ಬೆಂಗಳೂರು : ಬೆಂಗಳೂರಿನ ಬಸವೇಶ್ವರನಗರ “ಹಿಂದೂ ಸಮಾಜೋತ್ಸವ ಆಯೋಜನೆ ಸಮಿತಿಯ ವತಿಯಿಂದ ಸಮಾಜೋತ್ಸವ ಕಾರ್ಯಕ್ರಮವನ್ನು ಅನೇಕ ಮಠಾಧೀಶರ ಸಮ್ಮುಖದಲ್ಲಿ ಹಾಗೂ ಸಮಾಜದ ಅನೇಕ ಗಣ್ಯ ವ್ಯಕ್ತಿಗಳ ಉಪಸ್ಥಿತಿಯಲ್ಲಿ ವಿಜೃಂಭಣೆಯಿಂದ ಬಸವೇಶ್ವರನಗರ ಕಡಂಬಿ ಶಾಲೆಯ ವಠಾರದಲ್ಲಿ ಆಚರಿಸಲಾಯಿತು.
ಈ ಹಿಂದೂ ಸಮಾಜೋತ್ಸವದಲ್ಲಿ ಪರಮಪೂಜ್ಯ ಸುಬುಧೇಂದ್ರ ತೀರ್ಥ ಶ್ರೀ ಪಾದಂಗಳವರು ಶ್ರೀ ರಾಘವೇಂದ್ರ ಸ್ವಾಮಿ ಮಠ , ಮಂತ್ರಾಲಯ ಇವರು ವಿಡಿಯೋ ಕಾನ್ಫರೆನ್ಸ್ ಮೂಲಕ ಇಲ್ಲಿ ಸೇರಿರುವ ಹಿಂದು ಬಾಂಧವರಿಗೆ ಆಶೀರ್ವಾದಗಳನ್ನು ನೀಡಿದರು.

ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪರಮಪೂಜ್ಯ ಡಾ|| ವಿಶ್ವ ಸಂತೋಷ್ ಭಾರತಿ ಗುರುಗಳು ಬಾರ್ಕೂರು ಮಹಾಸಂಸ್ಥಾನ ಉಡುಪಿ ಹಾಗೂ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ನಿರಂಜನಾಂದಪುರಿ ಸ್ವಾಮೀಜಿಗಳು ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕಾಗಿನೆಲೆ ಹಾಗೂ ಪರಮಪೂಜ್ಯ ಶ್ರೀ ಕೃಷ್ಣ ಯಾದಾವನಂದ ಸ್ವಾಮೀಜಿ ಯಾದವ ಗುರುಪೀಠ, ಚಿತ್ರದುರ್ಗ ಹಾಗೂ ಪರಮಪೂಜೆ ಶ್ರೀ ಷಡಾಕ್ಷರಿ ಮುನಿ ದೇಶೀ ಕೇಂದ್ರ ಸ್ವಾಮೀಜಿಗಳು ಆದಿಜಾಂಭವ ಮಹಾಸಂಸ್ಥಾನ ಮಠ ಚಿತ್ರದುರ್ಗ ಇವರುಗಳು ನೆರೆವ ಜನರಿಗೆ ನಮ್ಮ ಹಿಂದೂ ನೂತನ ಧರ್ಮದ ಬಗ್ಗೆ ಉಪದೇಶಗಳನ್ನು ಮಾಡಿದರು.
ಇದೇ ಹಿಂದೂ ಸಮಾಜೋತ್ಸವದ ಅಂಗವಾಗಿ ಪ್ರಪ್ರಥಮವಾಗಿ ಪರಿಪೂರ್ಣವಾಗಿ ತುಳು ಭಾಷೆಯಲ್ಲಿ ಅನುವಾದ ಮಾಡಿರುವ “ತುಳು ಶ್ರೀಮದ್ಭಗವದ್ಗೀತೆ” ತುಳು ಗ್ರಂಥದ ಲೋಕಾರ್ಪಣ ಕಾರ್ಯವನ್ನು ಪರಮಪೂಜ ಡಾ|| ವಿಶ್ವ ಸಂತೋಷ ಭಾರತಿ ಗುರುಗಳು ಬಾರ್ಕೂರು ಮಹಾ ಸಂಸ್ಥಾನ ಉಡುಪಿ ಇವರು ಮೇಲಿನ ಇತರ ಸ್ವಾಮೀಜಿಗಳ ಸಮ್ಮುಖದ ಲೋಕಾರ್ಪಣೆ ಮಾಡಿದರು. ಈ “ತುಳು ಶ್ರೀಮದ್ಭಗವದ್ಗೀತೆ ” ಗ್ರಂಥವನ್ನು ಕಾರ್ಕಳ ತಾಲೂಕಿನ ಶ್ರೀಯುತ ಮಹಾಬಲ ಪೂಜಾರಿ ಮಾಳ ಇವರು ತುಳು ಭಾಷೆಯಲ್ಲಿ ಅನುವಾದ ಮಾಡಿರುತ್ತಾರೆ. ಈ ಸಂದರ್ಭದಲ್ಲಿ ವಿಧಾನಸಭಾ ಶಾಸಕರಾದ ಶ್ರೀಯುತ ಸುರೇಶ್ ಕುಮಾರ್ ರವರು ಉಪಸ್ಥಿತರಿದ್ದು ಕಾರ್ಯಕ್ರಮದ ಮೆರಗನ್ನು ಹೆಚ್ಚಿಸಿರುತ್ತಾರೆ.
ಮೂಲತ ಸಂಸ್ಕೃತ ಭಾಷೆಯಲ್ಲಿರುವ ಶ್ರೀಮದ್ಭಗವದ್ಗೀತೆ ನಮ್ಮ ದೇಶದ ಹೆಚ್ಚಿನ ಎಲ್ಲಾ ರಾಜ್ಯ ಭಾಷೆಗಳಲ್ಲಿ ಅನುವಾದಿತವಾಗಿ ಪ್ರಕಟಣೆ ಆಗಿರುತ್ತದೆ. ನಮ್ಮ ಕನ್ನಡ ಭಾಷೆಯಲ್ಲಿಯೂ ಅನೇಕ ಲೇಖಕರು ಭಗವದ್ಗೀತೆಯನ್ನು ಅನುವಾದಿಸಿರುತ್ತಾರೆ. ಆದರೆ ನಮ್ಮ ರಾಜ್ಯದ ಕರಾವಳಿ ಪ್ರದೇಶವಾಗಿರುವ ಮಂಗಳೂರು ,ಉಡುಪಿ ,ಕಾರ್ಕಳ ,ಪುತ್ತೂರು ಹಾಗೂ ಕೇರಳದ ಕಾಸರಗೊಡು ಪ್ರದೇಶಗಳಲ್ಲಿ ಮಾತನಾಡುವ ನಾಡ ಭಾಷೆಯ ತುಳು ಭಾಷೆಯಲ್ಲಿ ಭಗವದ್ಗೀತೆಯು ಅನುವಾದಿತವಾಗಿ ಪ್ರಕಟಣೆಯಾಗಿಲ್ಲ . ನಮ್ಮ ತುಳುನಾಡಲ್ಲಿ ಎಲ್ಲರೂ ಆರಾಧಿಸುವ ದೇವತಾರಾಧನೆ ಮತ್ತು ದೈವರಾದನೆ ಮತ್ತು ನಾಗರಾಧನೆಗಳಿಗೆ ಸಂಬಂಧಪಟ್ಟಂತೆ ಅನೇಕ ಪಾಡ್ದನಗಳು ಮತ್ತು ಗೀತೆಗಳು ಪುಸ್ತಕಗಳ ರೂಪದಲ್ಲಿ “ತುಳು ಭಾಷೆಯಲ್ಲಿ “ಪ್ರಕಟಣೆ ಆಗಿರುತ್ತದೆ . ಇದೇ ಮೊದಲ ಬಾರಿಗೆ ತುಳು ಭಗವದ್ಗೀತೆಯ ಅನುವಾದಿತವಾಗಿ ಪ್ರಕಟಣೆಯಾಗಿರುತ್ತದೆ .ಈ ತುಳು ಶ್ರೀಮದ್ ಭಗವದ್ಗೀತೆಯನ್ನು ತುಳುಬಾಂಧವರು ಕೊಂಡುಕೊಂಡು ಇದನ್ನು ಅನುವಾದಿಸಿದ ಲೇಖಕರಿಗೆ ಪ್ರೋತ್ಸಾಹ ನೀಡಬೇಕೆಂದು ಆಶಿಸಲಾಗಿದೆ. ಇದನ್ನು ಖರೀದಿ ಮಾಡಲು ಬಯಸುವವರು ಲೇಖಕರ ಮೊಬೈಲ್ ನಂಬರ್ 7892385562 ಸಂಪರ್ಕಿಸಬೇಕೆಂದು ವಿನಂತಿಸಲಾಗಿದೆ.

