ಆರೋಗ್ಯಕರ ಜೀವನಶೈಲಿಯೇ ಉತ್ತಮ ಆರೋಗ್ಯದ ಗುಟ್ಟು; ಬೆಳಗಿನ ಕೆಲವು ಸರಳ ಅಭ್ಯಾಸಗಳು ನಿಮ್ಮ ಜೀವನವನ್ನು ಸಂಪೂರ್ಣವಾಗಿ ಬದಲಾಯಿಸಬಹುದು
ಇಂದಿನ ವೇಗದ ಜೀವನಶೈಲಿ, ಕೆಲಸದ ಒತ್ತಡ ಹಾಗೂ ಅನಿಯಮಿತ ದಿನಚರಿಯಿಂದ ಅನೇಕರು ದೈಹಿಕ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಯಾವುದೇ ರೋಗ ರುಜಿನಗಳಿಲ್ಲದೆ ಆರೋಗ್ಯಕರ ಜೀವನ ನಡೆಸಬೇಕು ಎಂಬುದು ಎಲ್ಲರ ಆಶೆಯಾದರೂ, ಅದನ್ನು ಸಾಧಿಸಲು ಉತ್ತಮ ದಿನಚರಿ ಅತ್ಯಗತ್ಯ. ವಿಶೇಷವಾಗಿ ಬೆಳಗಿನ ಸಮಯದಲ್ಲಿ ಕೆಲವು ಆರೋಗ್ಯಕರ ಅಭ್ಯಾಸಗಳನ್ನು ರೂಢಿಸಿಕೊಂಡರೆ ದೇಹ ಮತ್ತು ಮನಸ್ಸು ಎರಡೂ ಸದೃಢವಾಗಿರುತ್ತವೆ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.
ಬೆಳಿಗ್ಗೆ ಬೇಗ ಎದ್ದೇಳಿ
ಬೆಳಿಗ್ಗೆ ಬೇಗನೆ ಏಳುವುದು ಆರೋಗ್ಯಕರ ಜೀವನದ ಮೊದಲ ಹೆಜ್ಜೆಯಾಗಿದೆ. ಇದು ದೇಹದ ನೈಸರ್ಗಿಕ ಜೈವಿಕ ಗಡಿಯಾರಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ದಿನದ ಕೆಲಸಗಳನ್ನು ನೆಮ್ಮದಿಯಿಂದ ಯೋಜಿಸಲು ಸಮಯ ಸಿಗುವುದರಿಂದ ಮಾನಸಿಕ ಒತ್ತಡವೂ ಕಡಿಮೆಯಾಗುತ್ತದೆ.
ಎದ್ದ ತಕ್ಷಣ ಮೊಬೈಲ್ ನೋಡುವ ಅಭ್ಯಾಸ ಬಿಡಿ
ಅನೇಕರು ಬೆಳಗ್ಗೆ ಕಣ್ಣು ತೆರೆದ ಕೂಡಲೇ ಮೊಬೈಲ್ ಪರಿಶೀಲಿಸುತ್ತಾರೆ. ಆದರೆ ಇದು ಒತ್ತಡ ಮತ್ತು ನಕಾರಾತ್ಮಕ ಚಿಂತನೆಗಳನ್ನು ಹೆಚ್ಚಿಸಬಹುದು. ಅದರ ಬದಲು ಧ್ಯಾನ, ಪ್ರಾರ್ಥನೆ ಅಥವಾ ಮನಸ್ಸಿಗೆ ನೆಮ್ಮದಿ ನೀಡುವ ಸಂಗೀತವನ್ನು ಆಲಿಸುವುದು ಉತ್ತಮ.
ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯಿರಿ
ಬೆಳಿಗ್ಗೆ ಎದ್ದ ಬಳಿಕ ಒಂದು ಲೋಟ ಉಗುರು ಬೆಚ್ಚಗಿನ ನೀರು ಕುಡಿಯುವುದರಿಂದ ದೇಹ ಸಕ್ರಿಯಗೊಳ್ಳುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುವುದರ ಜೊತೆಗೆ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕಲು ಸಹಕಾರಿಯಾಗಿದೆ.
ಯೋಗ ಅಥವಾ ಲಘು ವ್ಯಾಯಾಮ ಮಾಡಿ
ಬೆಳಗಿನ ವ್ಯಾಯಾಮ ದೇಹಕ್ಕೆ ಚೈತನ್ಯ ತುಂಬುತ್ತದೆ. ಯೋಗ, ವಾಕಿಂಗ್, ಸ್ಟ್ರೆಚಿಂಗ್ ಅಥವಾ ಲಘು ವ್ಯಾಯಾಮದಿಂದ ರಕ್ತ ಪರಿಚಲನೆ ಸುಧಾರಿಸಿ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ.
ಧ್ಯಾನಕ್ಕೆ ಸಮಯ ಮೀಸಲಿಡಿ
ಪ್ರತಿದಿನ ಕೆಲವೇ ನಿಮಿಷಗಳ ಧ್ಯಾನ ಮನಸ್ಸಿಗೆ ಶಾಂತಿ ನೀಡುತ್ತದೆ. ಇದು ಒತ್ತಡವನ್ನು ಕಡಿಮೆ ಮಾಡಿ ದಿನವಿಡೀ ಸಕಾರಾತ್ಮಕ ಮನೋಭಾವ ಕಾಪಾಡಿಕೊಳ್ಳಲು ನೆರವಾಗುತ್ತದೆ.
ಆರೋಗ್ಯಕರ ಉಪಹಾರ ಸೇವಿಸಿ
ಬೆಳಗಿನ ಉಪಹಾರವನ್ನು ಎಂದಿಗೂ ನಿರ್ಲಕ್ಷಿಸಬಾರದು. ಪ್ರೋಟೀನ್, ಫೈಬರ್ ಹಾಗೂ ವಿಟಮಿನ್ ಸಮೃದ್ಧ ಆಹಾರ ಸೇವಿಸುವುದರಿಂದ ದೇಹಕ್ಕೆ ಅಗತ್ಯ ಶಕ್ತಿ ದೊರೆಯುತ್ತದೆ. ಜೊತೆಗೆ ತೂಕ ನಿಯಂತ್ರಣದಲ್ಲಿರಲು ಸಹ ಸಹಾಯವಾಗುತ್ತದೆ.

