ಸಾಧನಶೀಲರ ಬದುಕು – ಬವಣೆ ನಾಳಿನ ಜನಾಂಗಕ್ಕೆ ಪಾಠ: ಕೃಷ್ಣ ಜೆ.ಪಾಲೆಮಾರ್

0
54

ಮಹಾ ಪರ್ವ’ ಗ್ರಂಥ ಬಿಡುಗಡೆ

ಮಂಗಳೂರು : ‘ಸಾಧಕರ ಬದುಕಿನಲ್ಲಿ ಏಳು ಬೀಳುಗಳು ಸಹಜ. ಅವರ ಸಾಧನೆಯನ್ನು ಕೃತಿ ರೂಪದಲ್ಲಿ ದಾಖಲಿಸಿದರೆ ಅದು ಮುಂದಿನ ಪೀಳಿಗೆಗೆ
ದಾರಿದೀಪವಾಗುತ್ತದೆ. ಹಾಗೆಯೇ ಅಂಥವರ ಬದುಕು ಬವಣೆಗಳಿಂದ ನಾಳಿನ ಜನಾಂಗ ಸಾಕಷ್ಟು ಪಾಠವನ್ನೂ ಕಲಿತಂತಾಗುವುದು’ ಎಂದು ಮಾಜಿ ಸಚಿವ ಕೃಷ್ಣ.ಜೆ.ಪಾಲೆಮಾರ್ ಹೇಳಿದರು.
ಹರಿಕಥಾ ಪರಿಷತ್ ಮಂಗಳೂರು ಮತ್ತು ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ಪ್ರೆಸ್‌ಕ್ಲಬ್‌ನಲ್ಲಿ ಎಪ್ರಿಲ್ 4,
ಶುಕ್ರವಾರ ನಡೆದ ಸಮಾರಂಭದಲ್ಲಿ ಹರಿದಾಸ ‘ದೇವಕಿ ತನಯ’ ಮಹಾಬಲ ಶೆಟ್ಟಿ ಕೂಡ್ಲು ಅವರ ‘ಮಹಾಪರ್ವ’ ಅಭಿನಂದನಾ ಸಂಪುಟವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
‘ಹರಿಕಥಾ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿರುವ ಮಹಾಬಲ ಶೆಟ್ಟಿ ಅವರ ಸಾಧನೆಗಳು ‘ಮಹಾಪರ್ವ’ ದಲ್ಲಿ ದಾಖಲಾಗಿದ್ದು, ಮುಂದಿನ ದಿನಗಳಲ್ಲಿ ಮನೆ ಮನ ತಲುಪಲು ಸಾಧ್ಯವಾಗಲಿದೆ. ಭವಿಷ್ಯದ ಜನಾಂಗದ ಸಾಧನೆಗೆ ಅದುವೇ ಸ್ಫೂರ್ತಿಯಾಗುವುದು’ ಎಂದು ಅವರು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಡಾ.ಹರಿಕೃಷ್ಣ ಪುನರೂರು ಮಾತನಾಡಿ ‘ಮಕ್ಕಳಿಗೂ ಹರಿಕಥೆ ಕಲಿಸಿ ಅವರನ್ನು ಹರಿದಾಸರನ್ನಾಗಿ ಮಾಡುವ ಮೂಲಕ ಮಹಾಬಲ ಶೆಟ್ಟಿಯವರು ಧರ್ಮಜಾಗೃತಿಯ ಕೆಲಸ ಮಾಡುತ್ತಿರುವುದು ಶ್ಲಾಘನೀಯ’ ಎಂದು ಹೇಳಿದರು.
‘ಮಹಾಪರ್ವ’ ಸಂಪಾದಕ, ಸಾಹಿತಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅವರು ಮಾತನಾಡಿ, ‘ಮಹಾಬಲ ಶೆಟ್ಟಿ ಅವರು ಅನೇಕ ಸಂಕಷ್ಟಗಳನ್ನು ಅನುಭವಿಸಿ ಸಾಧನೆಯ ಶಿಖರವೇರಿದ್ದಾರೆ. 50 ವರ್ಷಗಳ ಹರಿಕಥಾಯಾನ ಪೂರೈಸಿದ ಅಪರೂಪದ ಹರಿದಾಸರು. ಹರಿಕಥೆ ಕಲೆಯನ್ನು ಉಳಿಸಿ, ಬೆಳೆಸಲು ಪ್ರಥಮ ಬಾರಿಗೆ ಹರಿಕಥಾ ಪರಿಷತ್ ಹುಟ್ಟು ಹಾಕಿದ್ದಾರೆ. ಹಲವಾರು ಹರಿದಾಸರನ್ನು ಸೃಷ್ಟಿಸಿದ್ದಾರೆ. ಅವರಿಗೆ ಎಂಭತ್ತು ತುಂಬಿದ ಸಂದರ್ಭದಲ್ಲಿ ಅವರ ಬದುಕಿನ ಚಿತ್ರಣದೊಂದಿಗೆ ಹರಿಕಥೆ ಮತ್ತದರ ಸೋದರ ಕಲೆಗಳ ಬಗ್ಗೆ ವಿದ್ವಾಂಸರು ಬರೆದ ಮಹತ್ವದ ಲೇಖನಗಳನ್ನೊಳಗೊಂಡ ಅಭಿನಂದನಾ ಸಂಪುಟ ಒಂದು ಸಂಗ್ರಾಹ್ಯ ಗ್ರಂಥವಾಗಿ ಹೊರಬರುತ್ತಿದೆ’ ಎಂದರು..
ಮಹಾಬಲ ಶೆಟ್ಟಿ ಕೂಡ್ಲು ಅವರು ಮಾತನಾಡಿ, ‘ಶೇಣಿ ಗೋಪಾಲಕೃಷ್ಣ ಭಟ್ ಅವರಿಂದಾಗಿ ಹರಿದಾಸನಾದೆ. ಹರಿಕಥೆ ನಶಿಸುವ ಕಲೆ ಅಲ್ಲ. ಅದು ಇನ್ನಷ್ಟು ಪ್ರಭಾವಶಾಲಿ ರೂಪದಲ್ಲಿ ಮೂಡಿಬರುವಂತಾಗಬೇಕು’ ಎಂದರು.
ದ.ಕ ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್, ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ , ವಕೀಲ ಗುರುಪ್ರಸಾದ್ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು.
ಹರಿಕಥಾ ಪರಿಷತ್‌ನ ಖಜಾಂಜಿ ಡಾ.ಎಸ್.ಪಿ.ಗುರುದಾಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಚಾಲಕ ಸುಧಾಕರ ರಾವ್ ಪೇಜಾವರ ಸ್ವಾಗತಿಸಿ, ಪ್ರೊ.ಜಿ.ಕೆ.ಭಟ್ ವಂದಿಸಿದರು. ಹರಿಕಥಾ ಪರಿಷತ್‌ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here