ಅಕ್ರಮ ಸಕ್ರಮ ಅರ್ಜಿ ವಿಲೇವಾರಿಗಳಲ್ಲಿ ಯಾವುದೇ ಲೋಪಗಳಾಗಿಲ್ಲ ಎಂದು ಉಮಾನಾಥ ಕೋಟ್ಯಾನ್ ಸ್ಪಷ್ಟಪಡಿಸಿದ್ದಾರೆ . ರಾಜಕೀಯ ಕಾರಣಗಳಿಗಾಗಿ ಕೆಲವರು ತಪ್ಪು ಮಾಹಿತಿಯನ್ನು ಹರಡುತ್ತಿದ್ದಾರೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು ಅನುಭವಿಗಳಾಗಿರುವ ವಾಸುದೇವ ನಾಯಕ್ ಅವರು ಯಾವ ಕಾರಣಕ್ಕೆ ಜನರಿಗೆ ತಪ್ಪು ಮಾಹಿತಿಯನ್ನು ನೀಡುತ್ತಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ , ಎಂದು ಅವರು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.
ಬಗರ್ ಹುಕುಂ ಅರ್ಜಿ ವಿಲೇವಾರಿ ಸೇರಿದಂತೆ ವಿವಿಧ ಅರ್ಜಿಗಳ ವಿಲೇವಾರಿ ವಿಧಾನವು ತಾಂತ್ರಿಕವಾಗಿ ವಿವಿಧ ನಿಯಮಗಳ ಅಡಿಯಲ್ಲಿ ಹಲವು ಹಂತಗಳಲ್ಲಿ ನಡೆಯುತ್ತದೆ. ಈ ಪ್ರಕ್ರಿಯೆಯಲ್ಲಿ ಯಾವುದೇ ವಿಳಂಬ ಅಥವಾ ಲೋಪವಾಗಿಲ್ಲ ಎಂದು ಶಾಸಕರು ವಿವರಿಸಿದರು. ಬಗರ್ ಹುಕುಂ ತಂತ್ರಾಂಶದ ಮೂಲಕ ನಮೂನೆ 50, 53, 57 ಅರ್ಜಿಗಳನ್ನು ವಿಲೇವಾರಿ ಮಾಡುವ ವಿಧಾನವನ್ನು ಹಂತ ಹಂತವಾಗಿ ವಿವರಿಸಲಾಯಿತು .
ಆರಂಭಿಕ ಹಂತ (VAO ಮಟ್ಟ): ಗ್ರಾಮ ಆಡಳಿತ ಅಧಿಕಾರಿಯವರು (VAO) ಮೊಬೈಲ್ ಅಪ್ಲಿಕೇಶನ್ ಮತ್ತು ಚೆಕ್ ಲಿಸ್ಟ್ ಮೂಲಕ ಸ್ಥಳ ತನಿಖೆ (ಫೀಲ್ಡ್ ವೆರಿಫಿಕೇಶನ್) ನಡೆಸಬೇಕು. ಅರ್ಜಿದಾರರ ಫೋಟೋ, ಜಮೀನಿನ ಗಡಿ ಗುರುತಿಸುವಿಕೆ, ಮಹಜರ್ ವೀಡಿಯೊ, ಇ-ಕೆವೈಸಿ ಮತ್ತು ಪಡಿತರ ಚೀಟಿ ವಿವರಗಳನ್ನು ದಾಖಲಿಸಿ, ಕಂದಾಯ ನಿರೀಕ್ಷಕರು (RI) ಮತ್ತು ADLR ಲಾಗಿನ್‌ಗೆ ರವಾನಿಸಲಾಗುತ್ತದೆ.
ಪರಿಶೀಲನೆ ಹಂತ : ಕಂದಾಯ ನಿರೀಕ್ಷಕರು ಮತ್ತು ಶಿರಸ್ತೇದಾರರ ಪರಿಶೀಲನೆಯ ನಂತರ ತಹಶೀಲ್ದಾರರ ಲಾಗಿನ್‌ಗೆ ರವಾನೆಯಾಗುತ್ತದೆ. ತಹಶೀಲ್ದಾರರು ಹಿಂದಿನ ಶಿಫಾರಸ್ಸುಗಳನ್ನು ಪರಿಶೀಲಿಸಿ ಸಮಿತಿಯವರಿಗೆ ರವಾನಿಸಬಹುದು ಅಥವಾ ತಿರಸ್ಕರಿಸಬಹುದು.
ಸಮಿತಿ ಹಂತ : ಸಮಿತಿ ಕಾರ್ಯದರ್ಶಿ ಲಾಗಿನ್ ಆದ ನಂತರ ಸಮಿತಿ ಸದಸ್ಯರ ಹಾಜರಾತಿ, ನಡಾವಳಿ ಅಪ್‌ಲೋಡ್ ಮತ್ತು ಇ-ಸಹಿ ಪ್ರಕ್ರಿಯೆ ನಡೆಯುತ್ತದೆ. ಸಮಿತಿಯವರು ವಿವರಗಳನ್ನು ವೀಕ್ಷಿಸಿ ಮುಂದಿನ ಹಂತಕ್ಕೆ ಶಿಫಾರಸ್ಸು ಮಾಡಬಹುದು ಅಥವಾ ತಿರಸ್ಕರಿಸಬಹುದು. ನಕ್ಷೆ ಮತ್ತು ಮಂಜೂರಾತಿ ಹಂತ: ಮಂಜೂರಾದ ಆದೇಶಗಳು ನೋಟಿಸ್ ಸೃಜಿಸಲು ವಿಷಯ ನಿರ್ವಾಹಕರ ಲಾಗಿನ್‌ಗೆ ಹೋಗುತ್ತದೆ. ಯಾವುದೇ ಆಕ್ಷೇಪಣೆ ಬಾರದಿದ್ದಲ್ಲಿ, ನಕ್ಷೆ ತಯಾರಿಸಲು ಮೋಜಿಣಿ ಶಾಖೆಗೆ ರವಾನಿಸಲಾಗುತ್ತದೆ. ADLR ಹಾಗೂ DDLR ಅವರು ನಕ್ಷೆ ಅನುಮೋದಿಸಿದ ನಂತರ, ಎರಡನೇ ಬಾರಿಗೆ ಸಮಿತಿಯ ಅನುಮೋದನೆಗೆ ಸಲ್ಲಿಸಲಾಗುತ್ತದೆ .
ಅಂತಿಮ ಹಂತ : ಸಮಿತಿಯಿಂದ ನಕ್ಷೆ ಅನುಮೋದನೆಯಾದ ನಂತರ ಪೋಡಿ ದುರಸ್ತಿಗಾಗಿ ಮೋಜಿಣಿ ಶಾಖೆಗೆ ಕಳುಹಿಸಲಾಗುತ್ತದೆ. ಪೋಡಿ ದುರಸ್ತಿಯಾದ ನಂತರ ಭೂಮಿ ತಂತ್ರಾಂಶದಲ್ಲಿ ಮಂಜೂರಾತಿಗೆ ಪ್ರಸ್ತಾವಿಸಿರುವ ವಿಸ್ತೀರ್ಣಕ್ಕೆ ಸರ್ಕಾರವು ಪಹಣಿ ಸೃಜಿಸುತ್ತದೆ.
ಸಾಗುವಳಿ ಚೀಟಿ : ಅರ್ಜಿದಾರರು ಭೂಮೌಲ್ಯ ಮತ್ತು ಇತರೆ ಶುಲ್ಕವನ್ನು ಪಾವತಿಸಿದ ನಂತರ ತಹಶೀಲ್ದಾರರ ಲಾಗಿನ್‌ನಲ್ಲಿ ಡಿಜಿಟಲ್ ಸಾಗುವಳಿ ಚೀಟಿ ಸೃಜಿಸಲಾಗುತ್ತದೆ ಮತ್ತು ಕಾವೇರಿ ತಂತ್ರಾಂಶದ ಮೂಲಕ ನೋಂದಣಿ ಪ್ರಕ್ರಿಯೆಯಾಗಿ ಅರ್ಜಿದಾರರ ಹೆಸರಿಗೆ ಪಹಣಿ ದಾಖಲಾಗುತ್ತದೆ ಎಂದು ಶಾಸಕರು ವಿವರಿಸಿದರು .

