ಉಪ್ಪೂರಿನ ನಾಗರಾಜಿಡ್ಡ ರಸ್ತೆಗೆ ತಾತ್ಕಾಲಿಕ ಮಣ್ಣು ತುಂಬಿಕೆ : ಶಾಶ್ವತ ನದಿ ದಂಡೆ ಯೋಜನೆಗೆ ಸಮಾಜ ಸೇವಕ ಸತೀಶ್ ಪೂಜಾರಿ ಕೀಳಂಜೆ ಆಗ್ರಹ

0
7

ಉಪ್ಪುರು ಗ್ರಾಮದ ನಾಗರಾಜಿಡ್ಡ ಭಾಗದಲ್ಲಿರುವ ಕಾಂಕ್ರೀಟ್ ರಸ್ತೆಯು ನದಿ ಕೊರೆತದಿಂದ ಬಿರುಕು ಬಿದ್ದು ಸಂಪೂರ್ಣ ಕೊಚ್ಚಿ ಹೋಗುವ ಸ್ಥಿತಿಗೆ ತಲುಪಿದ್ದ ಹಿನ್ನೆಲೆಯಲ್ಲಿ, ಇದೀಗ ತಾತ್ಕಾಲಿಕವಾಗಿ ಮಣ್ಣು ಹಾಕಿ ರಸ್ತೆ ಸಮತಟ್ಟು ಮಾಡುವ ಕಾಮಗಾರಿ ಕೈಗೊಳ್ಳಲಾಗಿದೆ.

ಈ ಪ್ರದೇಶದಲ್ಲಿ ಈ ಮೊದಲು ಸಂತೆಕಟ್ಟೆ ಸೇತುವೆ ಸಮೀಪ ವಾರಾಹಿ ಯೋಜನೆಯ ಕಿಂಡಿ ಆಣೆಕಟ್ಟು ಸಮಸ್ಯೆಯಿಂದ ನದಿಯ ನೀರಿನ ಒತ್ತಡ ಹೆಚ್ಚಾಗಿ ರಸ್ತೆ ಹಾಗೂ ಸುತ್ತಮುತ್ತಲಿನ ಭೂಮಿಗೆ ಭಾರೀ ಹಾನಿಯಾಗಿದೆ. ಪರಿಣಾಮವಾಗಿ ರಸ್ತೆಯಲ್ಲಿ ದೊಡ್ಡ ಬಿರುಕುಗಳು ಉಂಟಾಗಿ, ಕೆಲವು ಭಾಗಗಳು ಸಂಪೂರ್ಣ ಕೊಚ್ಚಿ ಹೋಗಿದ್ದವು.

ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಸಾಮಾಜಿಕ ಕಾರ್ಯಕರ್ತರಾದ ಸತೀಶ್ ಪೂಜಾರಿ ಕೀಳಂಜೆ ಅವರು ನಿರಂತರ ಹೋರಾಟ ನಡೆಸಿ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಶಾಸಕರ ಗಮನಕ್ಕೆ ವಿಷಯವನ್ನು ತಂದಿದ್ದರು. ಅವರ ನಿರಂತರ ಪ್ರಯತ್ನದ ಫಲವಾಗಿ ಇದೀಗ ತಾತ್ಕಾಲಿಕವಾಗಿ ಮಣ್ಣು ಹಾಕಿ ರಸ್ತೆ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿದೆ.

ಆದರೆ, ಈ ರಸ್ತೆಯನ್ನು ಮೂರನೇ ಬಾರಿ ತಾತ್ಕಾಲಿಕವಾಗಿ ದುರಸ್ತಿ ಮಾಡಲಾಗುತ್ತಿದ್ದು, ಇನ್ನೂ 15 ದಿನಗಳಲ್ಲಿ ಮಳೆಗಾಲ ಆರಂಭವಾಗುವ ಸಾಧ್ಯತೆ ಇರುವುದರಿಂದ ಮತ್ತೆ ಮಣ್ಣು ಕೊಚ್ಚಿ ಹೋಗುವ ಭೀತಿ ವ್ಯಕ್ತವಾಗಿದೆ.

ಈ ಹಿನ್ನೆಲೆಯಲ್ಲಿ, ಉಡುಪಿ ನಗರಸಭೆ ವ್ಯಾಪ್ತಿಯ ಬಜೆ ಡ್ಯಾಮ್‌ನಿಂದ ಸಂತೆಕಟ್ಟೆ ಸೇತುವೆ ತನಕ ಶಾಶ್ವತ ನದಿ ದಂಡೆ ಯೋಜನೆ ಜಾರಿಗೆ ತರಬೇಕೆಂದು ಸಾರ್ವಜನಿಕರು ಹಾಗೂ ರೈತರು ಆಗ್ರಹಿಸಿದ್ದಾರೆ. ನದಿಯ ಎರಡೂ ಬದಿಗಳಲ್ಲಿ ಕಲ್ಲು ಅಳವಡಿಸಿ ರಕ್ಷಣಾ ಗೋಡೆ ನಿರ್ಮಿಸಿದರೆ, ಮೂರು ಗ್ರಾಮ ಪಂಚಾಯಿತಿ ಹಾಗೂ ನಗರಸಭೆ ವ್ಯಾಪ್ತಿಯ ಫಲವತ್ತಾದ ಕೃಷಿಭೂಮಿಗಳು ಮತ್ತು ನಿವಾಸ ಪ್ರದೇಶಗಳು ನದಿ ಪಾಲಾಗುವುದನ್ನು ತಪ್ಪಿಸಬಹುದಾಗಿದೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ.

ಈ ಕುರಿತು ತಕ್ಷಣ ಕ್ರಿಯಾ ಯೋಜನೆ ರೂಪಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕೆಂದು ಸಾಮಾಜಿಕ ಕಾರ್ಯಕರ್ತರು ಹಾಗೂ ಸ್ಥಳೀಯರು ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಸತೀಶ್ ಪೂಜಾರಿ ಕೀಳಂಜೆ, ಅರುಣ್ ಪೂಜಾರಿ ಮಾಯ್ಯಾಡಿ, ರೀನೇಶ್ ಪೂಜಾರಿ ಮಾಯಾಡಿ, ಸಿರ್ಲಾ ಡಿಸೋಜ ನಾಗರಾಜಿಡ್ಡ ಉಪ್ಪುರು, ಅವಿನಾಶ್ ಶೆಟ್ಟಿ ತೆಂಕಬೆಟ್ಟು ಸೇರಿದಂತೆ ಹಲವರು ಸಾರ್ವಜನಿಕರು ಮತ್ತು ರೈತರ ಪರವಾಗಿ ಆಗ್ರಹ ವ್ಯಕ್ತಪಡಿಸಿದರು.

ಇದೇ ವೇಳೆ ತಾತ್ಕಾಲಿಕವಾಗಿ ರಸ್ತೆ ದುರಸ್ತಿ ಕಾರ್ಯಕ್ಕೆ ಸಹಕರಿಸಿದ ಶಾಸಕರು, ಅಧಿಕಾರಿಗಳು ಹಾಗೂ ಊರು ಗ್ರಾಮ ಪಂಚಾಯಿತಿಗೆ ಸತೀಶ್ ಪೂಜಾರಿ ಕೀಳಂಜೆ ಅವರು ಅಭಿನಂದನೆ ಸಲ್ಲಿಸಿದರು.

LEAVE A REPLY

Please enter your comment!
Please enter your name here