ಮೂಡಬಿದ್ರೆ: ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಏಪ್ರಿಲ್ 26ರಂದು ಸಂಜೆ 4.00 ಗಂಟೆಯಿಂದ ಏಪ್ರಿಲ್ 28 ರ ಬೆಳಿಗ್ಗೆ. 07.25 ಗಂಟೆಯ ಮದ್ಯಾವಧಿಯಲ್ಲಿ ಮಾರ್ಪಾಡಿ ಗ್ರಾಮದ ಕಡಲಕೆರೆ ಇಂಡಸ್ಟ್ರೀಯಲ್ ಏರಿಯಾದ ವಿಲ್ಕರ್ಟ್ ಎಂಬ ಹೆಸರಿನ ಗೋಡೌನ್ ನ ಶಟರಿನ ಬೀಗವನ್ನು ಯಾರೋ ಕಳ್ಳರು ಮೀಟಿ ಗೋಡೌನ ಒಳಗೆ ಪ್ರವೇಶಿಸಿ ಗೋಡೌನ್ ನಲ್ಲಿದ್ದ 2 ಲ್ಯಾಪ್ಟಾಪ್ ಮತ್ತು ನಗದು ಹಣ ಇರುವ ಲಾಕರನ್ನು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿದೆ.
ಪ್ರಕರಣದ ಆರೋಪಿಗಳ ಮತ್ತು ಸೊತ್ತು ಪತ್ತೆಯ ಬಗ್ಗೆ ಮೂಡಬಿದ್ರೆ ಪೊಲೀಸ್ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ಗೋಡೌನ್ ನಲ್ಲಿ ಕಳ್ಳತನ ಮಾಡಿದ ಅಂತರ್ ಜಿಲ್ಲಾ ಆರೋಪಿಯಾದ ರಾಯಚೂರು ಚಂದ್ರು( 33 ವ) ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆರೋಪಿಯು ಈ ಮೇಲಿನ ಕೃತ್ಯವನ್ನು ಎಸಗಿರುವುದಾಗಿ ಒಪ್ಪಿಕೊಂಡು, ಗೋಡೌನ್ ನಲ್ಲಿ ಕಳ್ಳತನ ಮಾಡಿದ ಎಚ್ ಪಿ ಕಂಪನೀಯ 2 ಲ್ಯಾಪ್ ಟಾಪ್ ಮತ್ತು ಲಾಕರ್ ಹಾಗೂ ಲಾಕರ್ ನಲ್ಲಿದ್ದ ಸುಮಾರು 2,88,000/- ರೂ ನಗದು ಹಣ ಮತ್ತು ಕೃತ್ಯಕ್ಕೆ ಬಳಸಿದ ಮಹೀಂದ್ರ ಕಂಪನೀಯ ಬೊಲೇರೊ ಪಿಕಪ್ ವಾಹನವನ್ನು ಕೂಡ ಸ್ವಾಧೀನ ಪಡಿಸಿಕೊಂಡಿರುವುದಾಗಿದೆ. ಆರೋಪಿಯಿಂದ ಸ್ವಾಧೀನಪಡಿಸಿಕೊಂಡ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ ರೂ 6,50,000 /- ಆಗಬಹುದು.
ಈ ಪ್ರಕರಣದಲ್ಲಿ ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಅನುಪಮ್ ಅಗರ್ವಾಲ್, ರವರ ಮಾರ್ಗದರ್ಶನದಂತೆ ಡಿಸಿಪಿ ಸಿದ್ಧಾರ್ಥ ಗೊಯಲ್ (ಕಾ&ಸು), ರವಿಶಂಕರ್ ಡಿಸಿಪಿ (ಅ & ಸಂ) ಮತ್ತು ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಶ್ರೀಕಾಂತ್.ಕೆ ರವರ ನಿರ್ದೇಶನದಂತೆ ಮೂಡಬಿದ್ರೆ ಠಾಣಾ ಪೊಲೀಸ್ ನಿರೀಕ್ಷಕರಾದ ಸಂದೇಶ್ ಪಿ.ಜಿ ರವರ ನೇತೃತ್ವದ ತಂಡ ಪಿ.ಎಸ್.ಐ. ಶ್ರೀಮತಿ ಪ್ರತಿಭ ಕೆ.ಸಿ, ಹಾಗೂ ಎ.ಎಸ್.ಐ ರಾಜೇಶ್ ಮತ್ತು ಹೆಚ್.ಸಿ ಗಳಾದ ರಾಜೇಶ್, ಮೊಹಮ್ಮದ್ ಇಕ್ಬಾಲ್, ಮೊಹಮ್ಮದ್ ಹುಸೇನ್, ಅಕೀಲ್ ಅಹಮ್ಮದ್, ನಾಗರಾಜ್ ಲಮಾಣಿ ಮತ್ತು ಪಿ.ಸಿ ವೆಂಕಟೇಶ್ ರವರು ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.