ಉಡುಪಿ : ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ಸಂಬಂಧಿಸಿದ ನಿಧಿಗಳ ಕುರಿತು ಇತ್ತೀಚೆಗೆ ಕೇಳಿಬಂದಿರುವ ಆರೋಪಗಳ ವಿಚಾರದಲ್ಲಿ ಉಡುಪಿಯ ಸ್ಥಳೀಯ ಕಾಂಗ್ರೆಸ್ ನಾಯಕರು ಆಧಾರರಹಿತ ಹೇಳಿಕೆಗಳನ್ನು ನೀಡಿ ವದಂತಿಗಳನ್ನು ಹಬ್ಬಿಸಲು ಯತ್ನಿಸುತ್ತಿರುವುದನ್ನು ಭಾರತೀಯ ಜನತಾ ಪಾರ್ಟಿ ತೀವ್ರವಾಗಿ ಖಂಡಿಸುತ್ತದೆ.
ಯಾವುದೇ ವ್ಯಕ್ತಿ ಕಾನೂನುಬಾಹಿರ ಕೃತ್ಯದಲ್ಲಿ ಭಾಗಿಯಾಗಿರುವುದು ಸಾಬೀತಾದರೆ, ಅವರು ಯಾರೇ ಆಗಿರಲಿ, ಯಾವ ಹುದ್ದೆಯಲ್ಲಿರಲಿ ಅಥವಾ ಯಾವುದೇ ಸಂಘಟನೆಗೆ ಸೇರಿದವರಾಗಿರಲಿ, ಅವರ ವಿರುದ್ಧ ಕಾನೂನಿನ ಪ್ರಕಾರ ಯಾವುದೇ ಕನಿಕರವಿಲ್ಲದೆ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದು ಬಿಜೆಪಿಯ ಸ್ಪಷ್ಟ ನಿಲುವಾಗಿದೆ. ಪಾರದರ್ಶಕತೆ, ಹೊಣೆಗಾರಿಕೆ ಹಾಗೂ ಕಾನೂನನ್ನು ಬಿಜೆಪಿ ಸದಾ ಗೌರವಿಸುತ್ತದೆ.
ಈ ಪ್ರಕರಣದಲ್ಲಿ ಉತ್ತರ ಪ್ರದೇಶ ಸರ್ಕಾರ ಅತ್ಯಂತ ತ್ವರಿತವಾಗಿ ಕ್ರಮ ಕೈಗೊಂಡಿದೆ. ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡ (SIT) ರಚಿಸಲಾಗಿದ್ದು, ಆರೋಪಿಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಿ ಬಂಧಿಸಲಾಗಿದೆ. ಹಣದ ವ್ಯವಹಾರಗಳು, ಸಂಬಂಧಿತ ಸಿಬ್ಬಂದಿ ಹಾಗೂ ಇತರ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲಿಸಲಾಗುತ್ತಿದೆ. ತಪ್ಪಿತಸ್ಥರು ಯಾರೇ ಆಗಿರಲಿ, ಅವರ ವಿರುದ್ಧ ಕಾನೂನಿನ ಪ್ರಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂಬುದನ್ನು ಉತ್ತರ ಪ್ರದೇಶ ಸರ್ಕಾರ ತನ್ನ ಕಾರ್ಯಾಚರಣೆಯ ಮೂಲಕ ಸ್ಪಷ್ಟಪಡಿಸಿದೆ. ತನಿಖೆಯ ಪ್ರಾಥಮಿಕ ಹಂತದಲ್ಲಿ ಯಾವುದೇ ಸಾಧು-ಸಂತರ ಪಾತ್ರ ಕಂಡುಬಂದಿಲ್ಲ ಎಂದು ಉತ್ತರ ಪ್ರದೇಶದ ಮಾನ್ಯ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಜೀ ಅವರೂ ಸ್ಪಷ್ಟಪಡಿಸಿದ್ದಾರೆ. ಹೀಗಿರುವಾಗ ತನಿಖೆ ನಡೆಯುತ್ತಿರುವ ವಿಷಯವನ್ನು ಆಧರಿಸಿ ರಾಜಕೀಯ ದುರುದ್ದೇಶದಿಂದ ಸುಳ್ಳು ಆರೋಪಗಳನ್ನು ಮಾಡುವುದು ಹಾಗೂ ಜನರನ್ನು ದಾರಿ ತಪ್ಪಿಸುವುದು ಅತ್ಯಂತ ಖಂಡನೀಯ.
ಇಂತಹ ಸಂದರ್ಭದಲ್ಲಿ, ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಆರಂಭದಿಂದಲೇ ವಿರೋಧ ವ್ಯಕ್ತಪಡಿಸಿ, ಶ್ರೀ ರಾಮ ಕಾಲ್ಪನಿಕ ವ್ಯಕ್ತಿ ಎಂದು ನ್ಯಾಯಾಲಯದವರೆಗೂ ಈ ವಿಚಾರವನ್ನು ಎಳೆದು, ಶ್ರೀ ರಾಮಸೇತು ಸುಳ್ಳು ಎಂದು ಕೋಟ್ಯಂತರ ಶ್ರೀರಾಮ ಭಕ್ತರ ಭಾವನೆಗಳಿಗೆ ವಿರುದ್ಧವಾಗಿ ನಿಂತಿದ್ದ ಕಾಂಗ್ರೆಸ್ ಪಕ್ಷವು ಇಂದು ಈ ವಿಷಯದಲ್ಲಿ ನೈತಿಕತೆಯ ಪಾಠ ಹೇಳಲು ಮುಂದಾಗಿರುವುದು ವಿಪರ್ಯಾಸವಾಗಿದೆ. ಶ್ರೀರಾಮ ಮಂದಿರ ನಿರ್ಮಾಣವನ್ನೇ ವಿರೋಧಿಸಿದ್ದ ಕಾಂಗ್ರೆಸ್ ಪಕ್ಷಕ್ಕೆ ಈ ಪ್ರಕರಣವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವ ಅಥವಾ ಜನರಲ್ಲಿ ಗೊಂದಲ ಸೃಷ್ಟಿಸುವ ಯಾವುದೇ ನೈತಿಕ ಹಕ್ಕಿಲ್ಲ.
ಉಡುಪಿ ಜಿಲ್ಲೆಯ ಜನತೆ ಕಾಂಗ್ರೆಸ್ ಪಕ್ಷದ ನಿಜವಾದ ಮುಖವನ್ನು ಚೆನ್ನಾಗಿ ಅರಿತಿದ್ದಾರೆ. ಆದ್ದರಿಂದ ಕಾಂಗ್ರೆಸ್ ಪಕ್ಷವು ವದಂತಿಗಳನ್ನು ಹರಡುವುದನ್ನು, ಆಧಾರರಹಿತ ಹೇಳಿಕೆಗಳನ್ನು ನೀಡುವುದನ್ನು ಹಾಗೂ ತನಿಖೆಯಲ್ಲಿರುವ ವಿಷಯವನ್ನು ರಾಜಕೀಯ ಪ್ರಚಾರಕ್ಕಾಗಿ ಬಳಸಿಕೊಳ್ಳುವುದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ನಾವು ಆಗ್ರಹಿಸುತ್ತೇವೆ.
ಭಾರತೀಯ ಜನತಾ ಪಾರ್ಟಿ ಕಾನೂನಿನ ಆಳ್ವಿಕೆಯನ್ನು ಎತ್ತಿಹಿಡಿಯುವುದರ ಜೊತೆಗೆ, ಶ್ರೀರಾಮ ಭಕ್ತರ ನಂಬಿಕೆಯನ್ನು ಗೌರವಿಸಿ, ಪ್ರಾಮಾಣಿಕತೆ, ಪಾರದರ್ಶಕತೆ ಹಾಗೂ ಜನಸೇವೆಯ ಮೌಲ್ಯಗಳಿಗೆ ಸದಾ ಬದ್ಧವಾಗಿರುತ್ತದೆ.

