ಬಾಗಲಕೋಟೆ : ನದಾಫ್ ಎಂಬ ಹೆಸರಿನ ಯುವಕನ ಕಿರುಕುಳಕ್ಕೆ ಬೇಸತ್ತು ಇಲ್ಲಿನ ಸೆಕ್ಟರ್ ಸಂಖ್ಯೆ ೪೮ ರಲ್ಲಿ ವಾಸವಿದ್ದ ೧೯ ವರ್ಷದ ಭೂಮಿಕಾ ತಿಪ್ಪಣ್ಣವರ ಎಂಬ ಯುವತಿ ನೇಣು ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದು ‘ಲವ್ ಜಿಹಾದ್’ ಘಟನೆ ಎಂದು ಸ್ಥಳೀಯ ಹಿಂದುತ್ವವಾದಿ ಸಂಘಟನೆಗಳು ಆರೋಪಿಸಿವೆ.
ಭೂಮಿಕಾ ಮತ್ತು ಆಟೋ ಚಾಲಕ ಡೋಂಗ್ರಿಸಾಬ್ ನದಾಫ್ ನಡುವೆ ಪ್ರೇಮವಿತ್ತು ಎಂದು ಹೇಳಲಾಗುತ್ತಿದೆ. ಭೂಮಿಕಾ ಅವಳ ಅತ್ತೆ ಲಕ್ಷ್ಮಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ನದಾಫ್ ನಮ್ಮ ಮನೆಯ ಮುಂದೆ ಆಟೋ ತಂದು ನಿಲ್ಲಿಸುತ್ತಿದ್ದ. ಆನಂತರ ಭೂಮಿಕಾಗೆ ಫೋನ್ ಮಾಡಿ ಮಾತನಾಡಲು ಪೀಡಿಸುತ್ತಿದ್ದ. ರಾತ್ರಿ ೧೨-೧ ಗಂಟೆಯವರೆಗೆ ಅವರು ಮಾತನಾಡುತ್ತಿದ್ದರು. ‘ಮದುವೆ ಮಾಡಿಕೊಳ್ಳುವುದು ಬೇಡ; ಆದರೆ ನನ್ನ ಜೊತೆಯಲ್ಲೇ ಇರು’ ಎಂದು ಹೇಳಿ ಅವಳಿಗೆ ಕಿರುಕುಳ ನೀಡುತ್ತಿದ್ದ. ಅವನ ಕಾಟಕ್ಕೆ ಬೇಸತ್ತೇ ಅವಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಮಗೆ ನ್ಯಾಯ ಬೇಕು, ಎಂದು ಅವರು ಆಗ್ರಹಿಸಿದ್ದಾರೆ.
ಹಿಂದೂ ಜಾಗರಣ ವೇದಿಕೆಯ ಮುಖಂಡ ಕುಮಾರಸ್ವಾಮಿ ಹಿರೇಮಠ ಅವರು ಈ ಬಗ್ಗೆ ಮಾತನಾಡಿ, ಇದು ಸಂಪೂರ್ಣವಾಗಿ ‘ಲವ್ ಜಿಹಾದ್’ ಪ್ರಕರಣವಾಗಿದೆ. ಭೂಮಿಕಾಗೆ ಇಸ್ಲಾಂ ಧರ್ಮ ಸ್ವೀಕರಿಸುವಂತೆ ನದಾಫ್ ಪ್ರೇರೇಪಿಸುತ್ತಿದ್ದ. ರಂಜಾನ್ ಸಮಯದಲ್ಲಿ ಆಕೆಗೆ ಹಿಜಾಬ್ (ತಲೆ ಮತ್ತು ಕುತ್ತಿಗೆ ಮುಚ್ಚುವ ವಸ್ತ್ರ) ಹಾಗೂ ಬುರ್ಖಾ ಧರಿಸಿ ಸುತ್ತಾಡಿಸುತ್ತಿದ್ದ, ಎಂದು ಕುಮಾರಸ್ವಾಮಿ ಹೇಳಿದ್ದಾರೆ.

