ಹಾವಂಜೆ: 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಹಾವಂಜೆ ಗ್ರಾಮದ ಇಬ್ಬರು ಲೈನ್‌ಮ್ಯಾನ್‌ಗಳು ಹಾಗೂ ಓರ್ವ ಪೋಸ್ಟ್‌ಮ್ಯಾನ್ ಅವರ ಉತ್ತಮ ಸೇವೆಯನ್ನು ಪರಿಗಣಿಸಿ ಗ್ರಾಮಸ್ಥರು ಹಾಗೂ ಸಾರ್ವಜನಿಕರ ಪರವಾಗಿ ಸನ್ಮಾನಿಸುವ ಕಾರ್ಯಕ್ರಮವು ಆ.15ರಂದು ಕೀಳಂಜೆ ಶ್ರೀ ನಂದಿಕೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ಶ್ರೀ ನಂದಿಕೇಶ್ವರ ದೇವರಿಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ಶ್ರೀರಾಮಮೂರ್ತಿ ಪಾಡಿಗಾರ್ ಅವರು ಧ್ವಜಾರೋಹಣ ನೆರವೇರಿಸಿದರು.

ಹಾವಂಜೆ ಗ್ರಾಮದ ಹಿರಿಯ ಲೈನ್‌ಮ್ಯಾನ್ ಹಾಗೂ ಮಂದರ್ತಿ ನಿವಾಸಿ ಸೂರ್ಯ ನಾಯ್ಕ ಅವರನ್ನು ಸನ್ಮಾನಿಸಲಾಯಿತು. ಅವರು ಬ್ರಹ್ಮಾವರ ಮೆಸ್ಕಾಂ ಶಾಖೆಯಲ್ಲಿ ಕಳೆದ 26 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.
ಅದೇ ರೀತಿ ಹಾವಂಜೆ ಗ್ರಾಮದ ಲೈನ್‌ಮ್ಯಾನ್ ಪ್ರಭು ಈರಪ್ಪ ಕುದರಿ ಹಾಗೂ ಹಾವಂಜೆ ಗ್ರಾಮದ ಪೋಸ್ಟ್‌ಮ್ಯಾನ್ ಶಿವಕುಮಾರ್ (ಜಿಡಿ) ಅವರಿಗೂ ಉತ್ತಮ ಸೇವೆಗಾಗಿ ಗೌರವ ಸಲ್ಲಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತ್ರಿವರ್ಣ ವಿಶ್ವ ವೇದಿಕೆ (ರಿ.), ಕೀಳಂಜೆ ಹಾಗೂ ಶ್ರೀ ಬೊಬ್ಬರ್ಯ ಪರಿವಾರ ಮತ್ತು ಶ್ರೀ ನಂದಿಕೇಶ್ವರ ದೈವಸ್ಥಾನ ಅಭಿವೃದ್ಧಿ ಸಮಿತಿಯ ಸಂಘಟನೆಯ ಸ್ಥಾಪಕ ಅಧ್ಯಕ್ಷ ಹಾಗೂ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಸತೀಶ್ ಪೂಜಾರಿ ಕೀಳಂಜೆ ವಹಿಸಿದ್ದರು.
ಈ ಸಂದರ್ಭದಲ್ಲಿ ಆಡಳಿತ ಮುಖ್ಯಸ್ಥ ಸುಂದರ ಶೆಟ್ಟಿ, ಹಿರಿಯರಾದ ರಾಮಮೂರ್ತಿ ಭಟ್ ಪಾಡಿಗಾರ್, ಹಿರಿಯ ನಾಗರಿಕರಾದ ಮಂಜಪ್ಪ, ಸುನಿಲ್ ಗೋನಕಟ್ಟ, ಉದ್ಯಮಿ ರಾಮಚಂದ್ರ ನಾಯ್ಕ ಸೇರಿದಂತೆ ಸಂಘಟನೆಯ ಸದಸ್ಯರು, ಶ್ರೀ ಬೊಬ್ಬರ್ಯ ಮತ್ತು ನಂದಿಕೇಶ್ವರ ದೈವಸ್ಥಾನ ಅಭಿವೃದ್ಧಿ ಸಮಿತಿಯ ಸದಸ್ಯರು ಹಾಗೂ ಹಾವಂಜೆ ಮತ್ತು ಕೀಳಂಜೆ ಗ್ರಾಮದ ನಾಗರಿಕರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸೂರಜ್ ಶೆಟ್ಟಿ ಹಾವಂಜೆ ನಿರೂಪಿಸಿದರು. ಕಾರ್ಯಕ್ರಮದ ಬಳಿಕ ಭಾಗವಹಿಸಿದವರಿಗೆ ಸಿಹಿತಿಂಡಿ ಹಾಗೂ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು. ಉಪಾಹಾರದ ವ್ಯವಸ್ಥೆಗೆ ರಾಮಮೂರ್ತಿ ಭಟ್ ಪಾಡಿಗಾರ್, ಪ್ರಮೋದ್ ಶೆಟ್ಟಿ ಬಾಣಬೆಟ್ಟು ಹಾಗೂ ಶಶಿಧರ್ ಮೊಗವೀರ ಸಹಕರಿಸಿದರು. ಟೇಬಲ್ ಹಾಗೂ ಇತರ ವ್ಯವಸ್ಥೆಗಳಿಗೆ ಸುಂದರ ಪೂಜಾರಿ ಹುಬ್ಬಳ್ಳಿ ಉಚಿತವಾಗಿ ಸಹಕರಿಸಿದರು.
ಗ್ರಾಮದ ಸರ್ಕಾರಿ ನೌಕರರ ಸೇವೆಯನ್ನು ಗುರುತಿಸಿ ಗೌರವಿಸುವ ಮೂಲಕ ಸ್ವಾತಂತ್ರ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

