ಪರವಾನಗಿ ಇಲ್ಲದೆ ಜಾನುವಾರು ಸಾಗಾಟ : ಪಿಕಪ್ ವಾಹನ ವಶ, ನಾಲ್ವರ ವಿರುದ್ಧ ಪ್ರಕರಣ

0
80

ವಿಟ್ಲ : ಸೂಕ್ತ ದಾಖಲೆ ಹಾಗೂ ಅಧಿಕೃತ ಪರವಾನಗಿ ಇಲ್ಲದೆ ಜಾನುವಾರುಗಳನ್ನು ಸಾಗಿಸುತ್ತಿದ್ದ ಪಿಕಪ್ ವಾಹನವನ್ನು ವಿಟ್ಲ ಪೊಲೀಸರು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕರೋಪಾಡಿ ಮೂಲದ ಒ.ಪಿ. ಅಬ್ದುಲ್ಲಾ (45) ಎಂಬವರು ಪಿಕಪ್ ವಾಹನದಲ್ಲಿ ಸುಬ್ರಹ್ಮಣ್ಯ (55) ಅವರೊಂದಿಗೆ ಜಾನುವಾರುಗಳನ್ನು ಸಾಗಿಸುತ್ತಿದ್ದ ವೇಳೆ ಪೊಲೀಸರು ತಡೆದು ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಜಾನುವಾರುಗಳ ಸಾಗಾಟಕ್ಕೆ ಅಗತ್ಯವಾದ ಅಧಿಕೃತ ಪರವಾನಗಿ ಹಾಗೂ ಸೂಕ್ತ ದಾಖಲೆಗಳು ಇಲ್ಲದಿರುವುದು ಬೆಳಕಿಗೆ ಬಂದಿದೆ.

ವಿಚಾರಣೆ ವೇಳೆ ಉಷಾ ಎಸ್. ಶೆಟ್ಟಿ ಹಾಗೂ ಗುರುತೇಜ ಅವರ ಸೂಚನೆಯಂತೆ ಜಾನುವಾರುಗಳನ್ನು ಸಾಗಿಸುತ್ತಿರುವುದಾಗಿ ಇಬ್ಬರು ತಿಳಿಸಿದ್ದಾರೆ ಎನ್ನಲಾಗಿದೆ.

ಪೊಲೀಸರು ಜಾನುವಾರುಗಳು ಹಾಗೂ ಸಾಗಾಟಕ್ಕೆ ಬಳಸಿದ್ದ ಪಿಕಪ್ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಒ.ಪಿ. ಅಬ್ದುಲ್ಲಾ, ಸುಬ್ರಹ್ಮಣ್ಯ, ಉಷಾ ಎಸ್. ಶೆಟ್ಟಿ ಮತ್ತು ಗುರುತೇಜ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಮುಂದುವರಿಸಿದ್ದಾರೆ.