂಗ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here