ಗೋ ಕಳ್ಳತನ ಮಾಡುವವರನ್ನು ಗಡಿಪಾರು ಮಾಡಲು ಧೈರ್ಯವಿಲ್ಲವೇ? ಹಿಂದೂ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಕ್ರಮ ಕೈಗೊಳ್ಳುತ್ತಿರುವ ಪೊಲೀಸ್ ಇಲಾಖೆಗೆ ನೇರ ಸವಾಲು
ಮೂಡುಬಿದಿರೆ : ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತ ಜಗದೀಶ್ ಅವರನ್ನು ಮೂಡುಬಿದಿರೆಯಿಂದ ಶಿವಮೊಗ್ಗ ಜಿಲ್ಲೆಗೆ ಗಡಿಪಾರು ಮಾಡಿರುವ ಪೊಲೀಸ್ ಇಲಾಖೆಯ ಕ್ರಮವನ್ನು ಹಿಂದೂ ಜಾಗರಣ ವೇದಿಕೆ ತೀವ್ರವಾಗಿ ಖಂಡಿಸುತ್ತದೆ. ಹಿಂದೂ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ವಿವಿಧ ಪ್ರಕರಣಗಳನ್ನು ದಾಖಲಿಸುವ ಮೂಲಕ ಅವರ ನೈತಿಕ ಧೈರ್ಯವನ್ನು ಕುಗ್ಗಿಸುವ ಪ್ರಯತ್ನ ನಡೆಯುತ್ತಿದೆ. ಕಾಂಗ್ರೆಸ್ ಸರ್ಕಾರವನ್ನು ಮೆಚ್ಚಿಸುವ ಉದ್ದೇಶದಿಂದ ಹಿಂದೂ ಕಾರ್ಯಕರ್ತರನ್ನು ಗಡಿಪಾರು ಮಾಡುತ್ತಿರುವುದು ಪೊಲೀಸ್ ಇಲಾಖೆಯ ನಿಷ್ಪಕ್ಷಪಾತ ಕಾರ್ಯವೈಖರಿಯ ಬಗ್ಗೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಹಿಂದೂ ಜಾಗರಣ ವೇದಿಕೆ ಮೂಡುಬಿದಿರೆ ತಾಲೂಕು ಸಂಯೋಜಕ ಹರಿಚಂದ್ರ ಕೆ.ಸಿ. ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಗದೀಶ್ ಅವರ ವಿರುದ್ಧ ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಟ್ಟು ನಾಲ್ಕು ಪ್ರಕರಣಗಳಿದ್ದು, ಈಗಾಗಲೇ ಒಂದು ಪ್ರಕರಣ ನ್ಯಾಯಾಲಯದಲ್ಲಿ ಖುಲಾಸೆಗೊಂಡಿದೆ. ಉಳಿದ ಮೂರು ಪ್ರಕರಣಗಳು ವಿಚಾರಣಾ ಹಂತದಲ್ಲಿವೆ. ಯಾವುದೇ ಪ್ರಕರಣದಲ್ಲಿ ಅಂತಿಮ ತೀರ್ಪು ಹೊರಬಾರದಿರುವ ಸಂದರ್ಭದಲ್ಲಿ ಜಗದೀಶ್ ಅವರನ್ನು ಶಿವಮೊಗ್ಗ ಜಿಲ್ಲೆಗೆ ಗಡಿಪಾರು ಮಾಡುವ ಅಗತ್ಯವೇನಿತ್ತು? ಯಾರನ್ನು ಮೆಚ್ಚಿಸಲು ಪೊಲೀಸ್ ಇಲಾಖೆ ಇಂತಹ ಕ್ರಮಕ್ಕೆ ಮುಂದಾಗಿದೆ ಎಂಬುದು ನಮ್ಮ ಪ್ರಶ್ನೆಯಾಗಿದೆ.
ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿರಂತರವಾಗಿ ಹಟ್ಟಿಗಳಿಂದ ಗೋವುಗಳ ಕಳ್ಳತನ ಹಾಗೂ ಅಕ್ರಮ ಕಸಾಯಿಖಾನೆಗಳ ಚಟುವಟಿಕೆಗಳು ನಡೆಯುತ್ತಿವೆ ಎಂಬ ಆರೋಪಗಳಿದ್ದರೂ ಪೊಲೀಸ್ ಇಲಾಖೆ ಈ ವಿಚಾರದಲ್ಲಿ ನಿರೀಕ್ಷಿತ ಮಟ್ಟದ ಕ್ರಮ ಕೈಗೊಂಡಿಲ್ಲ. ಹಟ್ಟಿಯಿಂದ ಗೋವುಗಳನ್ನು ಕಳ್ಳತನ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿರುವ ಇಲಾಖೆ, ಹಿಂದೂ ಕಾರ್ಯಕರ್ತರ ವಿಚಾರದಲ್ಲಿ ಮಾತ್ರ ಅತ್ಯಂತ ಚುರುಕಾಗಿ ಗಡಿಪಾರು ಕ್ರಮಕ್ಕೆ ಮುಂದಾಗಿರುವುದು ಖಂಡನೀಯ.
ತಮ್ಮನ್ನು ದಕ್ಷ ಅಧಿಕಾರಿಗಳೆಂದು ಬಿಂಬಿಸಿಕೊಳ್ಳುವ ಪೊಲೀಸ್ ಅಧಿಕಾರಿಗಳಿಗೆ ನಾವು ನೇರ ಸವಾಲು ಹಾಕುತ್ತೇವೆ. ನಿಮಗೆ ನಿಜವಾಗಿಯೂ ಕಾನೂನು ಜಾರಿಗೊಳಿಸುವ ಧೈರ್ಯವಿದ್ದರೆ, ಗೋ ಕಳ್ಳತನ ಹಾಗೂ ಅಕ್ರಮ ಕಸಾಯಿಖಾನೆ ಚಟುವಟಿಕೆಗಳಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಿ. ಗೋ ಕಳ್ಳರ ಹಾಗೂ ಅಕ್ರಮ ಕಸಾಯಿ ಕಾನೆ ನಡೆಸುವವರನ್ನು ಗಡಿಪಾರು ಸೇರಿದಂತೆ ಸೂಕ್ತ ಕ್ರಮ ಜರುಗಿಸಿ. ರಾಜ್ಯದ ವಿವಿಧ ಭಾಗಗಳಲ್ಲಿ ನಡೆಯುವ ಗೋ ಕಳ್ಳತನ ಪ್ರಕರಣಗಳಲ್ಲಿ ಮೂಡುಬಿದಿರೆ ಭಾಗದ ಆರೋಪಿಗಳ ಹೆಸರು ಕೇಳಿಬರುತ್ತಿರುವ ವಿಚಾರವನ್ನೂ ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು.
ಅದನ್ನು ಬಿಟ್ಟು ಹಿಂದೂ ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಿ, ಗಡಿಪಾರು ಮಾಡುವ ಮೂಲಕ ಅವರ ಧ್ವನಿಯನ್ನು ಅಡಗಿಸಲು ಪ್ರಯತ್ನಿಸುವುದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಪೊಲೀಸ್ ಇಲಾಖೆ ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ, ಧರ್ಮ-ಜಾತಿ ಭೇದವಿಲ್ಲದೆ ಎಲ್ಲರಿಗೂ ಸಮಾನವಾಗಿ ಕಾನೂನು ಅನ್ವಯಿಸುವಂತೆ ಕಾರ್ಯನಿರ್ವಹಿಸಬೇಕು. ಜಗದೀಶ್ ಅವರ ಗಡಿಪಾರು ಆದೇಶವನ್ನು ಮರುಪರಿಶೀಲಿಸಿ ನ್ಯಾಯ ಒದಗಿಸಬೇಕು ಎಂದು ಹರಿಚಂದ್ರ ಕೆ.ಸಿ. ಆಗ್ರಹಿಸಿದ್ದಾರೆ.

