ಪಂಜಾಬ್​ನಲ್ಲಿ ಧರ್ಮಸ್ಥಳದ ಯುವತಿ ಸಾವಿನ ಕಾರಣ ಕೊನೆಗೂ ಬಹಿರಂಗ

0
1215

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಮೂಲದ ಏರೋನಾಟಿಕ್ಸ್ ಇಂಜಿನಿಯರ್ ನಿಗೂಢ ಸಾವು ಪ್ರಕರಣ‌ಕ್ಕೆ ಸಂಬಂಧಿಸಿದಂತೆ ಯುವತಿ ಪ್ರೇಮ ವೈಫಲ್ಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುವುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಆಕಾಂಕ್ಷಾ ಎಸ್ ನಾಯರ್ (22) ಮೃತ ದುರ್ದೈವಿ.

ಧರ್ಮಸ್ಥಳದ ಬೊಳಿಯೂರು ನಿವಾಸಿಯಾಗಿರುವ ಸುರೇಂದ್ರ ನಾಯರ್ ಹಾಗೂ ಸಿಂಧೂದೇವಿ ದಂಪತಿಯ ಪುತ್ರಿ ಆಕಾಂಕ್ಷಾ ಎಸ್ ನಾಯರ್ ಅವರು ಮೇ.17 ರಂದು ಪಂಜಾಬ್​ನ ಪಗ್ವಾರದ ಲವ್ಲಿ ಪ್ರೊಫೆಷನಲ್ ವಿಶ್ವವಿದ್ಯಾಲಯದ ಕಟ್ಟಡದ ನಾಲ್ಕನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತ ಆಕಾಂಕ್ಷಾ ಅವರು ಇದೇ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಬಿಜಿಲ್ ಮ್ಯಾಥ್ಯೂ ಎಂಬುವರನ್ನು ಪ್ರೀತಿಸುತ್ತಿದ್ದರು. ಪ್ರಾಧ್ಯಾಪಕ ಬಿಜಿಲ್ ಮ್ಯಾಥ್ಯೂ ಕೇರಳದ ಕೊಟ್ಟಾಯಂ ನಿವಾಸಿಯಾಗಿದ್ದು, ಎರಡು ಮಕ್ಕಳ ತಂದೆಯಾಗಿದ್ದಾರೆ. ಆಕಾಂಕ್ಷಾ ಪ್ರಾಧ್ಯಾಪಕ ಮ್ಯಾಥ್ಯೂ ಜೊತೆ ಅವರ ಮನೆಗೆ ಹೋಗಿ ಮದುವೆಯಾಗುವಂತೆ ಒತ್ತಾಯಿಸಿ ಜಗಳ ಮಾಡಿದ್ದರು.

ಬಳಿಕ ಆಕಾಂಕ್ಷಾ ಕಾಲೇಜಿನಲ್ಲೂ‌ ಬಿಜಿಲ್ ಮ್ಯಾಥ್ಯೂ ಅವರ ಜೊತೆ ಜಗಳವಾಡಿದ್ದಾರೆ. ನಂತರ, ಕಟ್ಟಡದ ನಾಲ್ಕನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಆತ್ಮಹತ್ಯೆಗೆ ಪ್ರೇರಣೆ ನೀಡಿದ್ದ ಹಿನ್ನೆಲೆಯಲ್ಲಿ ಮ್ಯಾಥ್ಯೂ ವಿರುದ್ಧ ಪಂಜಾಬ್​ನ ಜಲಂಧರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೋಮವಾರ (ಮೇ.19) ಸಂಜೆ ವೇಳೆಗೆ ಧರ್ಮಸ್ಥಳ ಬೊಳಿಯೂರು ಮನೆಯಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ.

ಆಕಾಂಕ್ಷಾ, 6 ತಿಂಗಳಿಂದ ದೆಹಲಿಯಲ್ಲಿ ಏರೋಸ್ಪೇಸ್ ಇಂಜಿನಿಯರ್​​ ಆಗಿ ಕೆಲಸ ಮಾಡುತ್ತಿದ್ದರು. ಉದ್ಯೋಗಕ್ಕಾಗಿ ಜಪಾನ್​ಗೆ ಹೋಗಲು ಯೋಚಿಸಿದ್ದರು. ಈ ಹಿನ್ನೆಲೆಯಲ್ಲಿ, ಶನಿವಾರ (ಮೇ.19) ಕಾಲೇಜಿಗೆ ತೆರಳಿ ಸರ್ಟಿಫಿಕೇಟ್​ಗಳನ್ನು ತೆಗೆದುಕೊಂಡು ಬರಲು ಹೋಗಿದ್ದರು. ಅಲ್ಲದೆ, ಸರ್ಟಿಫಿಕೇಟ್​ಗಳನ್ನು ತೆಗೆದುಕೊಂಡಿರುವುದಾಗಿ ಪೋಷಕರಿಗೆ ಕರೆ ಮಾಡಿ ಆಕಾಂಕ್ಷಾ ತಿಳಿಸಿದ್ದರು.

LEAVE A REPLY

Please enter your comment!
Please enter your name here