ಸೇವಾ ಧರ್ಮಕ್ಕೆ ಮಾದರಿಯಾಗಿದ್ದ ಸಂಘದ ಹಿರಿಯ ಕಾರ್ಯಕರ್ತ ಕೇಶವರಾಯ ಪ್ರಭು ಮಣಿಪಾಲ ನಿಧನಕ್ಕೆ ಜಿಲ್ಲಾ ಬಿಜೆಪಿ ತೀವ್ರ ಸಂತಾಪ

0
5

ಸಿಂಡಿಕೇಟ್ ಬ್ಯಾಂಕ್ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಉಡುಪಿ ಜಿಲ್ಲಾ ಕಾರ್ಯವಾಹರಾಗಿ, ಮಂಗಳೂರು ವಿಭಾಗದ ಸೇವಾ ಪ್ರಮುಖರಾಗಿ, ಕುಂದಾಪುರದ ಸೇವಾ ಸಂಗಮದ ಅಧ್ಯಕ್ಷರಾಗಿ ಸಮರ್ಪಣಾಭಾವದ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಸಂಘದ ಹಿರಿಯ ಸಕ್ರಿಯ ಕಾರ್ಯಕರ್ತ ಕೇಶವರಾಯ ಪ್ರಭು ಮಣಿಪಾಲ (80 ವರ್ಷ) ಅವರ ನಿಧನಕ್ಕೆ ಉಡುಪಿ ಜಿಲ್ಲಾ ಬಿಜೆಪಿ ತೀವ್ರ ಸಂತಾಪ ವ್ಯಕ್ತಪಡಿಸಿದೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜವಾಬ್ದಾರಿಯ ಸಹಿತ ಬೂತ್ ಮಟ್ಟದಲ್ಲಿ ಸದೃಢ ಪಕ್ಷ ಸಂಘಟನೆಗೆ ಕೊಡುಗೆ ನೀಡಿರುವ ಜೊತೆಗೆ ತನ್ನ ನಿವಾಸವನ್ನೇ ಸೇವಾ ಕೇಂದ್ರವನ್ನಾಗಿಸಿಕೊಂಡು ಇಡೀ ಜೀವನವನ್ನು ಸಮಾಜದ ಶ್ರೇಯೋಭಿವೃದ್ಧಿಗೆ ಮುಡಿಪಾಗಿಟ್ಟ ಕೇಶವರಾಯ ಪ್ರಭು ಅವರು ಮರಣಾನಂತರವೂ ನೇತ್ರ ದಾನದ ಮೂಲಕ ಸೇವಾಧರ್ಮ ಮೆರೆದಿರುವ ವಿಚಾರ ಎಲ್ಲರಿಗೂ ಪ್ರೇರಣಾದಾಯಕ. ಅಗಲಿದ ಅವರ ದಿವ್ಯಾತ್ಮಕ್ಕೆ ಭಗವಂತನು ಚಿರ ಶಾಂತಿಯನ್ನು ಕರುಣಿಸಲಿ, ಕುಟುಂಬಕ್ಕೆ ಅವರ ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುವುದಾಗಿ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೇಶವರಾಯ ಪ್ರಭು ಅವರ ನಿಧನಕ್ಕೆ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರುಗಳಾದ ಯಶ್ಪಾಲ್ ಎ. ಸುವರ್ಣ, ವಿ.ಸುನೀಲ್ ಕುಮಾರ್, ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕುಮಾರ್ ಕೊಡ್ಗಿ, ಗುರುರಾಜ್ ಗಂಟಿಹೊಳೆ, ಬಿಜೆಪಿ ಮುಖಂಡರುಗಳಾದ ಕೆ.ಉದಯ ಕುಮಾರ್ ಶೆಟ್ಟಿ, ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಮಟ್ಟಾರ್ ರತ್ನಾಕರ ಹೆಗ್ಡೆ, ಕುಯಿಲಾಡಿ ಸುರೇಶ್ ನಾಯಕ್, ಶಿಲ್ಪಾ ಜಿ. ಸುವರ್ಣ, ದಿನಕರ ಬಾಬು, ದಿನಕರ ಶೆಟ್ಟಿ ಹೆರ್ಗ, ರೇಷ್ಮಾ ಉದಯ ಶೆಟ್ಟಿ, ಶ್ರೀಕಾಂತ್ ನಾಯಕ್ ಸಹಿತ ಪಕ್ಷದ ಪ್ರಮುಖರು ಮತ್ತು ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.