
ಬನ್ನಾಡಿ : ಇತಿಹಾಸ ಪ್ರಸಿದ್ಧ ಬನ್ನಾಡಿ ಬ್ರಹ್ಮಬೈದರ್ಕಳ ಸಾಂಪ್ರದಾಯಿಕ ಕಂಬಳವು ನವೆಂಬರ್ 29, 2026ರ ಭಾನುವಾರದಂದು ನಡೆಯಲಿದೆ ಎಂದು ಕಂಬಳ ಆಯೋಜಕರು ತಿಳಿಸಿದ್ದಾರೆ.
ವಾಡಿಕೆಯಂತೆ ನವೆಂಬರ್ 16ರಂದು ಸಂಕ್ರಮಣದ ದಿನ ಕಂಬಳಗದ್ದೆ ಮನೆಯಲ್ಲಿ ಪುರೋಹಿತರ ಉಪಸ್ಥಿತಿಯಲ್ಲಿ ಹಾಗೂ ಊರ ಹತ್ತು ಸಮಸ್ತರ ಸಮಕ್ಷಮದಲ್ಲಿ ಕಂಬಳದ ಪೂರ್ವತಯಾರಿಯ ಅಂಗವಾಗಿ ನಿಗದಿಪಡಿಸಲಾದ ದಿನಾಂಕವನ್ನು ಅಧಿಕೃತವಾಗಿ ಪ್ರಕಟಿಸಲಾಗುವುದು.
ತುಳುನಾಡಿನ ಸಾಂಪ್ರದಾಯಿಕ ಕ್ರೀಡೆ ಹಾಗೂ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿರುವ ಕಂಬಳವನ್ನು ಯಶಸ್ವಿಯಾಗಿ ಆಯೋಜಿಸಲು ಜಿಲ್ಲಾ ಸಾಂಪ್ರದಾಯಿಕ ಕಂಬಳ ಸಮಿತಿ, ಕಂಬಳ ಕೋಣಗಳ ಯಜಮಾನರು, ಓಟಗಾರರು, ಕಂಬಳಾಭಿಮಾನಿಗಳು ಹಾಗೂ ಬಡಗಿನ ಸಾಂಪ್ರದಾಯಿಕ ಕಂಬಳಗಳ ಆಯೋಜಕರ ಸಹಕಾರವನ್ನು ಕಂಬಳ ಸಮಿತಿ ಕೋರಿದೆ.
ಕಂಬಳದ ಸಾಂಪ್ರದಾಯಿಕ ಆಚರಣೆಗಳು ಹಾಗೂ ಸಂಪ್ರದಾಯಗಳಿಗೆ ಅನುಗುಣವಾಗಿ ಕಾರ್ಯಕ್ರಮದ ಪೂರ್ವಸಿದ್ಧತೆಗಳನ್ನು ಕೈಗೊಳ್ಳಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.
