ಸ್ವಾಮಿ ವಿವೇಕಾನಂದರ ನಡೆ ನುಡಿ ಯುವ ಜನಾಂಗಕ್ಕೆ ಆದರ್ಶಪ್ರಾಯವಾಗಿದ್ದು ಅನುಕರಣಿಯ ವಾದುದು. ಯುವ ಸಾಹಿತಿಗಳು, ಕವಿಗಳು ವಿಸ್ತಾರವಾದ ಓದಿನ ಮೂಲಕ ಪ್ರಬುದ್ಧವಾದ ಕಾವ್ಯ ರಚನೆ
ಮಾಡಿರುತ್ತಾರೆ. ಎಲ್ಲ ಕವನಗಳು ಅರ್ಥಪೂರ್ಣವಾಗಿದ್ದು ಜೀವನಕ್ಕೆ ಹೊಸ ಸಂದೇಶವನ್ನು ನೀಡಿದೆ. ವಿವೇಕಾನಂದರ ರಾಷ್ಟ್ರ ಚಿಂತನೆ, ರಾಯಣ್ಣನ ದೇಶಪ್ರೇಮ ನಮಗೆಲ್ಲ ಮಾದರಿಯಾಗಿದೆ.ದೇಶ ಭಕ್ತರ ನಡೆ ನುಡಿ ನಮ್ಮ ಬದುಕಿಗೆ ದಾರಿದೀಪ ಎಂದು ಡಾ.ರಾಮಕೃಷ್ಣ ಶಿರೂರು ಹೇಳಿದರು.
ಅವರು ಕರ್ನಾಟಕ ರಾಜ್ಯ ಅಕ್ಷರದೀಪ ಪ್ರತಿಷ್ಠಾನ ಮತ್ತು ಸ್ನೇಹಜೀವಿ ಫೌಂಡೇಶನ್ ಕರ್ನಾಟಕ ಇದರ ವತಿಯಿಂದ ಧಾರವಾಡದ ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ವೀರ ಭಾರತೀಯರು ರಾಜ್ಯಮಟ್ಟದ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು.

ಅಕ್ಷರ ದೀಪ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನ ಕಳೆದ ನಾಲ್ಕು ವರ್ಷಗಳಿಂದ ರಾಜ್ಯಮಟ್ಟದಲ್ಲಿ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಯುವಕವಿಗಳಿಗೆ, ಹೊಸ ಬರಹಗಾರರಿಗೆ ಪ್ರೋತ್ಸಾಹ ನೀಡುತ್ತಾ ಸಾಹಿತ್ಯ ಲೋಕದಲ್ಲಿ ತೊಡಗಿಸಿಕೊಳ್ಳುವ ಅವಕಾಶವನ್ನು ಕಲ್ಪಿಸಿಕೊಡುತ್ತಾ ಬಂದಿದೆ. ಕನ್ನಡ ನಾಡಿನಲ್ಲಿ ಸಾಹಿತ್ಯದ ಮತ್ತು ಸಾಂಸ್ಕೃತಿಕ ಮನಸ್ಸನ್ನು ಕಟ್ಟುವುದರ ಮೂಲಕ ಸಾಹಿತ್ಯ ಪರಿಷತ್ತು ಮಾಡುವ ಕೆಲಸವನ್ನು ಶ್ರದ್ಧೆಯಿಂದ, ನಿಷ್ಠೆಯಿಂದ ಅಕ್ಷರ ದೀಪ ಪ್ರತಿಷ್ಠಾನ ಮಾಡುತ್ತಾ ಬಂದಿದೆ. ನಿರಂತರವಾಗಿ ಈ ಕೆಲಸ ಈ ಸಂಸ್ಥೆಯಿಂದ ಮುಂದುವರಿದುಕೊಂಡು ಹೋಗಬೇಕು. ಕರ್ನಾಟಕದ ಗದಗಿನಲ್ಲಿ ಆರಂಭವಾದ ಇಂದು ರಾಜ್ಯಮಟ್ಟದಲ್ಲಿ ರಾಷ್ಟ್ರಮಟ್ಟದಲ್ಲಿ ಅಂತರಾಷ್ಟ್ರೀಯಮಟ್ಟದಲ್ಲಿ ಕನ್ನಡಿಗರನ್ನುಒಂದು ಗೂಡಿ ಸುವ ಕೆಲಸವನ್ನು ಮಾಡುತ್ತ ಬಂದಿದೆ.ಕನ್ನಡದ ಮನಸ್ಸನ್ನು ಕಟ್ಟುವ ಇಂತಹ ಶ್ರೇಷ್ಠವಾದ ಕಾರ್ಯಕ್ಕೆ ನಮ್ಮೆಲ್ಲರ ಸಹಾಯ ಸಹಕಾರ ಹಾರೈಕೆ ಅಕ್ಷರ ದೀಪ ಪ್ರತಿಷ್ಠಾನದ ಮೇಲಿದೆ. ಇದರ ರೂವಾರಿಗಳಾಗಿರುವ ಶ್ರೀ ಪ್ರವೀಣ್ ಕುಮಾರ್ ಕನ್ಯಾಳ ಮತ್ತು ಶ್ರೀ ದಾಂಡೇಲಿ ಗಣಪತಿ ಹೆಗಡೆ ಅವರಿಗೆ ಇನ್ನಷ್ಟು ಕನ್ನಡದ ಸೇವೆಯನ್ನು ಮಾಡುವ ಶಕ್ತಿ ಸಾಮರ್ಥ್ಯ ಅವಕಾಶ ಲಭಿಸಲಿ. ತಾಯಿ ಭುವನೇಶ್ವರಿ ಅಂತಹ ಅವಕಾಶವನ್ನು ಕಲ್ಪಿಸಿ ಕೊಡಲಿ ಎಂದು ಹಾರೈಸಿದರು.
ಸಮಾರಂಭದ ಉದ್ಘಾಟನೆಯನ್ನು ವಿಜಯನಗರ ಜಿಲ್ಲೆಯ ಜಿಲ್ಲಾ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಡಾ. ಎಂ. ಧರ್ಮನ ಗೌಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸಹಾಯಕ ನಗರ ಯೋಜನೆ ಅಧಿಕಾರಿ ಎನ್ ನಾಗೇಂದ್ರ ಅವರು ಸಸಿಗೆ ನೀರನ್ನು ಎರೆಯುವುದರ ಮೂಲಕ ನಡೆಸಿಕೊಟ್ಟರು.
ಮಾಜಿ ಸೈನಿಕರಾದ ಪ್ರಕಾಶಪ್ಪ ವೀರಪ್ಪ ಬಂಡಿಹಾಳ ಅವರು ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಿದರು. ದಾಂಡೇಲಿಯ ಪೂಜಾ ಅಶೋಕ್ ನಾಯಕ್, ಗದಗ ಜಿಲ್ಲೆಯ ಕಪ್ಪತ್ತಗಿರಿ ಫೌಂಡೇಶನ್ ಅಧ್ಯಕ್ಷರಾದ ಚಂದ್ರಕಲಾ ಮ. ಇಟಗಿಮಠ ಅವರು ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. ಅಕ್ಷರದ ದೀಪ ಪ್ರತಿಷ್ಠಾನದ ರೂವಾರಿ ಪ್ರವೀಣ್ ಕುಮಾರ್ ಕಲ್ಯಾಳ ಅವರು ಸಂಸ್ಥೆಯು ನಡೆದು ಬಂದ ದಾರಿಯನ್ನು ತಿಳಿಸಿದರು.
ಕವಯಿತ್ರಿ ಪಾರ್ವತಿ ಹಮ್ಮಿಗಿ ಅವರು ಪ್ರಾರ್ಥನಾ ಗೀತೆಯನ್ನು ಹಾಡಿದರು. ಕರ್ನಾಟಕ ರಾಜ್ಯ ಅಕ್ಷರದ ದೀಪ ಪ್ರತಿಷ್ಠಾನದ ಶಿರಸಿ ಜಿಲ್ಲಾ ಘಟಕದ ಅಧ್ಯಕ್ಷರಾದ ಭವ್ಯ ಹಳೆಯೂರು ಅವರು ಕಾರ್ಯಕ್ರಮ ನಿರ್ವಹಿಸಿ, ಅತಿಥಿಗಳನ್ನು ಸ್ವಾಗತಿಸಿ, ಧನ್ಯವಾದ ಸಮರ್ಪಣೆಯನ್ನು ನಡೆಸಿಕೊಟ್ಟರು.

