ವಾಮನ್ ರಾವ್ ಬೇಕಲ್ ಅವರಿಗೆ ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು: ಡಾ. ಜಯಪ್ಪ ಹೊನ್ನಾಳಿ

0
8

ಕಾಸರಗೋಡು : ಗಡಿನಾಡಿನಲ್ಲಿ ನಿರಂತರವಾಗಿ ಕನ್ನಡ ಸೇವೆಯಲ್ಲಿ ಸಮರ್ಪಣೆಯಿಂದ ತೊಡಗಿಸಿಕೊಂಡು, ಕನ್ನಡಕ್ಕಾಗಿ ಅಕ್ಷರಶಃ ತಮ್ಮ ತನು-ಮನ-ಧನವನ್ನೇ ಅರ್ಪಿಸಿರುವ ಕನ್ನಡ ಭವನದ ಸ್ಥಾಪಕ ವಾಮನ್ ರಾವ್ ಬೇಕಲ್ ಅವರಿಗೆ ಕರ್ನಾಟಕ ಸರ್ಕಾರದಿಂದ ಇದುವರಗೂ ರಾಜ್ಯೋತ್ಸವ ಪ್ರಶಸ್ತಿ ಲಭಿಸದಿರುವುದು ತೀವ್ರ ಬೇಸರ ತಂದಿದೆ ಎಂದು ಮೈಸೂರಿನ ಖ್ಯಾತ ಕವಿ, ಸಾಹಿತಿ ಡಾ. ಜಯಪ್ಪ ಹೊನ್ನಾಳಿ (ಜಯಕವಿ, ಮೈಸೂರು) ಹೇಳಿದರು.

ಕಾಸರಗೋಡಿನ ಪಂಗೋಡಿನ ಶ್ರೀ ದುರ್ಗಾಂಬಾ ವೇದಿಕೆಯಲ್ಲಿ ನಡೆದ ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಾಮನ್ ರಾವ್ ಬೇಕಲ್ ಅವರ ಕನ್ನಡ ಸೇವೆ ಮತ್ತು ಸಾಂಸ್ಕೃತಿಕ ಕಾಯಕ ಎಲ್ಲರೂ ಗುರುತಿಸಿ ಗೌರವಿಸುವಂತಹದ್ದು. ಸರಕಾರಿ ಕವಿಗೋಷ್ಠಿಗಳೂ ನಾಚುವಂತೆ ಅಚ್ಚುಕಟ್ಟಾಗಿ ಅರ್ಥಪೂರ್ಣವಾಗಿ ಕಾರ್ಯಕ್ರಮ ಆಯೋಜಿಸಿರುವ ಅವರು, ನಾಡಿನ 60ಕ್ಕೂ ಅಧಿಕ ಕವಿಗಳಿಗೆ ವೇದಿಕೆ ಕಲ್ಪಿಸಿ, ಸನ್ಮಾನಿಸುವ ಮೂಲಕ, ಕನ್ನಡ ಕಟ್ಟುವ, ಗಡಿನಾಡಿನಾಚೆಗೂ ಕನ್ನಡ ತೇರನೆಳೆಯುವ ಹಾಗೂ ಕವಿ ಮನಸುಗಳಿಗೆ ಪ್ರೋತ್ಸಾಹ ನೀಡುವ ಸಾರ್ಥಕ ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದರು.

ಕವಿತೆ ಸಹೃದಯರನ್ನು ಕುಗ್ಗಿಸದೆ ಹಿಗ್ಗಿಸಬೇಕು, ಅವರ ಮನಸ್ಸುಗಳ ನರಳಿಸದೇ ಅರಳಿಸಬೇಕು, ಸಮಾಜದ ಬದುಕುಗಳಿಗೆ ಬೆಂಕಿಯಾಗದೆ ಬೆಳಕಾಗಬೇಕು, ಬಹಿರಂಗದಿ ತೇಜಸ್ವಿನಿಯಾಗಿ ಅಂತರಂಗದಿ ತಪಸ್ವಿನಿಯಾಗಿರಬೇಕು, ಬೆನ್ನಿಗಿರುವವರ ಬೆರಗಿನಿಂದ ಬೆಳಕಿನೂರಿನೆಡೆಗೆ ಕರೆದೊಯ್ಯುವಂತಿರಬೇಕು, ಕವಿ ಭಾಷೆಯನ್ನು ನೀರಿನಂತೆ ಬಳಸದೆ ತುಪ್ಪದಂತೆ ಬಳಸಬೇಕು, ಕಾಡಿನ ಬಗ್ಗೆ ಬರೆಯದೇ, ಮರದ ಬಗ್ಗೆ ಬರೆಯದೇ ಅಡಕವಾಗಿ ಬೀಜದ ಬಗ್ಗೆ ಬರೆಯಬೇಕು, ಪುಟ ಪುಟ ಬರೆಯುವುದು ಕವಿತೆಯಾಗದು; ಪುಟವಿಟ್ಟ ಹಾಗೆ ಬರೆದರೆ ಕವಿತೆಯಾಗುವುದು. ಒಟ್ಟಾರೆಯಾಗಿ ಕವಿತೆಯ ಮೂಲಕ ಕವಿ ಸಮುದಾಯವನ್ನು ಸಂಸ್ಕಾರಗೊಳಿಸಬೇಕು, ಅವನೊಬ್ಬ ಅನಧಿಕೃತ ಸಾಂಸ್ಕೃತಿಕ ಶಾಸಕ ಎಂದರು.

ಕನ್ನಡದ ತ್ರಿವಿಕ್ರಮನಂತಿರುವ ವಾಮನ್ ರಾವ್ ಬೇಕಲ್ ಅವರು ವೇದಿಕೆ ಸಿಗದ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ಮೂಲಕ ಗಡಿನಾಡಿನಲ್ಲಿ ಕನ್ನಡ ಸಾಹಿತ್ಯದ ಕಂಪನ್ನು ಪಸರಿಸುತ್ತಿದ್ದಾರೆ. ಅವರು ನಿಜಕ್ಕೂ ಗಡಿನಾಡಿನ ಕನ್ನಡ ಕಣ್ವರಾಗಿದ್ದಾರೆ. ಪ್ಯಾಂಟು ಶರ್ಟಿನಲ್ಲೂ ಒಬ್ಬ ಕನ್ನಡದ ಸಂತನಿರಬಹುದೆಂಬುದಕ್ಕೆ ಇವರೇ ಉದಾಹರಣೆಯಾಗಿದ್ದಾರೆ, ಇಂತಹ ಕನ್ನಡದ ಕಟ್ಟಾಳುಗಳಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸುವುದು ಅತ್ಯಗತ್ಯ, ಸರ್ಕಾರ ಹಾಗೆ ಮಾಡಿದಾಗ ಆ ಪ್ರಶಸ್ತಿಗೇ ಒಂದು ಗೌರವ ಪ್ರಾಪ್ತವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವದ ಸಮಾರೋಪ ಸಮಾರಂಭದಲ್ಲಿ ಕನ್ನಡ ಭವನದ ಸ್ಥಾಪಕರಾದ ವಾಮನ್ ರಾವ್ ಬೇಕಲ್, ಕನ್ನಡ ಭವನದ ಪ್ರಮುಖರಾದ ಡಾ. ಜಯಾನಂದ ಪೆರಾಜೆ, ಮುರಳಿ ಪಾರೆಕಟ್ಟೆ, ರಾಜೇಶ್, ಗಂಗಾಧರಪ್ಪ ಮೈಸೂರು, ಪ್ರಭಾ ಶಾಸ್ತ್ರಿ ಮೈಸೂರು, ಡಾ. ಅಂತೋಣಿ ರಾಜ್ ಬೆಂಗಳೂರು, ಗಿರೀಶ್ ಪಿ.ಎಂ. ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮ ವನ್ನು ಬೆಂಗಳೂರಿನ ಗೊರೂರು ಪಂಕಜ, ಉಡುಪಿಯ ಪುಷ್ಪ ಪ್ರಸಾದ್, ಮಂಗಳೂರಿನ ರೇಖಾ ಸುದೇಶ್ ರಾವ್ ನಿರೂಪಣೆ ನಿರ್ವಹಿಸಿದರು. ಕನ್ನಡ ಭವನದ ಸಂದ್ಯಾ ರಾಣಿ ಟೀಚರ್ ಸ್ವಾಗತಿಸಿ ಕನ್ನಡ ಭವನ ಕಾರ್ಯದರ್ಶಿ ವಸಂತ್ ಕೆರೆಮನೆ ವಂದಿಸಿದರು.