- ತಂದೆ-ತಾಯಿಯ ಜಗಳಕ್ಕೆ ಮುಗ್ಧ ಬಾಲಕ ಬಲಿ!
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಂದೆಯೇ ತನ್ನ ಅಪ್ರಾಪ್ತ ಮಗನ ಮೇಲೆ ಅರೆಕೋಲಿನಿಂದ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆಗೈದಿರುವ ಆಘಾತಕಾರಿ ಘಟನೆ ನವೆಂಬರ್ 15ರ ಭಾನುವಾರ ಬೆಳಗಿನ ಜಾವ ಕುಣಿಗಲ್ ತಾಲೂಕಿನ ಹುತ್ರಿದುರ್ಗ ಹೋಬಳಿಯ ಚೌಡನಾಯಕನಪಾಳ್ಯ ಗ್ರಾಮದಲ್ಲಿ ನಡೆದಿದೆ.
ಹತ್ಯೆಯಾದ ಬಾಲಕನನ್ನು ಗ್ರಾಮದ ನಿವಾಸಿ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಸುನೀಲ್ ಗೌಡ (16) ಎಂದು ಗುರುತಿಸಲಾಗಿದೆ. ಮಗನ ಹತ್ಯೆ ಮಾಡಿದ ಆರೋಪದ ಮೇಲೆ ತಂದೆ ನಂಜೇಗೌಡನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೌಟುಂಬಿಕ ಕಲಹವೇ ಘಟನೆಗೆ ಕಾರಣ?
ನಂಜೇಗೌಡ ಮತ್ತು ಆತನ ಪತ್ನಿಯ ನಡುವೆ ಕ್ಷುಲ್ಲಕ ಕಾರಣಕ್ಕೆ ಮನೆಯಲ್ಲಿ ಜಗಳ ನಡೆದಿತ್ತು ಎನ್ನಲಾಗಿದೆ. ಇದರಿಂದ ತೀವ್ರವಾಗಿ ಕುಪಿತಗೊಂಡ ನಂಜೇಗೌಡ, ಭಾನುವಾರ ಬೆಳಗಿನ ಜಾವ ಸುಮಾರು 3:30ರ ವೇಳೆಗೆ ಪತ್ನಿಯನ್ನು ಮನೆಯಿಂದ ಹೊರಗೆ ಕಳುಹಿಸಿ ಮನೆಯ ಬಾಗಿಲಿಗೆ ಒಳಗಿನಿಂದ ಚಿಲಕ ಹಾಕಿಕೊಂಡಿದ್ದಾನೆ. ಪತ್ನಿ ಎಷ್ಟೇ ಮನವಿ ಮಾಡಿದರೂ ಬಾಗಿಲು ತೆರೆಯದೆ ಹಠಮಾರಿ ವರ್ತನೆ ತೋರಿದ್ದಾನೆ.
ಇತ್ತ ಬೆಳಗ್ಗೆ ಸುಮಾರು 6 ಗಂಟೆಗೆ ಶಾಲೆಗೆ ತೆರಳಲು ಸಿದ್ಧನಾಗಿದ್ದ ಸುನೀಲ್ ಗೌಡ, ಬಾಗಿಲು ತೆರೆಯುವಂತೆ ತಂದೆಯನ್ನು ಕೇಳಿಕೊಂಡಿದ್ದಾನೆ. ಆದರೆ ತಂದೆ ಬಾಗಿಲು ತೆರೆಯಲು ನಿರಾಕರಿಸಿದ್ದಾನೆ. ಕೆಲವೇ ಕ್ಷಣಗಳಲ್ಲಿ ಮನೆಯೊಳಗಿನಿಂದ ಸುನೀಲ್ ಗೌಡ ‘ಅಮ್ಮ’ ಎಂದು ಜೋರಾಗಿ ಕಿರುಚಿಕೊಂಡಿದ್ದಾನೆ. ಮಗನ ಕೂಗು ಕೇಳಿ ಆತಂಕಗೊಂಡ ತಾಯಿ ಮತ್ತೆ ಬಾಗಿಲು ತೆರೆಯುವಂತೆ ಪತಿಯನ್ನು ಒತ್ತಾಯಿಸಿದ್ದಾಳೆ. ಗ್ರಾಮಸ್ಥರೂ ಬಾಗಿಲು ತೆರೆಯುವಂತೆ ಮನವಿ ಮಾಡಿದರೂ ನಂಜೇಗೌಡ ಸ್ಪಂದಿಸಿಲ್ಲ.
ಬಾಗಿಲು ಒಡೆದು ಒಳನುಗ್ಗಿದ ಪೊಲೀಸರು
ಘಟನೆಯ ಗಂಭೀರತೆ ಅರಿತ ಕುಣಿಗಲ್ ವೃತ್ತ ನಿರೀಕ್ಷಕ ಮಾದ್ಯಾನಾಯಕ್ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಪೊಲೀಸರು ಬಾಗಿಲು ತೆರೆಯುವಂತೆ ಸೂಚಿಸಿದರೂ ನಂಜೇಗೌಡ ಬಾಗಿಲು ತೆರೆಯಲು ಮುಂದಾಗಿಲ್ಲ. ಕೊನೆಗೆ ಪೊಲೀಸರು ಕಿಟಕಿ ಹಾಗೂ ಬಾಗಿಲು ಒಡೆದು ಮನೆಯೊಳಗೆ ಪ್ರವೇಶಿಸಿದಾಗ ಸುನೀಲ್ ಗೌಡ ರಕ್ತದ ಮಡುವಿನಲ್ಲಿ ಬಿದ್ದಿರುವುದು ಪತ್ತೆಯಾಗಿದೆ. ಅಷ್ಟರಲ್ಲಾಗಲೇ ಬಾಲಕ ಮೃತಪಟ್ಟಿದ್ದ ಎನ್ನಲಾಗಿದೆ.
ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿ ನಂಜೇಗೌಡನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದೆ.
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಂದೆಯಿಂದಲೇ ಅಪ್ರಾಪ್ತ ಮಗನ ಹತ್ಯೆಯಾಗಿರುವ ಈ ಘಟನೆ ಇಡೀ ಗ್ರಾಮದಲ್ಲಿ ತೀವ್ರ ಆಘಾತ ಮತ್ತು ದುಃಖ ಮೂಡಿಸಿದೆ.

