ಪೊಳಲಿ ಜಾತ್ರೆಯಲ್ಲಿ ಉಳ್ಳಾಕ್ಲು ಮಗೃಂತಾಯಿ ನೇಮ

0
33

ಸಂಸ್ಕೃತಿಯ ಸಂವರ್ಧನೆಯಲ್ಲಿ ಎಲ್ಲರೂ ಕೈಜೋಡಿಸೋಣ : ವಜ್ರನಾಭ ಶೆಟ್ಟಿ

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವರ್ಷಾವಧಿ ಜಾತ್ರೆಯ ಪುಣ್ಯವಸರದಲ್ಲಿ, ಪೂರ್ವ ಸಂಪ್ರದಾಯದಂತೆ ಅರ್ಕುಳ ಬೀಡಿನಿಂದ ಶ್ರೀ ದೈವಗಳ ಭಂಡಾರವನ್ನು ಸಕಲ ಬಿರುದಾವಳಿಗಳೊಂದಿಗೆ ಶ್ರೀ ಕ್ಷೇತ್ರ ಪೊಳಲಿಗೆ ಆರಾಡದ ದಿನ ತರಲಾಗುತ್ತದೆ. ಅದೇ ದಿನ ರಾತ್ರಿ ಶ್ರೀ ಉಳ್ಳಾಕ್ಲು ಮಗೃಂತಾಯಿ ಧರ್ಮದೇವತೆಗಳಿಗೆ ನೇಮ ಸೇವೆಯು ಭಕ್ತಿಭಾವಪೂರ್ಣವಾಗಿ ನೆರವೇರಲಿದೆ.

ದೇವತಾನುಗ್ರಹದಿಂದ ಪೂರ್ವಕಟ್ಟುಕಟ್ಟಳೆಯಂತೆ ಸಾಂಪ್ರದಾಯಿಕವಾಗಿ ನಡೆಯುವ ಇಂತಹ ಕಾರ್ಯಕ್ರಮಗಳು ನಮ್ಮ ಸಂಸ್ಕೃತಿ ಮತ್ತು ಆಚಾರ–ವಿಚಾರಗಳ ಜೀವಂತ ಪ್ರತಿಬಿಂಬಗಳಾಗಿವೆ. ಆದ್ದರಿಂದ, ಈ ಮಹತ್ವದ ಕಾರ್ಯಕ್ರಮಗಳಲ್ಲಿ ಶ್ರದ್ಧಾ-ಭಕ್ತಿಯಿಂದ ಭಾಗವಹಿಸುವ ಮೂಲಕ ನಮ್ಮ ಸಂಸ್ಕೃತಿಯ ಸಂವರ್ಧನೆಯಲ್ಲಿ ಎಲ್ಲರೂ ಪಾಲುಗಾರರಾಗೋಣ ಎಂದು ಅರ್ಕುಳ ಬೀಡು ವಜ್ರನಾಭ ಶೆಟ್ಟಿಯವರು ಕರೆ ನೀಡಿದರು.

ಅವರು ಇತ್ತೀಚೆಗೆ ಅರ್ಕುಳ ಬೀಡಿನಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಸಭೆಯಲ್ಲಿ ಅರ್ಕುಳ ಬೀಡು ರತ್ನರಾಜ ಶೆಟ್ಟಿ ಹಾಗೂ ಕಂಪ ಸದಾನಂದ ಆಳ್ವ ಅವರು ಕಾರ್ಯಕ್ರಮದ ವಿವರಗಳು ಮತ್ತು ವಿವಿಧ ತಂಡಗಳ ಜವಾಬ್ದಾರಿಗಳ ಬಗ್ಗೆ ವಿವರಿಸಿದರು.

ದಿನಾಂಕ 12-04-2026 ನೇ ರವಿವಾರ ಮುಂಜಾನೆ 5.00 ಗಂಟೆಗೆ ಅರ್ಕುಳ ಬೀಡಿನ ಬಸದಿಯಲ್ಲಿ ಪೂಜೆ ನಡೆದು  5.15 ಗಂಟೆಗೆ ಪಡಿ ಅಕ್ಕಿ ನೀಡಿ ಶ್ರೀ ಧರ್ಮದೇವತೆಗಳ ಭಂಡಾರದ ಮೆರವಣಿಗೆ ಆರಂಭವಾಗುತ್ತದೆ. ಬೆಳಿಗ್ಗೆ 6.30 ಕ್ಕೆ  ಅರ್ಕುಳ ಬೀಡಿನಿಂದ ಶ್ರೀ ಧರ್ಮದೇವತೆಗಳ ಭಂಡಾರವು ಕಟ್ಟುಕಟ್ಟಳೆಯಂತೆ ಹೊರಟು ಮೇರಮಜಲು, ಕುಟ್ಟಿಕಳ, ತೇವುಕಾಡು, ಮಹಮ್ಮಾಯಿ ಕಟ್ಟೆ- ಅಬ್ಬೆಟ್ಟುಗೋಳಿ, ಅಮ್ಮುಂಜೆ, ಬಡಕಬೈಲು, ಪುಂಚಮೆ ಮಾರ್ಗವಾಗಿ ಬೆಳಿಗ್ಗೆ 10.30 ಕ್ಕೆ ಶ್ರೀ ಕ್ಷೇತ್ರ ಪೊಳಲಿ ತಲುಪಲಿದೆ. ಬಡಕಬೈಲಿನಿಂದ ನೃತ್ಯ ಭಜನಾ ತಂಡ ಮೆರವಣಿಗೆಯನ್ನು ಸೇರಿಕೊಳ್ಳಲಿದೆ.

ದಿನಾಂಕ 12-04-2026 ನೇ ರವಿವಾರ ರಾತ್ರಿ ಅರ್ಕುಳ ಶ್ರೀ ಉಳ್ಳಾಕ್ಲು ಮಗೃಂತಾಯಿ ಧರ್ಮದೇವತೆಗಳಿಗೆ ನೇಮ ಸೇವೆಯು ಸಂಪನ್ನಗೊಳ್ಳಲಿದೆ.

ದಿನಾಂಕ 13-04-2026 ನೇ ಸೋಮವಾರ ಬೆಳಿಗ್ಗೆ 8.00 ಗಂಟೆಗೆ ಭಂಡಾರವು ಪೊಳಲಿಯಿಂದ ಹೊರಟು… ಬಡಕಬೈಲು, ಧನುಪೂಜೆ, ಕಲ್ಪನೆ, ಬೆಂಜನಪದವು, ಕೊಡ್ಮಾಣ್, ನೆತ್ರೆಕೆರೆ, ಕಡೆಗೋಳಿ, ಫರಂಗಿಪೇಟೆ ಮಾರ್ಗವಾಗಿ 11.00 ಗಂಟೆಗೆ ಅರ್ಕುಳ ಬೀಡು ತಲುಪಲಿದೆ.

ಸಂಸ್ಕಾರ ಭಾರತಿಯ ದ.ಕ. ಜಿಲ್ಲಾ ಅಧ್ಯಕ್ಷ ತಾರಾನಾಥ ಕೊಟ್ಟಾರಿ ಅವರು ಮಾತನಾಡಿ, ಭಂಡಾರದ ಮೆರವಣಿಗೆಯ ಪವಿತ್ರ ಸಂದರ್ಭದಲ್ಲಿ ಭಕ್ತರು ಭಕ್ತಿ-ಶ್ರದ್ಧೆಯಿಂದ ಗೌರವ ಸಲ್ಲಿಸಿ ದೈವಕೃಪೆಗೆ ಪಾತ್ರರಾಗುವಂತೆ ಕರೆ ನೀಡಿದರು.

ಮಂಟಮೆ ದಿನಕರ ಕರ್ಕೇರಾ ಕಾರ್ಯಕ್ರಮ ನಿರ್ವಹಿಸಿದರು. ಡಾ. ಎ. ಜಯಕುಮಾರ ಶೆಟ್ಟಿ ಸ್ವಾಗತಿಸಿ, ನಾಗರಾಜ ಶೆಟ್ಟಿ ತುಪ್ಪೆಕಲ್ಲು ವಂದಿಸಿದರು.

LEAVE A REPLY

Please enter your comment!
Please enter your name here