ನೂಡಲ್ಸ್ ಸೇವಿಸಿದ ಬಳಿಕ ದುರಂತ? ದಂಪತಿ ಹಾಗೂ ಮೂವರು ಮಕ್ಕಳು ಮೃತ್ಯು

0
69

ಒಂದೇ ಕುಟುಂಬದ ದಂಪತಿ ಹಾಗೂ ಅವರ ಮೂವರು ಮಕ್ಕಳು ಸೇರಿದಂತೆ ಐವರು ಶನಿವಾರ (ಅ. 17) ಬೆಳಗ್ಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಘಟನೆಯು ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ನಾಗ್ಲಾ ಶ್ರೀ ಪಾದಮ್ ಗ್ರಾಮದಲ್ಲಿ ಸಂಭವಿಸಿದೆ.

ಮೃತರನ್ನು ಮಹೇಶ್ (37), ಅವರ ಪತ್ನಿ ಲಲಿತಾ (35), ಪುತ್ರರಾದ ಸಾಕ್ಷತ್ (3) ಮತ್ತು ಲಡ್ಡು (11) ಹಾಗೂ ಪುತ್ರಿ ಮಿಷ್ಟಿ (7) ಎಂದು ಗುರುತಿಸಲಾಗಿದೆ.

ಮಾಹಿತಿಯ ಪ್ರಕಾರ, ಕುಟುಂಬದ ಸದಸ್ಯರು ಶುಕ್ರವಾರ ರಾತ್ರಿ ಚಹಾ ಮತ್ತು ನೂಡಲ್ಸ್ ಸೇವಿಸಿದ್ದರು ಎನ್ನಲಾಗಿದೆ. ಮರುದಿನ ಬೆಳಗ್ಗೆ ಐವರೂ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆಹಾರ ವಿಷಬಾಧೆಯಿಂದ ಸಾವು ಸಂಭವಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದರೂ, ಈ ಬಗ್ಗೆ ಅಧಿಕೃತ ದೃಢೀಕರಣವಾಗಿಲ್ಲ.

ಘಟನೆಯ ಕುರಿತು ಮಾಹಿತಿ ಲಭಿಸಿದ ತಕ್ಷಣ ರಾಬುಪುರ ಪೊಲೀಸ್ ಠಾಣೆಯ ಪೊಲೀಸರು ಹಾಗೂ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಅಂಬ್ಯುಲೆನ್ಸ್ ಮತ್ತು ಆಹಾರ ಸುರಕ್ಷತಾ ಇಲಾಖೆಯ ತಂಡವೂ ಸ್ಥಳಕ್ಕೆ ಆಗಮಿಸಿದೆ.

ವಿಧಿವಿಜ್ಞಾನ ತಜ್ಞರ ತಂಡವು ಘಟನಾ ಸ್ಥಳವನ್ನು ಪರಿಶೀಲಿಸಿ ವೈಜ್ಞಾನಿಕ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಸಾವಿನ ನಿಖರ ಕಾರಣ ತಿಳಿಯಲು ತನಿಖೆ ಮುಂದುವರಿದಿದೆ.

ಒಂದೇ ಕುಟುಂಬದ ಐವರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಘಟನೆ ಗ್ರಾಮದಲ್ಲಿ ದುಃಖ ಹಾಗೂ ಆತಂಕಕ್ಕೆ ಕಾರಣವಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಮತ್ತು ತನಿಖೆಯ ಬಳಿಕವೇ ಸಾವಿನ ಹಿಂದಿನ ನಿಜವಾದ ಕಾರಣ ತಿಳಿದುಬರಬೇಕಿದೆ.