ಮಂಗಳೂರು: ಅಕ್ರಮ ಗಣಿಗಾರಿಕೆ ಹಗರಣದಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿ ಬಂದ ಬಳಿಕ ಶಾಸಕ ಜನಾರ್ದನ ರೆಡ್ಡಿ ಟೆಂಪೆಲ್ ರನ್ ಮಾಡುತ್ತಿದ್ದಾರೆ. ಶಾಸಕ ಗಾಲಿ ಜನಾರ್ದನ ರೆಡ್ಡಿ ಇತ್ತೀಚಿಗಷ್ಟೇ ಪ್ರಸಿದ್ಧ ಕಟಿಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದಿದ್ದರು. ಇದೀಗ, ಗಾಲಿ ಜನಾರ್ದನ ರೆಡ್ಡಿ ತುಳುನಾಡಿನ ದೈವದ ಮೊರೆ ಹೋಗಿದ್ದಾರೆ. ಗಾಲಿ ಜನಾರ್ದನ್ ರೆಡ್ಡಿ ಅವರು ಬುಧವಾರ (ಜು.16) ಕಡಬ ತಾಲೂಕಿನ ಸವಣೂರಿನ ಆರೇಲ್ತಡಿಯಲ್ಲಿರುವ ಇರ್ವೆರ್ ಉಳ್ಳಾಕ್ಲು, ಕೆಡೆಂಜೋಡಿತ್ತಾಯಿ ಹಾಗೂ ಪರಿವಾರ ದೈವ ದೇವಸ್ಥಾನಗಳಿಗೆ ಭೇಟಿ ನೀಡಿ, ಆಶಿರ್ವಾದ ಪಡೆದರು.
ಶಾಸಕ ಜನಾರ್ದನ್ ರೆಡ್ಡಿ ಅವರು ಮೇ 13ರಂದು ಕೆಡೆಂಜೋಡಿತ್ತಾಯಿ ದೈವಸ್ಥಾನದ ಬ್ರಹಕಲಶೋತ್ಸವದಲ್ಲಿ ಭಾಗವಹಿಸಬೇಕಿತ್ತು. ಆದರೆ, ಆಂಧ್ರ ಪ್ರದೇಶದ ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮೇ 6ರಂದು ಜೈಲುಪಾಲಾದರು. ಹೀಗಾಗಿ ಕೆಡೆಂಜೋಡಿತ್ತಾಯಿ ದೈವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ.
ಮೇ 13ರಂದು ನಡೆದ ಕೆಡೆಂಜೋಡಿತ್ತಾಯಿ ದೈವಸ್ಥಾನದ ಬ್ರಹ್ಮಕಲಶೋತ್ಸವ ಸಮಾರಂಭದಲ್ಲಿ ಜನಾರ್ದನ ರೆಡ್ಡಿ ಆಪ್ತರು ದೈವದ ಬಳಿ ಜನಾರ್ದನ್ ರೆಡ್ಡಿ ಜೈಲಿನಿಂದ ಬಿಡುಗಡೆಯಾಗುವಂತೆ ಮೊರೆ ಇಟ್ಟರು. ಅಂದು ಕೆಡೆಂಜೋಡಿತ್ತಾಯಿ ದೈವ, ಇಂದಿನಿಂದ ಒಂದು ತಿಂಗಳ ಒಳಗಡೆ ಜನಾರ್ದನ್ ರೆಡ್ಡಿ ಜೈಲಿನಿಂದ ಬಿಡುಗಡೆ ಆಗುತ್ತಾರೆ ಎಂದು ನುಡಿ ನೀಡಿತ್ತು. ದೈವ ನುಡಿದಂತೆ ಶಾಸಕ ಜನಾರ್ದನ್ ರೆಡ್ಡಿ ಅವರಿಗೆ ಜೂನ್ 11 ರಂದು ಜಾಮೀನು ನೀಡಲಾಯಿತು.
ಹಾಗಾಗಿ, ಜನಾರ್ದನ್ ರೆಡ್ಡಿ ಇಂದು ಸವಣೂರಿನಲ್ಲಿರುವ ಇರುವೆರ್ ಉಳ್ಳಾಕುಲು ಮತ್ತು ಕೆಡೆಂಜೋಡಿತ್ತಾಯಿ ಆರೇಲ್ತಡಿ ದೈವಸ್ಥಾನಕ್ಕೆ ತೆರಳಿ ತಂಬಿಲ ಸೇವೆ ನೀಡಿದರು. ಜನಾರ್ದನ ರೆಡ್ಡಿಗೆ ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಸಾಥ್ ನೀಡಿದರು.

