ಇತಿಹಾಸ ಪ್ರಸಿದ್ಧ ಕ್ರೋಡ ಶ್ರೀ ಶಂಕರನಾರಾಯಣ

0
108

ಅಯೋಧ್ಯಾ ಮಥುರಾ ಮಾಯಾ ಕಾಶೀ ಕಾಂಚೀ ಅವಂತಿಕಾ |
ಪುರೀ ದ್ವಾರಾವತೀ ಚೈವ ಸಪ್ತೈತಾ ಮೋಕ್ಷದಾಯಕಾಃ ||
ಎಂಬುದಾಗಿ ರಾಮಕ್ಷೇತ್ರದಲ್ಲಿ ಈ ಸಪ್ತಕ್ಷೇತ್ರಗಳು ಪ್ರಸಿದ್ಧವಾಗಿವೆ. ಅಂತೆಯೇ –
ರೌಪ್ಯಪೀಠಂ ಕುಮಾರಾದ್ರಿಃ ಕುಂಭಕಾಶಿ ಧ್ವಜೇಶ್ವರಃ |
ಕ್ರೋಡ ಗೋಕರ್ಣ ಮುಕಾಂಬಾ ಸಪ್ತೈತಾ ಮೋಕ್ಷದಾಯಕಾಃ ||
ಎಂಬುದಾಗಿ ಈ ಸಪ್ತಕ್ಷೇತ್ರಗಳು ಅಂದರೆ ಉಡುಪಿ, ಸುಬ್ರಹ್ಮಣ್ಯ, ಕುಂಭಕಾಶಿ, ಕೋಟೇಶ್ವರ, ಕ್ರೋಡ, ಗೋಕರ್ಣ ಮತ್ತು ಕೊಲ್ಲೂರು ಈ ಏಳು ಕ್ಷೇತ್ರಗಳು ಮೋಕ್ಷದಾಯಕ ಯಾತ್ರಾಸ್ಥಳಗಳೆಂದು ಪರಶುರಾಮ ಕ್ಷೇತ್ರದಲ್ಲಿ ಪ್ರಸಿದ್ಧವಾಗಿವೆ. ಇವುಗಳಲ್ಲಿ ಐದನೇಯದ್ದಾಗಿರುವ ‘ಕ್ರೋಡ’ ಕ್ಷೇತ್ರವೇ ಈವಾಗ “ಶಂಕರನಾರಾಯಣ” ವೆಂಬ ಹೆಸರಿನಿಂದ ಪ್ರಸಿದ್ಧವಾಗಿರುತ್ತದೆ.

ಪೌರಾಣಿಕ ಹಿನ್ನೆಲೆ : ಮಹಾದೇವತೆಗಳಲ್ಲಿ ಸರ್ವವ್ಯಾಪಿಯಾದ ಪರಮಾತ್ಮನ ನಂತರ ಸೃಷ್ಟಿ, ಪಾಲನ, ಸಂಹಾರಗಳಲ್ಲಿ ಅಧಿಕೃತರಾದ ಬ್ರಹ್ಮ ವಿಷ್ಣು, ಪರಮೇಶ್ವರರು ಮೊದಲನೆಯವರು. ಅವರೆಲ್ಲರ ರೂಪಗಳು ಪರಮಾತ್ಮನ ಅತಿ ಸನ್ನಿಹಿತಗಳಾದ ಬೇರೆ ಬೇರೆ ರೂಪಗಳು. ಅವರನ್ನು ಅಭೇದ ಭಾವನೆಗಳಿಂದ ಪೂಜಿಸಬೇಕು.” ಏಕಂ ಸದ್ವಿಪ್ರಾಬಹುಧಾ ವದಂತಿ” – ಒಬ್ಬನೇ ಆದ ಪರಮಾತ್ಮನನ್ನು ಜ್ಞಾನಿಗಳು ಬಹುರೂಪನನ್ನಾಗಿ ಹೇಳುತ್ತಾರೆಂದು ಋಗ್ವೇದದಲ್ಲಿಯೂ, “ಸೃಷ್ಟಿಸ್ಥಿತ್ಯಂತ ಕರಣೀಂ ಬ್ರಹ್ಮ ವಿಷ್ಣು ಶಿವಾಭಿದಾಂ ಸಸಂಜ್ಞಾಂಯಾತಿ ಭಗವಾನೇಕ ಏವ ಜನಾರ್ದನಃ ||” – ಒಬ್ಬ ಭಗವಂತನು ಸೃಷ್ಟಿ ಪಾಲನ ಸಂಹಾರಕಾರಕ ಬ್ರಹ್ಮ ವಿಷ್ಣು ಶಿವ ಎಂಬ ಹೆಸರುಗಳನ್ನು ಹೊಂದಿರುತ್ತಾನೆ ಎಂದು ವಿಷ್ಣು ಪುರಾಣದಲ್ಲಿ ಪ್ರತಿಪಾದಿತವಾಗಿದೆ.

ವಸ್ತು ಸ್ಥಿತಿಯು ಹೀಗಿದ್ದರೂ, ಶಂಕರ ನಾರಾಯಣರಲ್ಲಿ ಭೇದವನ್ನು ಕಲ್ಪಿಸಿ ಪರಸ್ಪರ ದ್ವೇಷ ದೂಷಿತರಾದ ಮತ್ತು ಶಂಕರ ಯಾ ನಾರಾಯಣನ ಭಕ್ತರೆಂದು ತಮ್ಮನ್ನು ಘೋಷಿಸಿಕೊಳ್ಳುವ ಜನರನ್ನು ನೋಡಿ ಮರುಗಿದ ಕ್ರೋಡ ಮಹರ್ಷಿಗಳು ಶಂಕರನಾರಾಯಣರ ಐಕ್ಯವನ್ನು ಜಗತ್ತಿಗೆ ಪ್ರತ್ಯಕ್ಷವಾಗಿ ಪ್ರಕಟಿಸುವ ಆಕಾಂಕ್ಷೆಯಿಂದಲೂ, ದುಷ್ಟರಾದ ಖರ ರಟ್ಟಾಸುರರ ನಿಗ್ರಹವಾಗಿ ತನ್ಮೂಲಕ ಲೋಕದಲ್ಲಿ ಶಾಂತಿಯು ನೆಲೆಸಬೇಕೆಂದೂ,ಧರ್ಮದ ಉದ್ಧಾರವಾಗಬೇಕೆಂತಲೂ ವಾರಾಹೀ ನದೀ ತಟದಲ್ಲಿರುವ ಎತ್ತರವಾದ ನಾದೇಶಾನಲ ಬೆಟ್ಟದ ಮೇಲೆ ಏಕಾಂತ ಸ್ಥಳವನ್ನು ಆರಿಸಿಕೊಂಡು ಅಲ್ಲಿ ತಪಸ್ಸನ್ನಾಚರಿಸಿ ಶಂಕರನಾರಾಯಣರನ್ನು ಕ್ರೋಡ (ಶಂಕರನಾರಾಯಣ) ಕ್ಷೇತ್ರದಲ್ಲಿ ಒಂದೇ ವಿಗ್ರಹದಲ್ಲಿ ಪ್ರಕಟಪಡಿಸಿದ ಇತಿಹಾಸವು ಪದ್ಮಪುರಾಣದ ಪುಷ್ಕರ ಖಂಡದಲ್ಲಿ ಇಪ್ಪತ್ನಾಲ್ಕು ಅಧ್ಯಾಯಗಳಿಂದ ವರ್ಣಿತವಾಗಿದೆ. ಅವರು ತಪಸ್ಸು ಮಾಡಿದ ಬೆಟ್ಟಕ್ಕೆ “ಕ್ರೋಡಗಿರಿ” (ಪರ್ವತಗುಡ್ಡ) ಎಂತಲೂ, ಸ್ಥಳಕ್ಕೆ “ಕ್ರೋಡಾಶ್ರಮ”ವೆಂತಲೂ, ಈ ಕ್ಷೇತ್ರವು ಕ್ರೋಡ ಕ್ಷೇತ್ರವೆಂತಲೂ ಅಂದಿನಿಂದ ಪ್ರಸಿದ್ಧಿಗೊಂಡಿತು. ಸಮೀಪದಲ್ಲಿಯೇ ಕ್ರೋಡ ಮುನಿಗಳಿಗೆ ಶ್ರೀ ಶಂಕರನಾರಾಯಣ ಪ್ರತ್ಯಕ್ಷ ದರ್ಶನವನ್ನು ಕೊಟ್ಟ ಗುಹಾದ್ವಾರವಿದೆ. ಇದೇ ಆದಿ ಸ್ಥಳವೆಂದು ಖ್ಯಾತಿಗೊಂಡಿದೆ.”ವಾರಾಹಿ ಶುಕ್ತಿಮತೀ” ನದಿಯು ಇಲ್ಲಿಂದ ಒಂದು ಮೈಲು ದೂರದಲ್ಲಿದೆ (ಕೃಪೆ : ಶಂಕರನಾರಾಯಣ ಶತಕ).

ಐತಿಹಾಸಿಕ ಹಿನ್ನೆಲೆ : ಕ್ರೋಡ ಶ್ರೀ ಶಂಕರನಾರಾಯಣ ದೇವಸ್ಥಾನದ ಕಾಲಮಾನವು ಸುಮಾರು 11 ನೇ ಶತಮಾನ ಎಂಬುದಾಗಿ ಇತಿಹಾಸಕಾರರ ಅಭಿಮತ. ಅಂದರೆ ಸುಮಾರು 900 ವರ್ಷಗಳ ಇತಿಹಾಸ ಈ ದೇವಾಲಯಕ್ಕಿದೆ. ಪೂರ್ವದಲ್ಲಿ ಈ ಪ್ರದೇಶವು ‘ಕೊಡಗಿ’ ಎನ್ನುವ ಹೆಸರಿನಿಂದ ಕರೆಯಲ್ಪಟ್ಟಿತ್ತು. ಕೊಡಗಿ ಅಂದರೆ ಏರುಪೇರಾದ, ಕೊಂಕಾದ ಭೂಮಿ – ಗುಡ್ಡ ಕಾಡಿನ ಪ್ರದೇಶ ಎಂಬರ್ಥ ಕೊಡುತ್ತದೆ. ‘ಕೊಡಗಿ’ ಯ ಸಂಸ್ಕೃತ ರೂಪವೇ ‘ಕ್ರೋಡ’.

ವಿಜಯನಗರ, ತುಳುರಾಜ್ಯ ಮತ್ತು ಮಲೆರಾಜ್ಯದ ಬಹಳಷ್ಟು ರಾಜರು, ಸಾಮಂತರು ದಾನ – ದತ್ತಿಗಳನ್ನು ವಿವಿಧ ಕಾಲಮಾನದಲ್ಲಿ ಈ ದೇವಸ್ಥಾನಕ್ಕೆ ಕೊಟ್ಟಿರುವುದು ತುಳುನಾಡಿನ ವಿವಿಧ ಶಾಸನಗಳಿಂದ ತಿಳಿದುಬರುತ್ತದೆ. ಕ್ರೋಡ ಶ್ರೀ ಶಂಕರನಾರಾಯಣ ದೇವಸ್ಥಾನಕ್ಕೆ ಸಂಬಂಧಿಸಿದ ಪ್ರಥಮ ಶಾಸನ 1357 ಸಾಮಾನ್ಯ ವರ್ಷದ ವಿಜಯನಗರದ ಬುಕ್ಕರಾಯನ ಕಾಲದ ಶಾಸನವಾಗಿದೆ. ಇದುವರೆಗೆ ಕ್ರೋಡ ಶಂಕರನಾರಾಯಣ ದೇವಸ್ಥಾನಕ್ಕೆ ಸಂಬಂಧಿಸಿದ ವಿವಿಧ ಕಾಲಮಾನಕ್ಕೆ ಸೇರಿದ ಸುಮಾರು 10 ಶಾಸನಗಳು ಪ್ರಕಟಗೊಂಡಿವೆ. ಇನ್ನಷ್ಟು ಶೋಧನೆ ಕೈಗೊಂಡಲ್ಲಿ ಇದರ ಸಂಖ್ಯೆ ಇನ್ನೂ ಜಾಸ್ತಿ ಆಗಲೂಬಹುದು.

ಶಿಲಾಶಾಸನಗಳು(SII VOL IX, Part – II) : ಶಂಕರನಾರಾಯಣ ಸಮೀಪದ ಕೈಯಾಣಿಯಲ್ಲಿ ದೊರೆತ 1357 ಸಾಮಾನ್ಯ ವರ್ಷದ ವಿಜಯನಗರದ ಬುಕ್ಕರಾಯನ ಕಾಲದ ಶಾಸನದಲ್ಲಿ ಬಾರಕೂರಿನ ರಾಜ್ಯಪಾಲನಾಗಿದ್ದ ಮಲೆಯ ದಂಣನಾಯಕರು ಕೊಡಂಗಿ ಶಂಕರನಾರಾಯಣ ದೇವರ ನಿತ್ಯದ ಅಮೃತಪಡಿ ಮತ್ತು ನಂದಾದೀಪಕ್ಕೆ ಈ ಹಿಂದೆ ಮಾಡಿದ ದಾನದ ಕೃಷಿ ಭೂಮಿಯು ನಷ್ಟವಾದ ಕಾರಣಕ್ಕೆ ಹೊಸದಾಗಿ ಒಂದಿಷ್ಟು ಭೂಮಿಯನ್ನು ಕೊಂಡು ದಾನ ಧಾರಾಪೂರ್ವಕವಾಗಿ ಧಾರೆಯನೆರೆದು ಕೊಡುತ್ತಾರೆ. ಈ ಶಾಸನದಲ್ಲಿ ಶಂಕರನಾರಾಯಣ ದೇವಸ್ಥಾನ ಇರುವ ಪ್ರದೇಶವನ್ನು ಕೊಡಂಗಿ ಎಂದು ಕರೆದಿದ್ದಾರೆ.

ಶಂಕರನಾರಾಯಣದ ಹಿರೆಬೈಲ್ ಶಾಸನವು ವಿಜಯನಗರದ ಬುಕ್ಕರಾಯನ ಕಾಲದಲ್ಲಿ ಬಾರಕೂರಿನಿಂದ ಮಲಯದಂಡನಾಯಕನು ಆಳ್ವಿಕೆ ಮಾಡುವಾಗಿನ ಶಾಸನವಾಗಿದ್ದು (ಕೈಯಾಣಿ ಶಾಸನ) 1380 ಸಾ.ವ ದಲ್ಲಿ ಇಮ್ಮಡಿ ಹರಿಹರನ ಕಾಲದಲ್ಲಿ ಅದನ್ನು ಪುನರ್ ಊರ್ಜಿತಗೊಳಿಸಿರುವುದಾಗಿದೆ. ಈ ಹಿಂದೆ ಕೊಡಗಿಯ ಶಂಕರನಾರಾಯಣ ದೇವರ ಅಮೃತಪಡಿ ಮತ್ತು ನಂದಾದೀಪಕ್ಕೆ ಬಿಟ್ಟ ಭೂಮಿಯ ಜವಾಬ್ದಾರಿಯನ್ನು ಕರಾರಿನ ಮೇಲೆ ‘ಮಹಾಮನೆ’ಯ ಕಿಮಿ ಸೆಟ್ಟಿಗೆ ಧಾರಾಪೂರ್ವಕವಾಗಿ ಬರೆದು ಕೊಟ್ಟ ಪತ್ರ ಇದಾಗಿದೆ.

ಕುಂದಾಪುರ ತಾಲೂಕು ಹೆರವಳ್ಳಿಯಲ್ಲಿನ 1399 ಸಾ.ವ ದ ವಿಜಯನಗರದ ಇಮ್ಮಡಿ ಹರಿಹರನ ಕಾಲದ ಶಾಸನ(ವೈಶಾಲಿ ಜಿ. ಆರ್ ಅವರ ಶೋಧನೆ)ದಲ್ಲಿ ಹಾರದವಳ್ಳಿಯ ಕೊಟ್ಯಂಣ ಅಡಹನು ಕೊಡಗಿ ಶಂಕರನಾರಾಯಣ ದೇವಸ್ಥಾನದ ಸಮೀಪದ ಗೋಪಿನಾಥ ಮಠದ ಶ್ರೀ ಗೋಪಿನಾಥ ದೇವರಿಗೆ ದಿನಂಪ್ರತಿ ಒಪ್ಪಾನೆ ಅಕ್ಕಿಯ ನೈವೇದ್ಯ ಮತ್ತು ಶ್ರೀ ಶಂಕರನಾರಾಯಣ ಪ್ರೀತ್ಯರ್ಥವಾಗಿ ಇಬ್ಬರು ಬ್ರಾಹ್ಮಣರಿಗೆ ಭೋಜನದ ವೆಚ್ಚಕ್ಕೆ ಶಂಕರನಾರಾಯಣ ಸಮೀಪದ ಹಾರದವಳ್ಳಿ(ಹೆರವಳ್ಳಿ) ಯ ಬಿತ್ತುವ ಬೀಜ 9 ಮುಡಿ ವಿಸ್ತೀರ್ಣದ ಭೂಮಿಯನ್ನು ಶ್ರೀ ಜ್ಞಾನೇಂದ್ರ ಭಾರತೀ ಶ್ರೀಪಾದಂಗಳಿಗೆ ಅರ್ಥಪರಿಚ್ಛೇದವಾಗಿ ಕೊಂಡು ಮೂಲ ಪರಿಚ್ಛೇದವಾಗಿ ಕೊಟ್ಟು, ಆ ಕೃಷಿ ಭೂಮಿಗೆ ಕಟ್ಟಿಕೊಂಡ ಮುಂದಾಮುಂಡಿಯ ತೆರಿಗೆ ಕಾಟಿ ಗದ್ಯಾಣ 4(ಅಕ್ಷರದಲ್ಲಿ ನಾಲ್ಕು ಹೊನ್ನು) ನ್ನು ವರುಷಂಪ್ರತಿ ಕೊಟ್ಯಂಣ ಅಡಹನ ಅಪ್ಪಣೆಯಿಂದ ಶೃಂಗೇರಿಯ ಶ್ರೀ ನರಸಿಂಹ ಭಾರತೀ ಶ್ರೀಪಾದಂಗಳ ಹಾಲಾಡಿಯ ಮಠಕ್ಕೆ ತೆತ್ತು ಬರಬೇಕೆಂಬುದಾಗಿ ಶಾಸನವನ್ನು ಬರೆಸಿದ್ದನು.

ಶಂಕರನಾರಾಯಣ ಹಳೆ ಅಗ್ರಹಾರದ 1401 ಸಾ.ವ ದ ವಿಜಯನಗರದ ಇಮ್ಮಡಿ ಹರಿಹರನ ಕಾಲದ ಶಾಸನದ ಸಂದರ್ಭದಲ್ಲಿ ಮಹಾಪ್ರಧಾನ ಗೋಪಯ ದಂಣನಾಯಕರ ಸ್ವಕಾಗುಣ್ಯದಿಂದ ಬಸವಂಣ ಒಡೆಯರು ವಿಜಯನಗರದ ಪ್ರತಿನಿಧಿಯಾಗಿ ಬಾರಕೂರ ರಾಜ್ಯವನ್ನು ಆಳ್ವಿಕೆ ಮಾಡುತ್ತಿದ್ದರು. ಆಗ ಮಾದಾಡಿ ತೊಳಹರು ಕೊಡಗೆಯ ಶ್ರೀ ಶಂಕರನಾರಾಯಣ ದೇವರಿಗೆ ಉದಯ ಕಾಲದ ಅಮೃತಪಡಿಗೆ 9 ಮುಡಿ 6 ಹಾನೆ ಅಕ್ಕಿಯನ್ನು ಕಾಲ ಕಾಲಕ್ಕೆ ಸಲ್ಲಿಕೆ ಆಗುವ ಹಾಗೆ ಸೌಡದ ಭಾಗದಲ್ಲಿ ಒಂದಷ್ಟು ಭೂಮಿಯನ್ನು ಸರ್ವಮಾನ್ಯವಾಗಿ ಧರ್ಮಾಚಂದ್ರಾರ್ಕಸ್ಥಾಯಿಯಾಗಿ ನಡೆದು ಬರುವಂತಾಗಿ ತ್ರಿಕರಣ ಶುದ್ಧವಾಗಿ ಧಾರಾಪೂರ್ವಕವಾಗಿ ಎರೆದು ಕೊಟ್ಟರು. ಅದೂ ಅಲ್ಲದೆ ಶ್ರೀ ಶಂಕರನಾರಾಯಣ ದೇವರು ರಥೋತ್ಸವದ ಮಾರನೆಯ ದಿನ ಅವಭೃತ ಉತ್ಸವ, ತೆಪ್ಪೋತ್ಸವದ ಸಂದರ್ಭದಲ್ಲಿ ಸವಡದ ಹಳ್ಳಿಗೆ ಬಿಜಯಂಗೈದು ಗಂಗಾ ಸ್ನಾನವ (ಅವಭೃತ ಸ್ನಾನ) ಮಾಡಿದಾಗ ಶ್ರೀಪಾದಾಂಬುಜ ಕಾಣಿಕೆಯ ಕ್ಷಯಕ್ಕೆ ಅಡಿಕೆ ಎಲೆಗೆ ಕಾಟಿ ಗದ್ಯಾಣ 3, ಪ್ರತಿ ದಿನ ನಂದಾದೀಪ್ತಿಯ ಮರ್ಯಾದೆಯಲು ನಡೆವ ಎಣ್ಣೆಗೆ ಕಾಟಿ ಗದ್ಯಾಣ 6 ಒಟ್ಟು ಒಂಬತ್ತು ಹೊನ್ನನ್ನು ಶಂಕರನಾರಾಯಣ ದೇವರಿಗೆ ಕಾಲ ಕಾಲಕ್ಕೆ ನಡೆದು ಬರುವ ಹಾಗೆ ಧರ್ಮಾಚಂದ್ರಾರ್ಕಸ್ಥಾಯೀಯಾಗಿ ಧಾರೆಯನೆರೆದು ಕೊಡುತ್ತಾರೆ. ಅದಲ್ಲದೆ ಪೂರ್ವದಲ್ಲಿ ಶಂಕರನಾರಾಯಣ ದೇವರಿಗೆ ಪ್ರದೋಷ ಪೂಜೆಗೆ ನೈವೇದ್ಯಕ್ಕೆ ಪ್ರತಿ ತಿಂಗಳಿಗೆ ಅಕ್ಕಿ ಹಾನೆ 4, ಬ್ರಾಹ್ಮಣ ಜನ ಇಬ್ಬರ ಭೋಜನಕ್ಕೆ ಅಕ್ಕಿ ಹಾನೆ 2, ಒಟ್ಟು 6 ಹಾನೆ ಅಕ್ಕಿಯನ್ನು ದಾನವಾಗಿ ನೀಡಿರುವ ಮಾಹಿತಿ ಈ ಶಾಸನದಲ್ಲಿ ಇದೆ.

ಕುದಿ ಗ್ರಾಮದ 1438 ಸಾ.ವ ದ ಶಾಸನ : ವಿಜಯನಗರದಿಂದ ಇಮ್ಮಡಿ ದೇವರಾಯ ಮಹಾರಾಯರು ಆಳುವ ಕಾಲದಲ್ಲಿ ಅಣ್ಣಪ್ಪ ಒಡೆಯರು ಬಾರಕೂರಿನ ರಾಜ್ಯಪಾಲರಾಗಿದ್ದರು. ಸೂಲಣಿಗಂಬ ತೊಳಹರ ಕಾಲದಲ್ಲಿ ಬಾಣಂಚರ ಅಳಿಯ ಬಾಣತಿ ಸಾವಂತರ ಮಗ ಕೊಡುಸರ ಸಾವಂತ – ಕಸಕಣಂಜತನ ಮಗ ನಾರಣ ಕಣಂಜನ ಕೈಯಿಂದ ಕೃಷಿ ಭೂಮಿಯನ್ನು ಕೊಂಡು ಕೊಡಗಿಯ ಶಂಕರನಾರಾಯಣ ದೇವರ ಅಮೃತಪಡಿಗೆ, ಧೂಪಕ್ಕೆ ಧಾರಾಪೂರ್ವಕವಾಗಿ ಮೂಲವನೆರೆದು ಕೊಡುತ್ತಾರೆ.

ಕೊಕ್ಕರ್ಣೆಯಲ್ಲಿನ 1443 ಸಾ.ವ ದ ವಿಜಯನಗರದ ಇಮ್ಮಡಿ ದೇವರಾಯ ಮಹಾರಾಯರ ಕಾಲದ ಶಿಲಾ ಶಾಸನ : ಆಗ ಬಾರಕೂರಿನಲ್ಲಿ ತಿಮ್ಮಣ್ಣ ಒಡೆಯರು ರಾಜ್ಯಪಾಲರಾಗಿದ್ದರು. ನಾಗಣ್ಣ ತೊಳಹರ ಕಾಲದಲ್ಲಿ ಬೆಮ್ಮಣಂಚನ ಅಳಿಯ ಗೋವಿಂದ ಸೆಟ್ಟಿ ಕೃಷಿ ಭೂಮಿಯನ್ನು ಕೊಡಗಿಯ ಶ್ರೀ ಶಂಕರನಾರಾಯಣ ದೇವರ ಪಾಣಿ ಪೀಠದಲಿ ಧರ್ಮಕೆ ಧಾರೆಯನೆರೆದನು.

1502 ರ ಸಾ.ವ ದಲ್ಲಿ ಬಸವರಸ ವೊಡೆಯರು ಕೊಡಗಿ ಶಂಕರನಾರಾಯಣ ದೇವರಿಗೆ ಕೊಟ್ಟ ಧರ್ಮಶಾಸನ ಬ್ರಹ್ಮಾವರ ಬಳಿಯ ಹಂದಾಡಿಯಲ್ಲಿದೆ. 7 ಮುಡಿ ಬೀಜ ಬಿತ್ತುವ ವಿಸ್ತೀರ್ಣದ ಕೃಷಿ ಭೂಮಿಯನ್ನು ಸೋಮವಾರದ ಸೂರ್ಯಗ್ರಹಣದ ಪುಣ್ಯ ಕಾಲದಲ್ಲಿ ನರಸಣನಾಯಕ ಒಡೆಯರಿಗೆ ಧಂರ್ಮವಾಗಿ ಶ್ರೀ ಶಂಕರನಾರಾಯಣ ದೇವರ ಸನ್ನಿಧಿಯಲು ಹಾರಭಂಡಿಯ ಮಲ್ಲರಸ ಒಡೆಯರ ಮಕ್ಕಳು ಬಸವರಸ ಒಡೆಯರ ತಂಮಂದಿರು ಸೋಮಣಯನವರು ಕೊಡಗಿಯ ಶಂಕರನಾರಾಯಣ ದೇವರ ಸಂನಿಧಿಯಲು ನಡೆಸುವ ಬ್ರಾಹ್ಮಣ ಭೋಜನಕ್ಕೆ ಆಚಂದ್ರಾರ್ಕಸ್ಥಾಯಿಯಾಗಿ ಧಂರ್ಮನಡೆವುದಕೆ ಧಾರೆಯನೆರೆದು ಕೊಟ್ಟ ಧರ್ಮಶಾಸನ ಇದಾಗಿದೆ. ಈ ಕೃಷಿ ಭೂಮಿಯ ಗೇಣಿ ಅಕ್ಕಿಯು ಮಠದ ಸೋವ ಭಟಗೆ ನಡೆದು ಬರಬೇಕೆಂಬುದಾಗಿ ಶಾಸನದಲ್ಲಿ ಉಲ್ಲೇಖಿಸಿದ್ದಾರೆ.

ಶಂಕರನಾರಾಯಣ ದೇವಸ್ಥಾನದ ಪ್ರಾಕಾರದಲ್ಲಿರುವ 1544 ಸಾ.ವ ದ ಶಿಲಾಶಾಸನ : ವಿಜಯನಗರದ ಸದಾಶಿವರಾಯ ಮಹಾರಾಯರು ಆಳ್ವಿಕೆ ಮಾಡುತ್ತಿದ್ದ ಕಾಲದಲ್ಲಿ ಚೆಂನಯರಸಂಣನವರು ತಮ್ಮ ರಾಜ್ಯವ (ಸೂರಾಲು) ಪ್ರತಪಾಲಿಸುತ್ತಿಹ ಸಮಯದಲ್ಲಿ ಶ್ರೀಮನ್ಮಹಾದೇವದೇವೊತ್ತಮನಾದ ಶ್ರೀ ಶಂಕರನಾರಾಯಣ ದೇವರ ದಿವ್ಯಶ್ರೀ ಪಾದಪದ್ಮಂಗಳಿಗೆ ಮೆಱುಉಮಾಯೆಯ ಚೆನ್ನಬೊಮ್ಮವೊಡೆಯರ ಶಿಶ್ಯರಾದ ದಬುಗೆಱೆವೊಡೆಯರು ಸಮರ್ಪಿಸಿದ ಧರ್ಮಶಾಸನ. ಚೆಂನಯ್ಯರಸಂಣನವರ ಕಯ್ಯಲ್ಲಿ ಕ್ರಯಮೂಲವಾಗಿ (ಕ್ರಯದ್ರವ್ಯ ಗದ್ಯಾಣ 300, ಅಕ್ಷರದಲ್ಲಿ ಮುನ್ನೂರು ವರಹ) ಕೊಂಡ ಭೂಮಿಯನ್ನು ಶ್ರೀ ಶಂಕರನಾರಾಯಣ ದೇವರ ನಿತ್ಯದಲೂ ನಡೆವ ಸೇವೆಗೆ ಸಹಿರಂಣ್ಯೋದಕ ದಾನ ಧಾರಾಪೂರ್ವಕವಾಗಿ ಸಮರ್ಪಿಸಿದರು. ಆ ದಿನಗಳಲ್ಲಿ ನಡೆಯುತ್ತಿದ್ದ ಸೇವೆಗಳೆಂದರೆ -… ಅಭಿಷೇಕ, ಶತ ಬಿಲ್ವಪತ್ರೆ, ಶ್ರೀ ತುಳಸಿ ಅರ್ಚನೆ.. ಇತ್ಯಾದಿ.

ಅದೇ ಸ್ಥಳದಲ್ಲಿರುವ 1562 ಸಾ.ವ ದ ಶಿಲಾಶಾಸನ – ಸದಾಶಿವರಾಯ ಮಹಾರಾಯರು ವಿಜಯನಗರದಿಂದ ಆಳ್ವಿಕೆ ಮಾಡುವ ಸಮಯದಲ್ಲಿ ಕೆಳದಿಯ ಚೌಡ ಗೌಡರ ಮಗ ಕೆಳದಿಯ ಸದಾಶಿವರಾಯ ನಾಯಕರಿಗೆ ಅರಗ, ಗುತ್ತಿ, ತುಳುರಾಜ್ಯ – ಬಾರಕೂರು ಮತ್ತು ಮಂಗಳೂರನ್ನು ಅಮರಮಾಗಣೆಯಾಗಿ ಪಾಲಿಸಿದ ಕಾಲದಲ್ಲಿ ತುಳುರಾಜ್ಯಕೆ ಪುಂಣ್ಯಸ್ತಳವಾದ ಶ್ರೀ ಶಂಕರನಾರಾಯಣ ಸ್ವಾಮಿಯ ಸಂನಿಧಿಯಲಿ ಕೆಳದಿಯ ಸದಾಶಿವರಾಯ ನಾಯಕ ಅಯ್ಯನವರು ತಮ್ಮ ತಂದೆ ಚೌಡಪ್ಪಗೂ ತಮ್ಮ ತಾಯಿ ತಿರುಮಂಮನವರಿಗೂ ಕೈಲಾಸ ಪದವಿಯಾಗಬೇಕೆಂದು ವಿರೂಪಾಕ್ಷ ದೇವರಿಗೆ ಕಟ್ಟಿಸಿದ ಮಠಕ್ಕೆ ಭಿಕ್ಷೆ ಸ್ವಸ್ತಿ. ಕುಪ್ಪಾರು ಕೇಶವ ಹೆಬ್ಬಾರ ಮತ್ತು ತಿರುಮಲ ತೊಳಹರ ಅಳಿಯ ಚೆಂನಯರಸ ತೊಳಹರ ಕೈಯಲ್ಲಿ ಕೊಂಡ ಭೂಮಿಯ ಕ್ರಯ (ಕ್ರಮವಾಗಿ 200 ವರಹ ಮತ್ತು 400 ವರಹ) ಶಾಸನ ಇದಾಗಿದೆ.

ಶಂಕರನಾರಾಯಣ ದೇವಸ್ಥಾನದ ಪುಷ್ಕರಣಿ ಎದುರಿನಲ್ಲಿದ್ದ ಬಹಳಷ್ಟು ತೃಟಿತಗೊಂಡಿರುವ ತೇದಿ ಇರದ ಶಾಸನವು ಈ ಹಿಂದೆ ದೇವರಿಗೆ ಅಮೃತಪಡಿ ಮತ್ತು ನಂದಾದೀಪಕ್ಕೆ ಭೂದಾನ ಬಿಟ್ಟ ಬಗ್ಗೆ ಅಲ್ಪ ಸ್ವಲ್ಪ ಮಾಹಿತಿ ನೀಡುತ್ತದೆ.

ಅಂಕಿತ ನಾಮ ಶಾಸನಗಳು : ಪೂರ್ವದಲ್ಲಿ ರಾಜಾದಿ ಮಹಾರಾಜರು, ಭಕ್ತರು ಈ ದೇವರಿಗೆ ಭಕ್ತಿಪೂರ್ವಕವಾಗಿ ಅರ್ಪಿಸಿದ ಚಿನ್ನ ಬೆಳ್ಳಿ ಒಡವೆ ವಸ್ತುಗಳು ಪ್ರೇಕ್ಷಣೀಯಗಳಾಗಿವೆ. ಈ ಹಿಂದೆ ಇಕ್ಕೇರಿ ಕೆಳದಿ ಎಂದು ಕರೆಯಲ್ಪಡುತ್ತಿದ್ದ ಸಂಸ್ಥಾನದ ಮಹಾರಾಜರು ಕ್ರೋಡ ಶ್ರೀ ಶಂಕರನಾರಾಯಣ ದೇವರ ಭಕ್ತರಾಗಿದ್ದು ದೇವರಿಗೆ ಒಡವೆ ವಸ್ತುಗಳನ್ನೂ ಕಾಣಿಕೆಯನ್ನೂ ಅರ್ಪಿಸಿರುತ್ತಾರೆ. ದೇವಸ್ಥಾನದಲ್ಲಿ ಈಗಿರುವ ಚಿನ್ನದ ಮುಖವಾಡ, ಬೆಳ್ಳಿಯ ಕೊಡಪಾನ ಮುಂತಾದ ಒಡವೆಗಳಲ್ಲಿ “ಕೆಳದಿ ಸೋಮಶೇಖರ ನಾಯಕರ ಭಕ್ತಿ” ಎಂಬುದಾಗಿ ಲೇಖಿಸಲ್ಪಟ್ಟಿರುವುದನ್ನು ಕಾಣಬಹುದಾಗಿದೆ.

ಕೆಳದಿ ಸೋಮಶೇಖರ ನಾಯಕ (1715 – 40 ಸಾ.ವ ) : ಶೋಭಕುೃತ್ಸಂವತ್ಸರದ ಶ್ರಾವಣ ಶು ೧೩ ಲು (1724 ಸಾ.ವ?) ಕೊದಗಿ ಶಂಕರನಾರಾಯಣ ದೇವರಿಗೆ ಕೆಳದಿ ಸೋಮಶೇಖರ ನಾಯಕರು ಮಾಡಿಸಿಕೊಟ್ಟ ಬೆಳ್ಳಿ ಕೊಪ್ಪರಿಗೆ.
ಶಂಕರನಾರಾಯಣ ದೇವರಿಗೆ ಸೋಮಶೇಖರ ನಾಯಕರ ಭಕ್ತಿ( ಬೆಳ್ಳಿ ಕೊಡಪಾನ).

ಸ್ವಸ್ತಿ ಶ್ರೀ ಜಯಾಭ್ಯುದಯ ಶಾಲಿವಾಹನ ಶಕವರ್ಷ ೧೬೫೩ ನೆಯ ಸಾಧಾರಣ ಸಂವತ್ಸರದ ಮಾಘ ಬ ೧೪ ಲ್ಲು (1731 ಸಾ.ವ? )ಶ್ರೀಮತ್ಕೊಡಗಿ ಶಂಕರನಾರಾಯಣ ದೇವರಿಗೆ ಕೆಳದಿ ಸೋಮಶೇಖರ ನಾಯಕರ ಭಕ್ತಿ (ಶಂಕರ – ನಾರಾಯಣರಿಗೆ ಚಿನ್ನದ ಮುಖವಾಡ) .

ಕೆಳದಿ ಬಸಪ್ಪ ನಾಯಕ (1740 – 55 ಸಾ.ವ ): ಶಂಕರನಾರಾಯಣ ದೇವರಿಗೆ ಕೆಳದಿ ವೀರಭದ್ರ ನಾಯಕರ ಮಕ್ಕಳು ಬಸಪ್ಪ ನಾಯಕರ ಭಕ್ತಿ (ಒಂದು ಜೊತೆ ಬೆಳ್ಳಿಯ ಕಾಲುದೀಪ).
(ಸಹಕಾರ : ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ)

ವಜ್ರ ವೈಢೂರ್ಯಗಳಿಂದ ಖಚಿತವಾದ ಸುವರ್ಣ ಪಾದುಕೆಗಳು ಎರಡು, ಸ್ವರ್ಣಮಯವಾದ ಶ್ರೀ ಶಂಕರನಾರಾಯಣ ಉತ್ಸವಮೂರ್ತಿ, ಶ್ರೀ ದೇವರ ಅಲಂಕಾರ ವಸ್ತುಗಳಾದ ಚಿನ್ನದ ಹಾರಗಳು, ಪದಕಗಳು, ಬೆಳ್ಳಿಯ ಪಲ್ಲಂಕಿ, ಬೆಳ್ಳಿಯ ಪಾತ್ರೆಗಳು, ಬೆಳ್ಳಿಯ ರಥ, ರಜತ ಬಿರುದಾವಳಿಗಳು ಇವೇ ಮುಂತಾದ ಒಡವೆ ವಸ್ತುಗಳನ್ನು ನಾವು ಕಾಣಬಹುದಾಗಿದೆ (ಇವುಗಳಲ್ಲಿ ತೇದಿಯ ವಿವರಗಳಾಗಲೀ, ಅಂಕಿತ ನಾಮಗಳಾಗಲೀ ಇಲ್ಲ).

ದೇವಾಲಯದಲ್ಲಿರುವ “ಭೋಗಮಂಟಪ”, ಬೆಳ್ಳಿಯ ಶಂಕರನಾರಾಯಣ ವಿಗ್ರಹ, ಪ್ರಖ್ಯಾತಿಪಟ್ಟ “ದೊಡ್ಡ ಗಂಟೆ”, “ಸ್ಯಂಧನ ಮಹಾ ರಥ” ಇವೇ ಮುಂತಾದವುಗಳನ್ನು ಭಕ್ತರು ಸದಾ ಕಾಲದಲ್ಲಿ ನೋಡಬಹುದಾಗಿದೆ.

ಕ್ರೋಡ ಶ್ರೀ ಶಂಕರನಾರಾಯಣ ದೇವರ ಪರಮ ಭಕ್ತರಾಗಿದ್ದ ಕೆಳದಿ ಅರಸರುಗಳು : ನಗರ ಸಂಸ್ಥಾನ ಅಸ್ತಿತ್ವದಲ್ಲಿದ್ದ ಕಾಲದಲ್ಲಿ ಈ ದೇವಸ್ಥಾನಕ್ಕೂ ಸಂಸ್ಥಾನಕ್ಕೂ ನಿಕಟ ಸಂಪರ್ಕವಿದ್ದಿತ್ತು. ಸಂಸ್ಥಾನದ ರಾಜಮನೆತನದವರು ಈ ದೇವಾಲಯದ ಮೇಲ್ವಿಚಾರವನ್ನು ತೆಗೆದುಕೊಳ್ಳುತ್ತಿದ್ದರೆಂದು ಅರ್ಥವಾಗುವುದು. ಪ್ರತಿ ವರುಷದಲ್ಲಿ ಧನುಸಂಕ್ರಮಣ ದಿವಸ ರಥೋತ್ಸವವು ಪ್ರಾರಂಭವಾಗಿ ಮುಹೂರ್ತಬಲಿ ಎಂಬ ಉತ್ಸವವು ಜರಗಿ, ಉತ್ಸವ ದೇವರು ಹೊರಟು, ನಗರ ಸಂಸ್ಥಾನಕ್ಕೆ ತೆರಳಿ, ರಾಜಪರಿವಾರದವರೊಂದಿಗೆ ವೈಭವಯುತವಾಗಿ ವಾಪಾಸು ಈ ದೇವಾಲಯಕ್ಕೆ ಬಂದು, ಧ್ವಜಾರೋಹಣಾದಿ ಆರು ದಿವಸಗಳ ಉತ್ಸವಗಳು ನಡೆದು ಏಳನೇ ದಿವಸದಲ್ಲಿ ಶ್ರೀಮನ್ಮಹಾರಥೋತ್ಸವವೂ, ಎಂಟು ಒಂಭತ್ತನೇ ದಿವಸಗಳಲ್ಲಿ ಅವಭೃತ, ಧ್ವಜ ವಿಸರ್ಜನೆ, ಪೂರ್ಣಾಹುತಿ, ಮಂತ್ರಾಕ್ಷತೆ ಮುಂತಾದ ಕಾರ್ಯಗಳು ನೆರವೇರಿ, ರಥೋತ್ಸವ ಕಾರ್ಯವು ಮುಗಿಯುತ್ತಿತ್ತು. ಅಂದರೆ ಧನುಸಂಕ್ರಮಣದಿಂದ ಒಂದು ತಿಂಗಳುಗಳ ಕಾಲ ಮಹೋತ್ಸವವು ಜರಗಿ ಮಕರ ಮಾಸ 2ನೇ ದಿನ ಶ್ರೀಮನ್ಮಹಾರಥೋತ್ಸವವು ಜರಗುತ್ತಿತ್ತು. ಕಾಲ ಬದಲಾದರೂ ಈಗ ಅಂದಿನ ಕುರುಹಾಗಿ ದೇವಾಲಯದಲ್ಲಿ ಧನುಸಂಕ್ರಮಣ ದಿವಸದಲ್ಲಿಯೇ “ಮುಹೂರ್ತಬಲಿ” ಉತ್ಸವವು ಜರಗುವುದು. ಇದರಿಂದ ಅಂದಿನ ನಗರ ಸಂಸ್ಥಾನದ ಅರಸು ಮನೆತನಕ್ಕೂ ಈ ದೇವಾಲಯಕ್ಕೂ ಇದ್ದ ನಿಕಟ ಸಂಬಂಧದ ಅರಿವಾಗುವುದು (ಮಾಹಿತಿ : ಶ್ರೀ ಶಂಕರನಾರಾಯಣ ಕ್ಷೇತ್ರ ಮಹಾತ್ಮೆ).

ಕ್ರೋಡ ಶ್ರೀ ಶಂಕರನಾರಾಯಣ ದೇವರ ಈ ವರ್ಷದ “ಶ್ರೀ ಮನ್ಮಹಾರಥೋತ್ಸವ” ಕಾರ್ಯಕ್ರಮವು ತಾ. 16-01-2026 ಶುಕ್ರವಾರದಂದು ನೆರವೇರಲಿದೆ.

ಕಾಷ್ಠ ಶಿಲ್ಪ ವೈಭವ :” ಶ್ರೀಮಂತಿಬಾಯಿ ಸ್ಮಾರಕ ಸರ್ಕಾರಿ ವಸ್ತು ಸಂಗ್ರಹಾಲಯ” – ಬಿಜೈ, ಮಂಗಳೂರು. ಇಲ್ಲಿ ಕ್ರೋಡ ಶಂಕರನಾರಾಯಣ ದೇವಸ್ಥಾನಕ್ಕೆ ಸಂಬಂಧಿಸಿದ ಸುಮಾರು 16ನೇ ಶತಮಾನಕ್ಕೆ ಸೇರಿದ ಕಾಷ್ಠ ಶಿಲ್ಪಗಳನ್ನು (ಮರದ ಅಲಂಕಾರಿಕ ಪಟ್ಟಿಕೆ) ಸಂರಕ್ಷಿಸಿ ಇಟ್ಟಿದ್ದಾರೆ. ಇದರಲ್ಲಿ ಋಷಿ ಮುನಿಗಳ, ನಾರದರ ಶಿಲ್ಪಗಳೂ ಸೇರಿವೆ. ಹಾಗೆಯೇ ಅಲ್ಲಿರುವ ಮರದ ಜಾಲಂಧ್ರದ ಶಿಲ್ಪವು ಮನಮೋಹಕವಾಗಿವೆ.

ಇದೇ ತರಹ ಶಂಕರನಾರಾಯಣ ದೇವಸ್ಥಾನದಲ್ಲೂ ಕೆಲವೊಂದು ಹಳೆಯ (ಕ್ರಿ. ಶ. 16 – 17 ನೇ ಶತಮಾನ) ಕಾಲದ ಮರದ ಚಿತ್ರ ಪಟ್ಟಿಕೆಗಳ ಸಂಗ್ರಹ ಇದೆ. ಮುಖ್ಯವಾಗಿ ಆಗಿನ ಕಾಲದಲ್ಲಿ ನಡೆಯುತ್ತಿದ್ದ ಉತ್ಸವಾದಿಗಳ ಚಿತ್ರಣ ಇರುವ ಫಲಕಗಳು, ದೇವ ದೇವಿಯರ ಶಿಲ್ಪಗಳು, ಪುರಾಣ ಕಥೆಗಳನ್ನು ಹೇಳುವ ಉಬ್ಬು ಶಿಲ್ಪಗಳನ್ನು ನೋಡಬಹುದಾಗಿದೆ. ದೇವಸ್ಥಾನದ ಇತಿಹಾಸವನ್ನು, ಹಿಂದಿನ ವೈಭವಗಳನ್ನು, ಆಚರಣೆಗಳನ್ನು ಸಂಸ್ಕೃತಿಯನ್ನು ಅರಿಯಲು ಇವುಗಳು ಬಲು ಸಹಕಾರಿಯಾಗಿವೆ. ದೇವಾಲಯದ ಅಧಿಷ್ಠಾನ, ಪ್ರಾಕಾರದಲ್ಲಿನ ಶಿಲಾಪಟ್ಟಿಕೆಯಲ್ಲಿಯೂ ಪುರಾಣ ಕಥೆಗಳನ್ನು ತಿಳಿಸುವ ಒಂದಿಷ್ಟು ಉಬ್ಬು ಶಿಲ್ಪಗಳನ್ನು ಕಾಣಬಹುದಾಗಿದೆ. ಇವುಗಳು ಕ್ಷೇತ್ರದ ಪ್ರಾಚೀನತೆಯನ್ನು ತಿಳಿಸುತ್ತವೆ.

ದೇವಸ್ಥಾನದ ಬ್ರಹ್ಮರಥ(ಸ್ಯಂದನ ಮಹಾರಥ)ಕ್ಕೂ ಪ್ರಾಚೀನ ಇತಿಹಾಸವಿದೆ. ರಥದ ನಿರ್ಮಾಣದ ಸಂದರ್ಭದಲ್ಲಿ ಶಾಸನವನ್ನು ಕೂಡ ರಥದಲ್ಲಿ ಕೊರೆದಿದ್ದಾರೆ. “ಸ್ವಸ್ತಿ ಶ್ರೀ ಶಖ ೧೭೪೪ ( ಕ್ರಿ.ಶ 1822) ನೆ ವಿಶ್ರು ಸಂ ಪುಷ್ಯ ಬ ೬ ಲು ಶ್ರೀ ಶಂಕರನಾರಾಯಣ” ಎನ್ನುವ ಒಕ್ಕಣೆ ರಥದ ಅಡ್ಡಪಟ್ಟಿಯಲ್ಲಿ ಇದೆ. ಅಂದರೆ ಈಗಿನ ರಥದ ಇತಿಹಾಸವನ್ನು 204 ವರ್ಷಗಳಷ್ಟು ಹಿಂದಕ್ಕೆ ಕೊಂಡೊಯ್ಯುತ್ತದೆ. ರಥದಲ್ಲಿ ದೇವ – ದೇವಿಯರ, ಪುರಾಣ ಕಥೆಗಳ ಬಹಳಷ್ಟು ಉಬ್ಬು ಶಿಲ್ಪಗಳನ್ನು ಸುಂದರವಾಗಿ, ಸೂಕ್ಷ್ಮವಾಗಿ ಕೆತ್ತಿದ್ದಾರೆ.

ಮಾರ್ಗ ಮಾಹಿತಿ : ಸಪ್ತಕ್ಷೇತ್ರಗಳಲ್ಲಿ ಪುಣ್ಯಮಯವಾದ ಈ ಕ್ರೋಡ ಶ್ರೀ ಶಂಕರನಾರಾಯಣ ಕ್ಷೇತ್ರವು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮಧ್ಯಪ್ರದೇಶದಲ್ಲಿ, ಪಶ್ಚಿಮ ಸಮುದ್ರದಿಂದ 16 ಮೈಲು ದೂರದಲ್ಲಿ ಕುಂದಾಪುರ – ಶಿವಮೊಗ್ಗ ಹೆದ್ದಾರಿಯಲ್ಲಿದೆ. ಈ ಕ್ಷೇತ್ರದಿಂದ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರಕ್ಕೆ 26 ಮೈಲಿಗಳೂ, ಕೋಟೇಶ್ವರಕ್ಕೆ 14 ಮೈಲುಗಳೂ, ಉಡುಪಿ ಕ್ಷೇತ್ರಕ್ಕೆ 34 ಮೈಲುಗಳ ಅಂತರವಿದೆ.

ರಾಜ ಮಹಾರಾಜರ ಕಾಲದಲ್ಲಿಯೇ ಕೊಡಗಿ ಶ್ರೀ ಶಂಕರನಾರಾಯಣ ಬಹಳ ಕಾರಣಿಕ ಕ್ಷೇತ್ರವಾಗಿ ಪ್ರಸಿದ್ಧಿಯನ್ನು ಪಡೆದಿರುವುದು ಶಿಲಾ ಶಾಸನಗಳ ಅಧ್ಯಯನದಿಂದ ತಿಳಿದುಬರುತ್ತದೆ. 1544 ಸಾ.ವರ್ಷದ ಶಿಲಾಶಾಸನದಲ್ಲಿ ಕ್ರೋಡ ಶ್ರೀ ಶಂಕರನಾರಾಯಣ ದೇವರನ್ನು “.. ಶ್ರೀ ಮನ್ಮಹಾ ದೇವದೇವೋತ್ತಮನಾದ ಶ್ರೀ ಶಂಕರನಾರಾಯಣ ದೇವರ ದಿವ್ಯಶ್ರೀ ಪಾದಪದ್ಮಂಗಳಿಗೆ…” ಎಂಬುದಾಗಿ ಉಲ್ಲೇಖ ಇದ್ದರೆ, 1562 ಸಾಮಾನ್ಯ ವರ್ಷದ ಶಿಲಾಶಾಸನದಲ್ಲಿ “… ತುಳುರಾಜ್ಯಕ್ಕೆ ಪುಂಣ್ಯಸ್ತಳವಾದ ಶಂಖರನಾರಾಯಣ ಸ್ವಾಮಿಯ ಸಂನಿಧಿಯಲಿ.. ” ಎನ್ನುವ ಒಕ್ಕಣೆ ಇರುವುದನ್ನು ಈ ಮೊದಲೇ ಓದಿರುವಿರಿ. ಈ ಹಿಂದಿನ ಆಳರಸರು, ಸಾಮಂತರು, ಅಧಿಕಾರಿ ವರ್ಗದವರು ಮತ್ತು ಪ್ರಜೆಗಳು ತುಳುರಾಜ್ಯದ ಕೊಡಗಿ ಶ್ರೀ ಶಂಕರನಾರಾಯಣ ದೇವರಲ್ಲಿ ಎಷ್ಟೊಂದು ಶ್ರದ್ಧಾ ಭಕ್ತಿಯನ್ನು ಹೊಂದಿದ್ದರು ಎನ್ನುವುದಕ್ಕೆ ಅವರು ಕಾಲಕಾಲಕ್ಕೆ ದೇವರಿಗೆ ಸಲ್ಲಿಸಿರುವ ದಾನ ದತ್ತಿಗಳೇ ಸಾಕ್ಷಿ.

ಸಾಕಾಶೀ ಕ್ರೋಡ ನಗರೀ ಸಗಂಗಾಶುಕ್ತಿಮತೀ ನದೀ |
ಸ ಚ ವಿಶ್ವೇಶ್ವರೋ ದೇವ ಸಾಕ್ಷಾತ್ ಕ್ರೋಡಪುರೇಶ್ವರ ||

ಅಂದರೆ ಪವಿತ್ರತೆಯಲ್ಲಿ ಈ ಕ್ರೋಡನಗರಿಯು (ಶಂಕರನಾರಾಯಣ ಕ್ಷೇತ್ರ) ಕಾಶಿಗೆ ಸಮಾನವೆಂತಲೂ, ಈ ಪ್ರದೇಶದಲ್ಲಿ ಹರಿಯುತ್ತಿರುವ ವಾರಾಹೀ ಶುಕ್ತಿಮತೀ ನದಿಯು ಗಂಗಾನದಿಗೆ ಸಮಾನವೆಂತಲೂ, ಈ ಕ್ಷೇತ್ರದಲ್ಲಿ ವಿರಾಜಿಸುತ್ತಿರುವ ಶಿವಕೇಶವಾತ್ಮಕನಾದ ಶ್ರೀ ಶಂಕರನಾರಾಯಣ ಸ್ವಾಮಿಯು ಕಾಶಿಯಲ್ಲಿರುವ ಶ್ರೀ ವಿಶ್ವೇಶ್ವರನಿಗೆ ಸಮಾನವೆಂತಲೂ ಪೂರ್ವಜರು ತಿಳಿದು ವರ್ಣಿಸಿರುತ್ತಾರೆ.

– ಕಂಚಾರ್ತಿ ರಾಜೇಶ್ವರ ಉಪಾಧ್ಯಾಯ


LEAVE A REPLY

Please enter your comment!
Please enter your name here